ADVERTISEMENT

ಚಿಕ್ಕಮಗಳೂರು | ಎಡಬಿಡದ ಮಳೆ: ನೆಲಕಚ್ಚಿದ ಬೆಳೆ

ವಿಜಯಕುಮಾರ್ ಎಸ್.ಕೆ.
Published 21 ಅಕ್ಟೋಬರ್ 2024, 7:36 IST
Last Updated 21 ಅಕ್ಟೋಬರ್ 2024, 7:36 IST
ಸತತ ಮಳೆಯಿಂದ ಕಾಫಿ ಫಸಲು ಉದುರಿ ನೆಲಕಚ್ಚಿರುವುದು
ಸತತ ಮಳೆಯಿಂದ ಕಾಫಿ ಫಸಲು ಉದುರಿ ನೆಲಕಚ್ಚಿರುವುದು   

ಚಿಕ್ಕಮಗಳೂರು: ಕಳೆದೊಂದು ವಾರದಿಂದ ಸತತವಾಗಿ ಮಳೆ ಸುರಿಯುತ್ತಿದ್ದು, ಮಲೆನಾಡು ನಲುಗಿ ಹೋಗಿದೆ. ಕಾಫಿ, ಏಲಕ್ಕಿ, ಅಡಿಕೆ ಬೆಳೆಗಾರರು ರೋಸಿ ಹೋಗಿದ್ದು, ಬೆಳೆ ಸಂಸ್ಕರಣೆಗೆ ಪರದಾಡುತ್ತಿದ್ದಾರೆ.

ಕಾಫಿ ಬೆಳೆಗಾರರು ದಿನಕ್ಕೊಂದು ಸಂಕಷ್ಟ ಅನುಭವಿಸುತ್ತಿದ್ದಾರೆ. ಕಾಫಿಗೆ ಉತ್ತಮ ಬೆಲೆ ಬಂದಿದ್ದರೂ ಅದರ ಲಾಭ ರೈತರಿಗೆ ದೊರಕುತ್ತಿಲ್ಲ. ಈ ನಡುವೆ ಈ ವರ್ಷದ ಫಸಲು ಕಟಾವಿನ ಹಂತಕ್ಕೆ ಬಂದಿದ್ದರೂ ಸಂಸ್ಕರಣೆ ಸಾಧ್ಯವಾಗುತ್ತಿಲ್ಲ.

ಈ ಮಳೆಗೆ ರೊಬೊಸ್ಟಾ ಕಾಫಿಗಿಂತ ಅರೇಬಿಕಾ ಕಾಫಿ ಸಂಕಷ್ಟಕ್ಕೆ ಸಿಲುಕಿದೆ. ಈಗ ಕಾಯಿ ಹಣ್ಣಾಗುವ ಹಂತದಲ್ಲಿದ್ದು ಜೋರು ಮಳೆಗೆ ನೆಲಕ್ಕೆ ಉದುರಿ ಕೈಗೆ ಬಂದ ಫಲಸು ಬಾಯಿಗೆ ಬರಲಿಲ್ಲ ಎಂಬಂತಾಗಿದೆ. ಚಿಕ್ಕಮಗಳೂರು, ಬಾಳೆಹೊನ್ನೂರು, ಆಲ್ದೂರು ಸುತ್ತಮುತ್ತ ಅರೇಬಿಕಾ ಬೆಳೆ ಜಾಸ್ತಿ ಇದ್ದು, ಬೆಳೆಗಾರರು ಕಷ್ಟಕ್ಕೆ ಸಿಲುಕಿದ್ದಾರೆ.

ADVERTISEMENT

ಮಳೆಯಿಂದ ಅರೇಬಿಕಾ, ಕಾವೇರಿ ತಳಿಗಳು ಹೆಚ್ಚಾಗಿ ರೋಗಕ್ಕೆ  ತುತ್ತಾಗುತ್ತಿವೆ. ರೋಬಸ್ಟಾ ತಳಿಗೆ ಉತ್ತಮ ಬೆಲೆ ಇದ್ದರೂ, ಫಸಲು ಇಲ್ಲವಾಗಿದೆ. ನಿರಂತರ ಮಳೆಯಿಂದ ಕಾಫಿ ತೋಟಗಳಲ್ಲಿ ತೇವಾಂಶ ಹೆಚ್ಚಿ, ಕಾಫಿ ಗಿಡಗಳಲ್ಲಿ ರೋಗ ಕಾಣಿಸಿಕೊಂಡಿದೆ.

