ADVERTISEMENT

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಅಣ್ಣಾಮಲೈ ‘ಖದರ್‌’ ಹಚ್ಚಹಸಿರು

ಬಿ.ಜೆ.ಧನ್ಯಪ್ರಸಾದ್
Published 4 ಜೂನ್ 2019, 4:27 IST
Last Updated 4 ಜೂನ್ 2019, 4:27 IST
ಅಣ್ಣಾಮಲೈ ಸೈಕ್ಲಿಂಗ್‌ ಯಾನ
ಅಣ್ಣಾಮಲೈ ಸೈಕ್ಲಿಂಗ್‌ ಯಾನ   

ಚಿಕ್ಕಮಗಳೂರು: ಐಪಿಎಸ್‌ ಅಧಿಕಾರಿ ಹುದ್ದೆಗೆ ಮಂಗಳವಾರ ರಾಜೀನಾಮೆ ಸಲ್ಲಿಸಿರುವ ಕೆ.ಅಣ್ಣಾಮಲೈ ಜಿಲ್ಲೆಯಲ್ಲಿ ಎಸ್ಪಿ ಆಗಿದ್ದಾಗ ತಮ್ಮದೇ ಆದ ಛಾಪು ಮೂಡಿಸಿ ಜನರ ಪ್ರೀತಿಗೆ ಪಾತ್ರರಾಗಿದ್ದರು.

ಉಡುಪಿಯಿಂದ ಚಿಕ್ಕಮಗಳೂರಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ವರ್ಗಾವಣೆಯಾಗಿದ್ದ ಅವರು ಎರಡು ವರ್ಷ ಮೂರು ತಿಂಗಳು (2016ರ ಆಗಸ್ಟ್‌ 4ರಿಂದ 2018ರ ಅಕ್ಟೋಬರ್‌ 16) ಈ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದರು. ನಡೆನುಡಿ, ಕಾರ್ಯವೈಖರಿ, ಜನಸ್ನೇಹಿ ವ್ಯಕ್ತಿತ್ವದ ಮೂಲಕ ಜಿಲ್ಲೆಯಲ್ಲಿ ಮನೆಮಾತಾಗಿದ್ದರು. ಮಕ್ಕಳಿಂದ ಮುದುಕರವರೆಗೂ ಬಹುತೇಕ ಎಲ್ಲರಿಗೂ ಅಣ್ಣಾಮಲೈ ಹೆಸರು ಗೊತ್ತಿತ್ತು.

ದಂಧೆಗಳಿಗೆ ಕಡಿವಾಣ

ADVERTISEMENT

ಜಿಲ್ಲೆಯಲ್ಲಿ ಮಟ್ಕಾ, ಮೀಟರ್‌ ಬಡ್ಡಿ, ಇಸ್ಪೀಟು, ಬೆಟ್ಟಿಂಗ್‌ ಮಾಫಿಯಾ, ಮರಳು ದಂಧೆಗಳಿಗೆ ಕಡಿವಾಣ ಹಾಕಿದರು. ಬೈಕ್‌ ಸವಾರರು ಹೆಲ್ಮೆಟ್‌ ಧರಿಸುವುದನ್ನು ಕಡ್ಡಾಯಗೊಳಿಸಿದರು. ಕಳವು, ಹತ್ಯೆ ಮೊದಲಾದ ಪ್ರಕರಣಗಳನ್ನು ಭೇದಿಸಿದಾಗ ಪೊಲೀಸರಿಗೆ ಇನಾಮು ನೀಡಿ ಪ್ರೋತ್ಸಾಹಿಸುವ ಪರಿಪಾಠ ಇಟ್ಟುಕೊಂಡಿದ್ದರು.

ಬೊಜ್ಜು ಕರಗಿಸಿದರೆ ಕೋರಿಕೆ ಸ್ಥಳಕ್ಕೆ ವರ್ಗಾವಣೆ ಭಾಗ್ಯ

ಕಾನ್‌ಸ್ಟೆಬಲ್‌ಗಳು ಬೊಜ್ಜು(ಹೊಟ್ಟೆ) ಕರಗಿಸಿಕೊಂಡರೆ ಕೋರಿಕೆ ಸ್ಥಳಕ್ಕೆ ವರ್ಗಾವಣೆ ಮಾಡುವುದಾಗಿ ಹೇಳಿ ಕಾರ್ಯಗತ ಮಾಡಿದರು. ಬೊಜ್ಜು ಕರಗಿಸಲು ಕಾಲಾವಕಾಶ ನೀಡಿದರು. ಬೊಜ್ಜು ಕರಗಿಸಿದವರಿಗೆ ಕೇಳಿದ ಸ್ಥಳಕ್ಕೆ ವರ್ಗಾಯಿಸಿ ಹೊಸ ‘ಮುನ್ನುಡಿ’ ಹಾಕಿದರು.

