ಚಿಕ್ಕಮಗಳೂರು: ಕೆಫೆ ಕಾಫಿ ಡೇ(ಸಿಸಿಡಿ) ಸಂಸ್ಥಾಪಕ, ಉದ್ಯಮಿ ದಿವಂಗತ ಸಿದ್ದಾರ್ಥ್ ಅವರ ತಂದೆ ಗಂಗಯ್ಯ ಹೆಗ್ಡೆ (95) ಕಾಫಿ ಕೃಷಿಗೆ ಹೊಸ ಆಯಾಮ ತಂದುಕೊಟ್ಟು ಕಾಫಿನಾಡಿನಲ್ಲಿ ಮನೆಮಾತಾಗಿದ್ದರು.
ಗಂಗಯ್ಯ 1924 ಫೆ. 6ರಂದು ಜನಿಸಿದರು. ಎನ್.ಆರ್.ಪುರ ತಾಲ್ಲೂಕಿನ ಬಾಳೆಹೊನ್ನೂರು ಬಳಿ ಶಂಕರಕೂಡಿಗೆ ಅವರ ಹುಟ್ಟೂರು. ವೀರಪ್ಪ ಹೆಗ್ಡೆ ಮತ್ತು ಶೇಷಮ್ಮ ದಂಪತಿ ಪುತ್ರ. ಈ ದಂಪತಿಗೆ ಕೇಶವ ಹೆಗ್ಡೆ, ಗಂಗಯ್ಯ ಹೆಗ್ಡೆ ಇಬ್ಬರು ಪುತ್ರರು.ಗಂಗಯ್ಯ ಅವರ ಪತ್ನಿ ವಾಸಂತಿ. ಈ ದಂಪತಿಯ ಪುತ್ರ ಸಿದ್ದಾರ್ಥ್. ಮಾಜಿಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಪುತ್ರಿ ಮಾಳವಿಕಾ ಅವರನ್ನು ಸಿದ್ದಾರ್ಥ್ ಮದುವೆಯಾಗಿದ್ದರು. ಈ ದಂಪತಿಗೆ ಅಮರ್ತ್ಯ, ಇಶಾನ್ ಪುತ್ರರು ಇದ್ದಾರೆ.
ಗಂಗಯ್ಯ ನಾಲ್ಕು ವರ್ಷದವರಿದ್ದಾಗ ಅವರ ತಂದೆ ಕಾಯಿಲೆಯಿಂದ ತೀರಿಕೊಂಡಿದ್ದರು. ಗಂಗಯ್ಯ ಮನೆಯಲ್ಲೇ ಪ್ರಾಥಮಿಕ ಶಿಕ್ಷಣ ಪಡೆದಿದ್ದರು. ಮೂಡಿಗೆರೆ, ಕೊಪ್ಪದಲ್ಲಿ ಮಾಧ್ಯಮಿಕ ಶಿಕ್ಷಣ, ಚಿಕ್ಕಮಗಳೂರಿನಲ್ಲಿ ಹೈಸ್ಕೂಲು ಶಿಕ್ಷಣ ಪೂರೈಸಿದ್ದರು. ಶಿವಮೊಗ್ಗದಲ್ಲಿ ಇಂಟರ್ ಮೀಡಿಯಟ್ ಮುಗಿಸಿದ್ದರು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪಡೆದಿದ್ದರು.
ಮೂಡಿಗೆರೆ ತಾಲ್ಲೂಕಿನ ಚೇತನಹಳ್ಳಿಯಲ್ಲಿ1956ರಲ್ಲಿ ಕಾಫಿ ಎಸ್ಟೇಟ್ ಖರೀದಿಸಿ ಅಲ್ಲಿಯೇ ನೆಲೆಯೂರಿದರು. ತೋಟಗಳನ್ನು ವಿಸ್ತರಿಸಿದರು. ಕಾಫಿ ಕೃಷಿಯನ್ನು ತಬ್ಬಿಕೊಂಡು ಯಶಸ್ಸಿನ ಹಾದಿಯಲ್ಲಿ ದಾಪುಗಾಲಿಟ್ಟಿದ್ದರು.ವಿದೇಶಗಳನ್ನು ಸುತ್ತಿ ಅಲ್ಲಿನ ಕೃಷಿ ಕ್ಷೇತ್ರಗಳಲ್ಲಿ ಪ್ರಯೋಗ, ಪ್ರಯತ್ನಗಳನ್ನು ತಿಳಿದುಕೊಂಡಿದ್ದರು.
‘ಗಂಗಯ್ಯ ಹೆಗ್ಡೆ ಅವರು ಕಾರ್ಮಿಕರಿಗೆ ಎಂದೂ ಗತ್ತುಗೈರತ್ತು ಮಾಡಿಲ್ಲ. ತೋಟದ ಮಾಲೀಕ ಎಂಬ ಗರ್ವ ಅವರಿಗಿರಲಿಲ್ಲ. ಕಾರ್ಮಿಕರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು’ ಎಂದು ಒಡನಾಡಿಗಳು ನೆನಪಿಸಿಕೊಳ್ಳುತ್ತಾರೆ.
‘ಗಂಗಯ್ಯ ಅವರು 1942ರಲ್ಲಿ ಸ್ವಾತಂತ್ರ್ಯ ಚಳವಳಿಯ ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ಶಿವಮೊಗ್ಗದಲ್ಲಿ ವಿದ್ಯಾರ್ಥಿ ಆಂದೋಲನದಲ್ಲಿ ಸಕ್ರಿಯರಾಗಿ ಕಾರ್ಯನಿರ್ವಹಿಸಿದ್ದರು’ ಎಂದು ಅವರ ಒಡನಾಡಿ ಪ್ರೊ.ಸಿ.ಕೆ.ಸುಬ್ಬರಾಯ ನೆನಪಿಸಿಕೊಂಡರು.
ಗಂಗಯ್ಯ ಅವರ ಹೆಸರಿನಲ್ಲಿ ಚಿಕ್ಕಮಗಳೂರಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯೊಂದನ್ನು ನಿರ್ಮಿಸಬೇಕು ಎಂದು ಸಿದ್ದಾರ್ಥ್ ಕನಸು ಕಂಡಿದ್ದರು. ಶಂಕುಸ್ಥಾಪನೆಯೂ ನೆರವೇರಿತ್ತು. ಸಿದ್ದಾರ್ಥ್ ಅವರು ಜುಲೈ ಅಂತ್ಯದಲ್ಲಿ ನಿಗೂಢವಾಗಿ ಇಹಲೋಕ ತ್ಯಜಿಸಿದ್ದರು.
ಅನಾರೋಗ್ಯ ಪೀಡಿತರಾಗಿ ಮೈಸೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಗಂಗಯ್ಯ ಅವರಿಗೆ ಸಿದ್ದಾರ್ಥ್ ಸಾವಿನ ವಿಷಯ ತಿಳಿದಿಲ್ಲ. ಇದೇ 25ರಂದು ಗಂಗಯ್ಯ ಅವರು ನಿಧನರಾಗಿದ್ದು, ಕಾಫಿನಾಡಿನಲ್ಲಿ ದುಗುಡ ಮನೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.