ಕಾಳು ಮೆಣಸಿನ ಬಳ್ಳಿಗಳಲ್ಲೂ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದು, ಬೆಳೆಗಾರರಲ್ಲಿ ಆತಂಕ ಮನೆ ಮಾಡಿದೆ. ಎರಡು ದಿನಗಳಿಂದ ಮಳೆ ಮತ್ತಷ್ಟು ಜಾಸ್ತಿಯಾಗಿದ್ದು, ಇನ್ನಷ್ಟು ಬೆಳೆ ಹಾಳಾಗುವ ಅತಂಕ ರೈತರನ್ನು ಕಾಡುತ್ತಿದೆ.

ಬಯಲು ಸೀಮೆಯಲ್ಲಿ ರಾಗಿ ಬೆಳೆಗೆ ಮಳೆ ಅನುಕೂಲ ಮಾಡಿದೆ. ಕೆಲವೆಡೆ ಮೆಕ್ಕೆಜೋಳ ಕಟಾವು ಆರಂಭವಾಗಿದ್ದು, ಸಂಸ್ಕರಣೆ ಮಾಡಲಾಗದೆ ರೈತರು ಪರದಾಡುತ್ತಿದ್ದಾರೆ. ಕಟಾವಿಗೆ ಬಂದಿದ್ದರೂ, ನಿರಂತರ ಮಳೆಯಿಂದ ಕಟಾವು ಸಾಧ್ಯವಾಗಿಲ್ಲ. ಹಲವೆಡೆ ಕಟಾವು ಮಾಡಿ ಬಿಡಿಸಿರುವ ಜೋಳ ಒಣಗಿಸಲು ಆಗಿಲ್ಲ. ಇದರಿಂದಾಗಿ ಜೋಳದ ಕಾಳಿನಲ್ಲಿ ಮೊಳಕೆ ಕಾಣಿಸುತ್ತಿದ್ದು, ರೈತರು ಆತಂಕದಲ್ಲಿದ್ದಾರೆ.

