ಆಲ್ದೂರು: ಆವತಿ, ವಸ್ತಾರೆ, ಆಲ್ದೂರು ಹೋಬಳಿಗಳ ವ್ಯಾಪ್ತಿಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಕಾಫಿ ಗಿಡಗಳಲ್ಲಿ ಕಾಯಿಗಳು ಉದುರಲು ಆರಂಭಿಸಿದೆ. ಕಾಳು ಮೆಣಸಿನ ಬಳ್ಳಿಗಳಲ್ಲೂ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದು, ಬೆಳೆಗಾರರಲ್ಲಿ ಆತಂಕ ಮನೆ ಮಾಡಿದೆ.
‘ಉತ್ತಮ ಬೆಲೆ ಇದ್ದರೂ, ಮಳೆಹಾನಿಯಿಂದ ಬೆಳೆ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ’ ಎಂದು ಆಲ್ದೂರು ಹೋಬಳಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಸಿ. ಸುರೇಶ್ ಬೇಸರ ವ್ಯಕ್ತಪಡಿಸಿದರು.
‘ಗಿಡದಲ್ಲಿ ಚೆನ್ನಾಗಿ ಬಲಿಯುತ್ತಿದ್ದ ಕಾಫಿ ಕಾಯಿಗಳು ರಭಸದ ಮಳೆಗೆ ನೆಲಕ್ಕೆ ಉದುರುತ್ತಿವೆ. ಸರ್ಕಾರ ಹಾಗೂ ಕಾಫಿ ಮಂಡಳಿ ಬೆಳೆಗಾರರ ನೆರವಿಗೆ ಬಂದು ನಷ್ಟವಾಗಿರುವ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿ, ವಿಶೇಷ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಬೇಕು’ ಎಂದು ಬೆಳಗಾರರ ಒಕ್ಕೂಟದ ನಿರ್ದೇಶಕ ಅಶೋಕ್ ಸೂರಪ್ಪನಹಳ್ಳಿ ಆಗ್ರಹಿಸಿದರು.
‘ಮಳೆಯಿಂದ ಅರೇಬಿಕಾ, ಕಾವೇರಿ ತಳಿಗಳು ಹೆಚ್ಚಾಗಿ ರೋಗಕ್ಕೆ ತುತ್ತಾಗುತ್ತಿವೆ. ರೋಬಸ್ಟಾ ತಳಿಗೆ ಉತ್ತಮ ಬೆಲೆ ಇದ್ದರೂ, ಫಸಲು ಇಲ್ಲದೆ ರೈತರು ಕೈಕೈ ಹೊಸುಕಿಕೊಳ್ಳುವಂತಾಗಿದೆ. ಮಳೆಯಿಂದ ಕಾಫಿ ಗಿಡ ಮತ್ತು ಕಾಳು ಮೆಣಸಿನ ಬಳ್ಳಿಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಕಾಫಿ ಮಂಡಳಿ ಮತ್ತು ಸರ್ಕಾರ ರೈತರಿಗೆ ಪರಿಹಾರ ಒದಗಿಸಬೇಕು’ ಎಂದು ಕಾಫಿ ಬೆಳೆಗಾರರಾದ, ರಾಜೀವ್, ಕೆರೆಮಕ್ಕಿ ಮಹೇಶ್, ರವಿಕುಮಾರ್ ಎಚ್. ಎಲ್ ಮನವಿ ಮಾಡಿದರು.
ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಮಳೆಯಾಗಿರುವುದರಿಂದ ಕಾಫಿ ತೋಟಗಳಲ್ಲಿ ತೇವಾಂಶ ಹೆಚ್ಚಿ, ಕಾಫಿ ಗಿಡಗಳಲ್ಲಿ ರೋಗ ಕಾಣಿಸಿಕೊಂಡಿದೆ. ಮಳೆ ಕಡಿಮೆಯಾದ ನಂತರ ಬೆಳೆಹಾನಿ ಸಮೀಕ್ಷೆ ನಡೆಯಲಿದೆ. ಸದ್ಯ ಶೇ 33ರಷ್ಟು ಬೆಳೆ ನಷ್ಟವಾದರೆ ಒಂದು ಹೆಕ್ಟರ್‌ಗೆ ₹18ಸಾವಿರದಷ್ಟು ಪರಿಹಾರ ಸಿಗುತ್ತಿದೆ. ಇದು ಹೆಕ್ಟೇರ್‌ಗೆ ಕನಿಷ್ಠ ₹50 ಸಾವಿರವಾದರೂ ಲಭಿಸಿದರೆ ಬೆಳೆಗಾರರಿಗೆ ಅನುಕೂಲವಾಗುತ್ತದೆ. ಈಗಾಗಲೇ ಈ ಬಗ್ಗೆ ಸಂಸದರ ಮೂಲಕ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ’ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಚ್.ಟಿ. ಮೋಹನ್ ಕುಮಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.