ಮೂಡಿಗೆರೆ: ತಾಲ್ಲೂಕಿನಾದ್ಯಂತ ಕಳೆದೊಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆ ಏಲಕ್ಕಿ ಬೆಳೆಗಾರರನ್ನು ತತ್ತರಿಸುವಂತೆ ಮಾಡಿದೆ. ದೇವರುಂದ, ಹಂತೂರು, ಮೇಕನಗದ್ದೆ, ಹೊಸ್ಕೆರೆ, ಏರಿಕೆ, ಭೈರಾಪುರ, ಗುತ್ತಿ, ಹೆಸಗೋಡು, ಮೂಲರಹಳ್ಳಿ ಸೇರಿದಂತೆ ಸಕಲೇಶಪುರ ತಾಲ್ಲೂಕಿನ ಗಡಿ ಭಾಗದಲ್ಲಿ ಏಲಕ್ಕಿಯನ್ನು ಸಂಪ್ರಾದಾಯಿಕ ಪದ್ಧತಿಯಲ್ಲಿ ಬೆಳೆಯುತ್ತಾರೆ. ಆಗಸ್ಟ್ ಅಂತ್ಯದಿಂದ ನವೆಂಬರ್ ಕೊನೆಯವರೆಗೆ ಏಲಕ್ಕಿ ಕಟಾವಿನ ಕಾಲವಾಗಿದೆ. ಆದರೆ, ಈ ಬಾರಿ ಮಳೆ ಮುಂದುವರಿದಿರುವುದು ಏಲಕ್ಕಿ ಬೆಳೆಗಾರರನ್ನು ಸಂಕಷ್ಟಕ್ಕೆ ದೂಡಿದೆ.
ಏಲಕ್ಕಿ ಬೆಳೆಗಾರರಲ್ಲಿ ಹೆಚ್ಚಿನವರು ಸಣ್ಣ ಬೆಳೆಗಾರರಿದ್ದು, ಬೆಳೆ ಒಣಗಿಸಲು ಡ್ರೈಯರ್‌ನಂತಹ ಆಧುನಿಕ ವ್ಯವಸ್ಥೆ ಹೊಂದಿಲ್ಲ. ಮಳೆ ನಿಂತು, ಬಿಸಿಲು ಮೂಡಿದಾಗ ಏಲಕ್ಕಿ ಒಣಗಿಸಿ ಮಾರಾಟ ಮಾಡಬೇಕಾಗಿದೆ. ಈಗಾಗಲೇ ಕಟಾವು ಮುಕ್ತಾಯವಾಗಿದ್ದು, 3 ಹಾಗೂ 4ನೇ ಸುತ್ತಿನಲ್ಲಿ ಕಟಾವು ಮಾಡಬೇಕಾದ ಕಾಯಿಗಳು ಮಾತ್ರ ಗಿಡದಲ್ಲಿ ಉಳಿದಿವೆ.
ಮೊದಲ ಹಂತದ ಕಟಾವು ಮಳೆಯ ನಡುವೆಯೇ ನಡೆದಿದೆ. ಅಕ್ಟೋಬರ್ ಬಳಿಕ ಮಳೆ ಕಡಿಮೆಯಾಗಬಹುದು ಎಂದು ನಿರೀಕ್ಷಿಸಿ ಕಟಾವು ಮುಂದೂಡಿದ್ದ ರೈತರಿಗೆ, ಈಗ ನಿರಂತರವಾಗಿ ಸುರಿಯುತ್ತಿರುವ ಮಳೆ ಅಡ್ಡಿಯಾಗಿದೆ. ಕಟಾವು ಮಾಡಿದರೆ ಏಲಕ್ಕಿಯನ್ನು ಒಣಗಿಸಲಾಗದ ಸ್ಥಿತಿ ಒಂದೆಡೆಯಾದರೆ, ಇನ್ನೊಂದೆಡೆ ಗಿಡದಲ್ಲೇ ಹಣ್ಣಾದ ಏಲಕ್ಕಿ ನೆಲಕ್ಕೆ ಉದುರಿ ಬಿದ್ದು, ನಷ್ಟವಾಗುತ್ತಿರುವುದು ನುಂಗಲಾರದ ತುತ್ತಾಗಿದೆ.
‘ಈ ಬಾರಿ ಜುಲೈ ತಿಂಗಳಿಂದ ಮಳೆ ಪ್ರಮಾಣ ಹೆಚ್ಚಾಗಿದ್ದರಿಂದ ಏಲಕ್ಕಿ ಅವಧಿಗೆ ಮುನ್ನವೇ ಹಣ್ಣಾಗತೊಡಗಿತ್ತು. ಮೊದಲ ಹಂತದ ಕಟಾವನ್ನು ಮಳೆಯ ನಡುವೆಯೇ ನಡೆಸಿ, ಗಾಳಿಯಲ್ಲಿ ಹರಡಿ ಹೇಗೋ ಏಲಕ್ಕಿಯನ್ನು ಒಣಗಿಸಿಕೊಂಡೆವು. 2ನೇ ಹಂತದ ಕಟಾವನ್ನು ಅಕ್ಟೋಬರ್‌ನಲ್ಲಿ ಮಳೆ ಕಡಿಮೆಯಾಗಬಹುದು ಎಂದು ಮುಂದೂಡಿದ್ದೆವು. ಆದರೆ, ಸತತ ಮಳೆಯಿಂದ ಕಟಾವು ಮಾಡಲು ಸಮಸ್ಯೆಯಾಗಿದೆ. ವನ್ಯಪ್ರಾಣಿಗಳ ಹಾವಳಿ, ತಾಲ್ಲೂಕಿನಲ್ಲಿ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದು ಇತ್ಯಾದಿ ಸಮಸ್ಯೆಗಳಿಂದ ನಿಧಾನವಾಗಿ ಏಲಕ್ಕಿ ಬೆಳೆಯನ್ನೇ ಕೈ ಬಿಡಬೇಕಾದ ಸ್ಥಿತಿ ಇದೆ’ ಎನ್ನುತ್ತಾರೆ ಬೆಳೆಗಾರ ಕಾರಬೈಲ್ ಜಗದೀಶ್.
ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಏಲಕ್ಕಿ ಒಣಗಿಸಿಕೊಳ್ಳಲು ಸರ್ಕಾರದ ನೆರವಿನಲ್ಲಿ ಸೌಲಭ್ಯ ಕಲ್ಪಿಸಿದರೆ ಮಳೆಗಾಲದಲ್ಲಿ ಕಟಾವಿಗೆ ಬರುವ ಏಲಕ್ಕಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎನ್ನುತ್ತಾರೆ ತಾಲ್ಲೂಕಿನ ಏಲಕ್ಕಿ ಬೆಳೆಗಾರರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.