ಪೊಲೀಸ್‌ ‘ಖದರ್‌’

ಚಿಕ್ಕಮಗಳೂರು ತಾಲ್ಲೂಕಿನ ಮೂಗ್ತಿಹಳ್ಳಿ ಗ್ರಾಮಸ್ಥರು ಒಮ್ಮೆ ಪಿಎಸ್‌ಐವೊಬ್ಬರನ್ನು ಮನೆಯಲ್ಲಿ ಕೂಡಿಹಾಕಿ, ರಸ್ತೆ ತಡೆ ಮಾಡಿದಾಗ ಸ್ಥಳಕ್ಕೆ ಧಾವಿಸಿ ಪೊಲೀಸ್‌ ‘ಖದರ್‌’ ಪ್ರದರ್ಶಿಸಿದ್ದರು.

ಪರಿಸ್ಥಿತಿ ನಿರ್ವಹಣೆ ಜಾಣ್ಮೆ

2017ರ ದತ್ತ ಜಯಂತಿ ಸಂದರ್ಭದಲ್ಲಿ ಬಾಬಾಬುಡನ್‌ಗಿರಿಯಲ್ಲಿ ಕೆಲವರು ಬೇಲಿ ಜಿಗಿದು ಗೋರಿ ಹಾನಿಗೊಳಿಸಿದ ಸಂದರ್ಭದಲ್ಲಿ ಜಾಣ್ಮೆಯಿಂದ ಪರಿಸ್ಥಿತಿ ನಿಭಾಯಿಸಿದರು. ಕೋಮು ನೆಮ್ಮದಿ ಕೆಡದಂತೆ ಎಚ್ಚರ ವಹಿಸಿದರು.

ಮಳೆಗಾಲದಲ್ಲೊಮ್ಮೆ ಚಾರ್ಮಾಡಿ ಘಾಟಿ ಮಾರ್ಗದಲ್ಲಿ ಐದಾರು ಕಡೆ ಗುಡ್ಡದ ಮಣ್ಣು ರಸ್ತೆಗೆ ಕುಸಿದು ಸಂಚಾರ ಬಂದ್‌ ಆಗಿದ್ದಾಗ ಸ್ಥಳದಲ್ಲೇ ಮೊಕ್ಕಾಂ ಹೂಡಿ ವ್ಯವಸ್ಥಿತವಾಗಿ ನಿರ್ವಹಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿದ್ದರು.

ಸಾರ್ವಜನಿಕ ಸಭೆ ಸಮಾರಂಭಗಳಿಗಿಂತ ಶಾಲೆ ಕಾಲೇಜು ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗವಹಿಸಿದ್ದರು. ಸ್ಫೂರ್ತಿ ಮಾತುಗಳು ಸಾಧನಾ ಶಿಖರವೇರಲು ಮೆಟ್ಟಿಲುಗಳಂತಿರುತ್ತಿದ್ದವು. ಗುರಿ ಏನೆಂದು ಕೇಳಿದರೆ ಎಷ್ಟೋ ವಿದ್ಯಾರ್ಥಿಗಳು ‘ಐಪಿಎಸ್‌ ಮಾಡಿ, ಅಣ್ಣಾಮಲೈ ಅವರಂತೆ ‘ಖಡಕ್‌’ ಅಧಿಕಾರಿಯಾಗುತ್ತೇನೆ’ ಎಂದು ಹೇಳುತ್ತಿದ್ದರು. ಅಣ್ಣಾಮಲೈ ಜತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಯುವಪೀಳಿಗೆ ಮುಗಿ ಬೀಳುತ್ತಿದ್ದರು.

ವೃದ್ಧಾಶ್ರಮದಲ್ಲಿ ಅಣ್ಣಾಮಲೈ ಅವರು ಮಹಿಳೆಯೊಬ್ಬರ ಯೋಗಕ್ಷೇಮ ವಿಚಾರಿಸುತ್ತಿರುವುದು.

