ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಕೆಲದಿನಗಳಿಂದ ಚಳಿ ಗಾಢವಾಗಿ ಆವರಿಸಿದ್ದು, ಜನರು ಥರಗುಟ್ಟುವಂತೆ ಮಾಡಿದೆ.
ಜಿಲ್ಲೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ಚಳಿ ತುಸು ಹೆಚ್ಚಿದೆ. ಮೂರು ದಿನಗಳ ಹಿಂದೆ ಕನಿಷ್ಠ ಉಷ್ಣಾಂಶ 12 ಡಿಗ್ರಿ ದಾಖಲಾಗಿತ್ತು. ರಾತ್ರಿ, ಬೆಳಗಿನ ಜಾವ, ಸಂಜೆ ಚಳಿ ಹೆಚ್ಚು ಇರುತ್ತದೆ. ಮಧ್ಯಾಹ್ನ ಸುಡು ಬಿಸಿಲು ಇರುತ್ತದೆ.
ಬೆಚ್ಚಗಿರಲು ಜನರು ಸ್ವೆಟರ್, ಟೋಪಿ, ಮಫ್ಲರು, ಗ್ಲೌಸುಗಳನ್ನು ಧರಿಸುತ್ತಾರೆ. ಬೀದಿಬದಿ, ಕೃಷಿ ಮಾರುಕಟ್ಟೆ, ಬಸ್‌ನಿಲ್ದಾಣ ಮೊದಲಾದ ಕಡೆಗಳಲ್ಲಿ ನಸುಕು ಮತ್ತು ಸಂಜೆ ಹೊತ್ತು ಬೆಂಕಿ ಮುಂದೆ ಮೈ ಕಾಯಿಸಿಕೊಳ್ಳುವುದು ಸಾಮಾನ್ಯವಾಗಿದೆ. ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರ ಮಾಡುವ ಬಹಳಷ್ಟು ಮಂದಿ ಚಳಿಯಿಂದ ರಕ್ಷಣೆಗೆ ಸ್ವೆಟರ್, ಮಫ್ಲರ್, ಟೋಪಿ ಮೊರೆ ಹೋಗಿದ್ದಾರೆ.
‘ಬಾಬಾಬುಡನ್‌ಗಿರಿಗೆ ಬೆಳಿಗ್ಗೆ ಹೋಗಿದ್ದೆವು. ಅಲ್ಲಿ ಥರಗುಟ್ಟುವಂತಾಯಿತು. ಮಾರ್ಗಮಧ್ಯೆ ಹೊನ್ನಮ್ಮನ ಹಳ್ಳದಲ್ಲಿ ನೀರು ಮುಟ್ಟಿದಾಗ ಪ್ರೀಜ್‌ನಲ್ಲಿಟ್ಟಿದ್ದ ನೀರು ಮುಟ್ಟಿದ ಅನುಭವವಾಯಿತು. ಕೆಮ್ಮಣ್ಣುಗುಂಡಿ, ಕಲ್ಹತ್ತಿಗಿರಿಯಲ್ಲೂ ಇದೇ ರೀತಿ ಇದೆ. ಚಳಿ ವಿಪರೀತ ಇದೆ. ಶೀತ ವಾತಾವರಣದಲ್ಲಿ ಓಡಾಡುವುದು ತ್ರಾಸ. ಮಲೆನಾಡಿನ ಪರಿಸರ ತುಂಬಾ ಚೆನ್ನಾಗಿದೆ’ ಎಂದು ದಾವಣಗೆರೆಯ ಎಂಜಿನಿಯರಿಂಗ್ ವಿದ್ಯಾರ್ಥಿನಿ ಎಸ್.ಎಚ್.ಅಶ್ವಿನಿ ತಿಳಿಸಿದರು.
ಗಿರಿ ಶ್ರೇಣಿ ಪ್ರದೇಶ, ಕೆರೆ, ಹೊಳೆ, ಜಲಾಶಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಳಿಯ ದರ್ಬಾರ್ ಹೆಚ್ಚು ಇದೆ. ಮಲೆನಾಡು, ಬಯಲು ಸೀಮೆಯ ಸೊಬಗು ಕಣ್ತುಂಬಿಕೊಳ್ಳಲು ಕಾಫಿನಾಡಿಗೆ ಬರುವ ಪ್ರವಾಸಿಗರನ್ನು ಚಳಿ ನಡುಗಿಸಿದೆ. ಚಂದ್ರದ್ರೋಣ ಪರ್ವತ ಶ್ರೇಣಿಯ ಪ್ರದೇಶಗಳಲ್ಲಿ ಮೈಕೊರೆಯುವಂಥ ಥಂಡಿಯ ಅನುಭವವಾಗುತ್ತದೆ.
