ಬಾಳೆಹೊನ್ನೂರು: ‘ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಕೇಂದ್ರದ ಕಾಯ್ದೆ ಮೂಲಕ ನಡೆಯುತ್ತಿದ್ದು, ಒಂದು ಬಾರಿ ವಿದ್ಯುತ್ ದರ ಅನುಮೋದನೆ ಆದ ಬಳಿಕ ಅದನ್ನು ಹಿಂಪಡೆಯಲು ಸಾಧ್ಯವಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ರಂಭಾಪುರಿ ಪೀಠಕ್ಕೆ ಭೇಟಿ ನೀಡಿದ ಅವರು ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
2022ರ ನವೆಂಬರ್‌ನಿಂದ ದರ ಪ್ರಕ್ರಿಯೆ ಆರಂಭವಾಗಿದೆ. ಮಾರ್ಚ್‌ನಲ್ಲೇ ದರ ಏರಿಕೆ ಆಗಬೇಕಿತ್ತು. ಆಗ ಚುನಾವಣಾ ನೀತಿ ಸಂಹಿತೆ ಕಾರಣದಿಂದ ಏರಿಕೆ ಆಗಿರಲಿಲ್ಲ. ಮೇ 12ರಿಂದ ಅನ್ವಯವಾಗುವಂತೆ ವಿದ್ಯುತ್ ದರ ಏರಿಕೆ ಮಾಡಲಾಗಿದೆ. ಇದರಲ್ಲಿ ಕಾಂಗ್ರೆಸ್ ಪಾತ್ರವಿಲ್ಲ. ಬಿಜೆಪಿ ಅವಧಿಯಲ್ಲೇ ದರ ಏರಿಕೆ ಆಗಿದೆ ಎಂದರು.
ಜುಲೈನಿಂದ ಯಾವುದೇ ಬೆಲೆ ಏರಿಕೆ ಆದರೂ ಅದನ್ನು ಸರ್ಕಾರ ಭರಿಸಲಿದೆ. ಆದರೆ, ಹಿಂದಿನ ಬಾಕಿಯನ್ನು ಗ್ರಾಹಕರೇ ಭರಿಸಬೇಕು ಎಂದ ಅವರು, ಅಡಿಕೆ ಹಾನಿ ಬಗ್ಗೆ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಜತೆ ಹಾಗೂ ಶಾಸಕರೊಂದಿಗೆ ಚರ್ಚಿಸಲಾಗುವುದು. ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಅನುದಾನ ತಂದು ಸರಿಪಡಿಸಲಾಗುವುದು ಎಂದರು.
ವೀರಭದ್ರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ರಂಭಾಪುರಿ ಸ್ವಾಮೀಜಿ ಅವರು ಜಾರ್ಜ್ ಅವರನ್ನು ಸನ್ಮಾನಿಸಿದರು.
ಶಾಸಕ ಟಿ.ಡಿ.ರಾಜೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಅಂಶುಮಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಟರಾಜ್ ಗೇರ್ ಬೈಲ್, ಬಿ.ಸಿ.ಗೀತಾ, ಇಬ್ರಾಹಿಂ ಶಾಫಿ, ಮಹಮ್ಮದ್ ಹನೀಫ್, ಎಂ.ಎಸ್.ಅರುಣೇಶ್, ಎಚ್.ಎಂ.ಸತೀಶ್, ಮಹೇಶ್ ಆಚಾರ್, ಬಿ.ಕೆ.ಮದುಸೂಧನ್ ಇದ್ದರು.
ಅಡಿಕೆ ಸಮಸ್ಯೆ ಬಗ್ಗೆ ಗಮನ ನೀಡಿ– ಸ್ವಾಮೀಜಿ: ಜಿಲ್ಲೆಯ ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಎಲೆಚುಕ್ಕಿ ಹಾಗೂ ಹಳದಿ ಎಲೆ ರೋಗದ ಬಗ್ಗೆ ಸರ್ಕಾರ ತಕ್ಷಣ ಗಮನ ಹರಿಸಿ ಕ್ರಮ ಕೈಗೊಳ್ಳುವ ಮೂಲಕ ಬೆಳೆಗಾರರ ನೆರವಿಗೆ ಧಾವಿಸಲಿ ಎಂದು ರಂಭಾಪುರಿ ಪೀಠದ ಸ್ವಾಮೀಜಿ ತಿಳಿಸಿದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ಬಿಡುಗಡೆ ಆಗಿರುವ, ಈಗಿನ ಸರ್ಕಾರ ತಡೆ ಹಿಡಿದಿರುವ ಅನುದಾನವನ್ನು ತಡೆ ಹಿಡಿದಿರುವುದನ್ನು ಪರಿಶೀಲಿಸಿ ಬಿಡುಗಡೆ ಮಾಡಲಿ. ಜಾತಿ, ಧರ್ಮಗಳ ಬಗ್ಗೆ ಆದ್ಯತೆ ನೀಡಿದೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಮಲೆನಾಡು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ತಲವಾನೆ ಪ್ರಕಾಶ್ ಮನವಿ ಸಲ್ಲಿಸಿದರು.
ಫಸಸ್ ಬಿಮಾ ಯೋಜನೆಯಲ್ಲಿ ಅವೈಜ್ಞಾನಿಕ ಷರತ್ತು ವಿಧಿಸಲಾಗಿದೆ. ಮಳೆಮಾಪನ ಯಂತ್ರಗಳು ಹಲವು ಗ್ರಾಮ ಪಂಚಾಯಿತಿಗಳಲ್ಲಿ ಹಾಳಾಗಿದ್ದು ದುರಸ್ತಿ ಮಾಡಿಲ್ಲ. ಇದರಿಂದಾಗಿ ರೈತರಿಗೆ ವಿಮೆ ನೀಡಿಕೆಯಲ್ಲಿ ಅನ್ಯಾಯವಾಗಿದೆ. ತಕ್ಷಣ ಅದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಪಟ್ಟಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ ಮಂಜೂರು ಮಾಡುವಂತೆ ಕೋರಿ ಐಟಿಐ ಕಾಲೇಜು ಪ್ರಾಂಶುಪಾಲ ಎಚ್.ಆರ್.ಆನಂದ್ ಸಚಿವ ಮನವಿ ಸಲ್ಲಿಸಿದರು.
ಸಂಘಟನೆಯ ಸತ್ಯಪ್ರಕಾಶ್, ಕುಮಾರಸ್ವಾಮಿ, ಸೂರ್ಯನಾರಾಯಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.