ಮಾನಸಸರೋವರ ಯಾತ್ರಾರ್ಥಿ ತಂಡ ನಿರ್ವಹಣೆ

2018ರ ಜುಲೈನಲ್ಲಿ ಅವರು ಮಾನಸಸರೋವರ ಯಾತ್ರೆ ತಂಡವೊಂದರ ಲಿಯಸನ್‌ ಅಧಿಕಾರಿಯಾಗಿ ತೆರಳಿದ್ದರು. ಎರಡು ತಿಂಗಳ ನಂತರ ವಾಪಸ್‌ ಆಗುವಾಗ14 ಕೆ.ಜಿ ತೂಕ ಇಳಿಸಿಕೊಂಡಿದ್ದರು. ಅಲ್ಲಿನ ಮಾರ್ಗಗಳಲ್ಲಿ ಓಡಾಡಿದ್ದು ಅವಿಸ್ಮರಣೀಯ ಎಂದು ಅನುಭವ ಹಂಚಿಕೊಂಡಿದ್ದರು.

ಸೈಕ್ಲಿಂಗ್‌ ಪ್ರೀತಿ

ಅಣ್ಣಾಮಲೈ ಸೈಕಲ್‌ ಸವಾರಿ ಅಭ್ಯಾಸ ಇದೆ. ಇಲ್ಲಿದ್ದಾಗ ಪ್ರತಿದಿನ 10ರಿಂದ 15 ಕಿ.ಮೀ ಸೈಕಲ್‌ ಸವಾರಿ ಮಾಡುತ್ತಿದ್ದರು.

‘ಚಿಕ್ಕಮಗಳೂರಿನಿಂದ ಕವಿಶೈಲದವರೆಗಿನ 200 ಕಿ.ಮೀ ಸೈಕಲ್‌ ಯಾನದ ತಂಡದಲ್ಲಿದ್ದರು, ಯಾನ ಪೂರ್ಣಗೊಳಿಸಿದ್ದರು. ಚಿಕ್ಕಮಗಳೂರಿನಿಂದ ಸಕ್ರೆಬೈಲುವರೆಗಿನ 300 ಕಿ.ಮೀ ಯಾನದಲ್ಲಿ ಭಾಗವಹಿಸಿದ್ದರು. 200 ಕಿ.ಮೀ ಮುಗಿದ ನಂತ ಕರ್ತವ್ಯ ನಿಮಿತ್ತ ವಾಪಸ್ಸಾಗಿದ್ದರು. ಯಾನ ಪೂರ್ಣಗೊಳಿಸಿರಲಿಲ್ಲ. ಅವರು ಬಂದ ನಂತರ ನಗರದಲ್ಲಿ ಸೈಕ್ಲಿಂಗ್‌ ಚುರುಕು ಪಡೆದಿತ್ತು’ ಎಂದು ಚಿಕ್ಕಮಗಳೂರು ಸೈಕ್ಲಿಂಗ್‌ ಕ್ಲಬ್‌ನ ಜಾವಿದ್‌ ಪರ್ವಿಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾಹೇಬರ ಮಾನವೀಯತೆ ಇಷ್ಟವಾಗಿತ್ತು. ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಹಮ್ಮುಬಿಮ್ಮು ಇರಲಿಲ್ಲ. ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಕೆಲಸದಲ್ಲಿ ಫುಲ್‌ ಖಡಕ್‌ ಆಗಿದ್ದರು. ಕೌನ್ಸೆಲಿಂಗ್‌ ಮಾಡುವುದರಲ್ಲಿ ಎತ್ತಿದ ಕೈ’ ಎಂದು ಕಾನ್‌ಸ್ಟೆನಲ್‌ವೊಬ್ಬರು ನೆನಪಿಸಿಕೊಂಡರು.

ವರ್ಗಾವಣೆಯಾದಾಗ ಬೆಂಗಳೂರಿಗೆ ತೆರಳುವ ಮುನ್ನ ಚಿಕ್ಕಮಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅಣ್ಣಾಮಲೈ, ‘ಈ ಊರು ಬಹಳ ಸುಂದರವಾಗಿದೆ. ಇಲ್ಲಿನ ಜಲಸಂಪನ್ಮೂಲ, ಬೆಟ್ಟಗುಡ್ಡ, ಕಾಡುಮೇಡು, ಹಸಿರಿನ ಸೊಬಗು ವರ್ಣಿಸಲಸದಳ. ಈ ಸಿರಿಯನ್ನು ಇರುವಂತೆಯೇ ಕಾಪಾಡಿಕೊಳ್ಳುವುದು ಇಲ್ಲಿನ ಪ್ರತಿಯೊಬ್ಬರ ಕರ್ತವ್ಯ’ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.