ಈ ಬಾರಿ ಡಿಸೆಂಬರ್ ಆರಂಭದಲ್ಲಿ ಚಳಿ ಕಡಿಮೆ ಇತ್ತು, ಅಂತ್ಯದೊತ್ತಿಗೆ ಹೆಚ್ಚಾಯಿತು. ಈಗ ತೀವ್ರವಾಗಿದೆ. ಮಧ್ಯಾಹ್ನದ ಹೊತ್ತು ಉರಿಬಿಸಿಲು ಇದ್ದರೂ, ತಣ್ಣನೆಯ ಗಾಳಿ ಬೀಸುತ್ತದೆ. ಬೆಂಗಳೂರಿನ ಹವಾಮಾನ ಇಲಾಖೆ ಅಂಕಿ ಅಂಶ ಪ್ರಕಾರ ಐದು ದಿನಗಳಲ್ಲಿ ಗರಿಷ್ಠ 28 ಡಿಗ್ರಿ ಮತ್ತು ಕನಿಷ್ಠ 12 ಡಿಗ್ರಿ ಉಷ್ಣಾಂಶ ದಾಖಲಾಗಿದೆ.
‘ಉತ್ತರ ಭಾರತದ ಕಡೆಯಿಂದ ಒಣ ಮತ್ತು ಶೀತ ಗಾಳಿ ಬೀಸುತ್ತಿದೆ. ಹೀಗಾಗಿ, ಉಷ್ಣಾಂಶ ಕಡಿಮೆಯಾಗಿದೆ. ರಾಜ್ಯದಲ್ಲಿ ಮಲೆನಾಡು ಮತ್ತು ದಕ್ಷಿಣ ಭಾಗಕ್ಕಿಂತ ಉತ್ತರ ಕರ್ನಾಟಕದ ಬೀದರ್, ಕಲಬುರ್ಗಿ, ವಿಜಯಪುರ, ಬಾಗಲಕೋಟೆ ಈ ಜಿಲ್ಲೆಗಳಲ್ಲಿ ಉಷ್ಣಾಂಶ ಬಹಳ ಕಡಿಮೆಯಾಗಿದೆ. ಇಲ್ಲಿ 8 ಡಿಗ್ರಿಯಷ್ಟು ದಾಖಲಾಗಿದೆ’ ಎಂದು ಬೆಂಗಳೂರಿನ ಹವಾಮಾನ ಇಲಾಖೆ ವಿಜ್ಞಾನಿ ಸಿ.ಎಸ್.ಪಾಟೀಲ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಡಿಸೆಂಬರ್ ಮಾಸ, ಜನವರಿ ಮೊದಲ ವಾರದಲ್ಲಿ ಸಾಮಾನ್ಯವಾಗಿ ಚಳಿ ಜಾಸ್ತಿ ಇರುತ್ತದೆ. ಇನ್ನು ಒಂದೆರಡು ದಿನಗಳಲ್ಲಿ ಉಷ್ಣಾಂಶ ಸ್ವಲ್ಪ ಹೆಚ್ಚಾಗುವ ಲಕ್ಷಣ ಇದೆ. ಸಂಕ್ರಾಂತಿ ನಂತರ ಉಷ್ಣಾಂಶ ಹೆಚ್ಚುತ್ತದೆ’ ಎಂದು ಅವರು ತಿಳಿಸಿದರು.
ಕಾಫಿ ತೋಟ, ಅಡಿಕೆ ತೋಟಗಳಿಗೆ ಕೂಲಿ ಲೈನ್‌ಗೆ ಹೋಗುವ ಕಾರ್ಮಿಕರನ್ನು ಚಳಿ ಹೈರಾಣವಾಗಿಸಿದೆ. ಚುಮುಚುಮು ಚಳಿಯಲ್ಲೂ ಏಗಬೇಕು, ತುತ್ತಿನಚೀಲ ತುಂಬಿಸಿಕೊಳ್ಳಬೇಕು.
‘ಈ ಬಾರಿ ಚಳಿ ಬಹಳ ಇದೆ.ಈಗ ಕಾಫಿ, ಅಡಿಕೆ ತೋಟಗಳಲ್ಲಿ ಭರಪೂರ ಕೆಲಸ. ಚಳಿಗೆ ಹೆದರಿದರೆ ದುಡಿಮೆಗೆ ಕುತ್ತು ಉಂಟಾಗುತ್ತದೆ’ ಎಂದು ಕೂಲಿಕಾರ ಬಾಳಪ್ಪ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.