ADVERTISEMENT

ರಾಜಕೀಯ ಹಿತಾಸಕ್ತಿಗೆ ಗಣಪತಿ ಸಮಿತಿ ಹೆಸರು ದುರ್ಬಳಕೆ ಬೇಡ: ಸಿ.ಆರ್‌.ಕೇಶವಮೂರ್ತಿ

ಹಣ ದುರುಪಯೋಗ: ಟಿ.ರಾಜಶೇಖರ್ ಆರೋಪ‍ ಸತ್ಯಕ್ಕೆ ದೂರ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2023, 14:11 IST
Last Updated 27 ಅಕ್ಟೋಬರ್ 2023, 14:11 IST
ಕೇಶವಮೂರ್ತಿ
ಕೇಶವಮೂರ್ತಿ   

ಚಿಕ್ಕಮಗಳೂರು: ‘ನಗರದ ಆಜಾದ್ ಮೈದಾನದ ಗಣಪತಿ ಸೇವಾ ಸಮಿತಿಯ ಹಣ ದುರುಪಯೋಗವಾಗಿದೆ ಎಂಬ ಬಿಜೆಪಿ ಮುಖಂಡ ಟಿ.ರಾಜಶೇಖರ್ ಹೇಳಿಕೆ ಸತ್ಯಕ್ಕೆ ದೂರವಾದುದು. ರಾಜಕೀಯ ಹಿತಾಸಕ್ತಿಗಾಗಿ ಸಮಿತಿಗೆ ಕೆಟ್ಟ ಹೆಸರು ತರಲು ಈ ಷಡ್ಯಂತ್ರ ರೂಪಿಸಲಾಗಿದೆ’ ಎಂದು ಸಮಿತಿ ಗೌರವಾಧ್ಯಕ್ಷ ಸಿ.ಆರ್‌.ಕೇಶವಮೂರ್ತಿ ಹೇಳಿದರು.

‘ಸಮಿತಿಯು 87 ವರ್ಷಗಳಿಂದ ಸಾರ್ವಜನಿಕರು, ಭಕ್ತರ ವಂತಿಗೆ ಹಣದಿಂದ ಸುಗಮವಾಗಿ ನಡೆದುಕೊಂಡು ಬಂದಿದೆ. ಈವರೆಗೂ ಯಾವುದೇ ವಂತಿಗೆ ಹಣದ ದುರುಪಯೋಗವಾಗಿಲ್ಲ. ಪ್ರತಿ ವರ್ಷ ಆಡಿಟ್ ವರದಿಯನ್ನು ಕಾರ್ಯಕಾರಿ ಸಮಿತಿ ಮುಂದಿಡಲಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಸ್ಪಷ್ಟಪಡಿಸಿದರು.

‘2021ರ ಅವಧಿಯಲ್ಲಿ ಕೋವಿಡ್‌ ಇದ್ದುದರಿಂದ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿಲ್ಲ. ಆಡಿಟ್ ವರದಿ ಪ್ರಕಾರ ₹6.71 ಲಕ್ಷ  ಉಳಿಕೆಯಾಗಿದೆ. ಸೇವಾ ಸಮಿತಿ ಅಧ್ಯಕ್ಷರಾದ ವರಸಿದ್ಧಿ ವೇಣುಗೋಪಾಲ್‌ ಬಳಿ ನಗದು ಇತ್ತು. ಈಗ ಕಾರ್ಯಕಾರಿ ಸಮಿತಿ 2023 ಸೆ.4 ರಂದು ಸಭೆಯಲ್ಲಿ ಚರ್ಚಿಸಿ ಸರ್ವ ಸದಸ್ಯರ ಒಪ್ಪಿಗೆ ‍ಪಡೆದು 2024 ಜ. 4 ರೊಳಗೆ ಹಣ ಜಮಾ ಮಾಡುವಂತೆ ತಿಳಿಸಲಾಗಿದೆ. ಇಲ್ಲಿ ಯಾವುದೇ ಹಣದ ದುರುಪಯೋಗವಾಗಿಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

ಸ್ಪಷ್ಟ ಮಾಹಿತಿ ಇಲ್ಲದೆ ರಾಜಕೀಯ ಲಾಭಕ್ಕಾಗಿ ಸಮಿತಿ ಹೆಸರನ್ನು ಟಿ.ರಾಜಶೇಖರ್ ದುರ್ಬಳಕೆ ಮಾಡಿಕೊಂಡು ಭಕ್ತರಲ್ಲಿ ತಪ್ಪು ಅಭಿಪ್ರಾಯ ಮೂಡುವಂತೆ ಮಾಡಿರುವುದು ಖಂಡನೀಯ. ಈ ಬಗ್ಗೆ ಹೇಳಿಕೆ ನೀಡಿದ ವ್ಯಕ್ತಿ ಹಾಗೂ ದೂರು ನೀಡಿದವರ ವಿರುದ್ಧವೂ ಕಾನೂನು ಕ್ರಮ ಜರುಗಿಸಲು ಸಮಿತಿ ತೀರ್ಮಾನಿಸಿದೆ ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಸಮಿತಿ ಪ್ರಧಾನ ಕಾರ್ಯದರ್ಶಿ ಸಿ.ಇ.ಚೇತನ್‌, ಖಜಾಂಚಿ ಎಚ್‌.ವೈ.ಮೋಹನ್‌ಕುಮಾರ್, ಈಶ್ವರಪ್ಪ ಕೋಟೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.