ಚಿಕ್ಕಮಗಳೂರು: ಇಡೀ ಊರಿನ ಜನರೇ ಅನಾರೋಗ್ಯಕ್ಕೆ ತುತ್ತಾಗಿರುವ ದೇವಗೊಂಡನಹಳ್ಳಿಯಲ್ಲಿ ಆರೋಗ್ಯ ಇಲಾಖೆ ಗುರುವಾರ ಜ್ವರ ತಪಾಸಣೆಗೆ ಕ್ಲಿನಿಕ್ ತೆರೆದಿದೆ. ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಭೇಟಿ ನೀಡಿ ಜನರ ಆರೋಗ್ಯ ವಿಚಾರಿಸಿದರು. ಸಾವಿರಕ್ಕೂ ಹೆಚ್ಚು ಜನರಿಗೆ ಅನಾರೋಗ್ಯ ಕಾಡಿದೆ ಎಂದು ಗ್ರಾಮಸ್ಥರು ಹೇಳಿಕೊಂಡರು.
ದೇವಗೊಂಡನಹಳ್ಳಿಯಲ್ಲಿ ಇಡೀ ಊರನ್ನೇ ಕಾಡುತ್ತಿರುವ ಅನಾರೋಗ್ಯದ ಕುರಿತು ‘ಪ‍್ರಜಾವಾಣಿ’ ಗುರುವಾರ ವರದಿ ಪ್ರಕಟಿಸಿತ್ತು. ಗುರುವಾರ ಬೆಳಿಗ್ಗೆಯೇ ಆರೋಗ್ಯ ಇಲಾಖೆ ಜ್ವರ ಕ್ಲಿನಿಕ್ ತೆರೆದಿದ್ದು, ಆರೋಗ್ಯ ತಪಾಸಣೆ ಮತ್ತು ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದೆ.
ಬೆಂಗಳೂರಿನಿಂದ ಬಂದಿರುವ ಆರೋಗ್ಯ ಇಲಾಖೆ ತಂಡ ಕೂಡ ಲಾರ್ವ ಮಾದರಿ ಸಂಗ್ರಹಿಸಿತು.
‘ಒಂದೂವರೆ ತಿಂಗಳಿಂದ ಇಡೀ ಊರಿನ ಜನರೇ ಅನಾರೋಗ್ಯ ಸಮಸ್ಯೆ ಎದುರಿಸಿದ್ದೇವೆ. ಆರೋಗ್ಯ ಇಲಾಖೆ ಅಧಿಕಾರಿಗಳು ಯಾರೂ ಇತ್ತ ಬಂದಿಲ್ಲ. ಸಾವಿರಕ್ಕೂ ಹೆಚ್ಚು ಜನ ಒಳ ಮತ್ತು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದೇವೆ. ವಿಪರೀತ ಜ್ವರ ಮತ್ತು ಕೈಕಾಲು ನೋವಿನಿಂದ ಬಳಲಿದ್ದೇವೆ. ಪತ್ರಿಕೆಯಲ್ಲಿ ವರದಿ ಪ್ರಕಟವಾದ ಬಳಿಕ ಗುರುವಾರ ಆರೋಗ್ಯ ಇಲಾಖೆ ಅಧಿಕಾರಿಗಳು ಬಂದಿದ್ದಾರೆ’ ಎಂದು ಗ್ರಾಮಸ್ಥರು ವಿವರಿಸಿದರು.
ಇಷ್ಟು ದೊಡ್ಡ ಸಮಸ್ಯೆಯಾದರೂ ಯಾರ ಗಮನಕ್ಕೂ ಬಾರದಿರುವುದು ಆರೋಗ್ಯ ಇಲಾಖೆ ಬೇಜವಾಬ್ದಾರಿ ಎಂದು ಸಿ.ಟಿ.ರವಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.