ಪೂರಕ ಮಾಹಿತಿ: ರವಿ ಕೆಳಂಗಡಿ

ಏಲಕ್ಕಿ ಕೊಯ್ಲು ಸಾಧ್ಯವಾಗದಿರುವುದು
ಅಡಿಕೆ ಕೊಯ್ಲು ಮಾಡಿದ್ದರೂ ಮಳೆ ಬಿಡುವು ನೀಡದೆ ಒಣಗಿಸಿ ಸಂಸ್ಕರಣೆ ಮಾಡಲು ಸಾಧ್ಯವಾಗದೆ ಬೆಳೆಗಾರರು ಕಷ್ಟಪಡುತ್ತಿರುವುದು
ಅಡಿಕೆ ಸಂಸ್ಕರಣೆಗೂ ಮಳೆ ಅಡ್ಡಿ 
ಕಳಸ: ಅಕ್ಟೋಬರ್ ತಿಂಗಳಲ್ಲೂ ಅಕಾಲಿಕವಾಗಿ ಸುರಿಯುತ್ತಿರುವ ಮಳೆ ಮಲೆನಾಡಿನಲ್ಲಿ ತೀವ್ರ ಆತಂಕ ಅನನುಕೂಲ ತಂದೊಡ್ಡಿದೆ. ಅಡಿಕೆ ಬೆಳೆ ಕಟಾನಿನ ಸಂದರ್ಭವಾಗಿದ್ದು ಒಣಗಿಸುವುದೇ ಬೆಳೆಗಾರರಿಗೆ ಸವಾಲಾಗಿದೆ. ಮಲೆನಾಡು ಮಾತ್ರವಲ್ಲ ಬಯಲು ಸೀಮೆಯಾದ ತರೀಕೆರೆಯ ರೈತರನ್ನೂ ಈ ಸಮಸ್ಯೆ ಕಾಡುತ್ತಿದೆ. ವಿಶೇಷವಾಗಿ ಆಡಿಕೆ ಕೊಯ್ಲು ಆರಂಭವಾಗಬೇಕಿದ್ದ ಈ ಹೊತ್ತಿನಲ್ಲಿ ಸಂಸ್ಕರಣೆಗೆ ಮಳೆ ಅಡ್ಡಿ ಮಾಡುತ್ತಿದೆ. ತಾಲ್ಲೂಕಿನಲ್ಲಿ ಅಡಿಕೆ ಫಸಲು  ಈಗಾಗಲೇ ಹಣ್ಣಾಗಿದ್ದು ನೆಲಕ್ಕೆ ಉದುರುತ್ತಿದೆ. ಈಗಾಗಲೇ 3-4 ಬಾರಿ ಕೆಂಪಡಿಕೆ ನೆಲದಿಂದ ಹೆರಕಲಾಗಿದೆ. ಆದರೆ ಅದನ್ನು ಒಣಗಿಸಲು ಬಿಸಿಲು ಇಲ್ಲದೆ ಅಡಿಕೆ ಕೊಳೆಯುತ್ತಿದೆ. ಇನ್ನು ಕೆಲವು ಬೆಳೆಗಾರರು ಧೈರ್ಯದಿಂದ ಅಡಿಕೆ ಸಂಸ್ಕರಣೆ ಆರಂಭಿಸಿದ್ದಾರೆ. ಪ್ರತಿ ದಿನವೂ ಮಳೆ ಸುರಿಯುತ್ತಿರುವುದರಿಂದ ಬೇಯಿಸಿದ ಅಡಿಕೆ ಒಣಗಿಸಲು ಅವಕಾಶ ಇಲ್ಲವಾಗಿದೆ. ಇದರಿಂದಾಗಿ ಅಡಿಕೆಗೆ ಬೂಸ್ಟ್‌ ಬರಲಾರಂಭಿಸಿದೆ. ಈ ವರ್ಷ ಅಡಿಕೆ ಗುಣಮಟ್ಟದ ಬಗ್ಗೆ ಎಲ್ಲ ಖರೀದಿದಾರರೂ ಒತ್ತು ನೀಡುತ್ತಿದ್ದಾರೆ. ಬೂಸ್ಟ್‌ ಬೆಳೆದಿರುವ ಅಡಿಕೆಯನ್ನು ಮಾರಾಟ ಮಾಡುವುದು ಕಷ್ಟ. ಈ ಚಿಂತೆ ಈಗ ಬೆಳೆಗಾರನ್ನು ಕಾಡುತ್ತಿದೆ. ಇನ್ನು ಮಧ್ಯಾಹ್ನ ಸುರಿಯುವ ಮಳೆ ತೋಟದಲ್ಲಿ ಕೆಲಸ ಸಾಗದಂತೆ ಮಾಡಿದೆ. ದುಬಾರಿ ಕೂಲಿ ನೀಡಿ ಕಾರ್ಮಿಕರನ್ನು ಕೊಯ್ಲಿಗೆ ಹೊಂದಿಸಿಕೊಂಡರೂ ಮಳೆಯಿಂದಾಗಿ ಪ್ರತಿದಿನ ನಿರೀಕ್ಷೆಯಷ್ಟು ಕೆಲಸ ಆಗುತ್ತಿಲ್ಲ ಎಂಬುದು ಕೊಯ್ಲು ಆರಂಭಿಸಿದ ಬೆಳೆಗಾರರ ಬೇಸರ. ಅಡಿಕೆ ಬೆಳೆ ಸಂಸ್ಕರಣೆ ತೊಡಕಾಗಿರುವುದು ರೈತರಲ್ಲಿ ಆತಂಕ ಸೃಷ್ಟಿಸಿದೆ. ಮಳೆ ಬಿಟ್ಟರೂ ಬಿಡದೆ ಸುರಿಯುತ್ತಿದ್ದು ಇನ್ನೆಷ್ಟು ದಿನ ಈ ಕಷ್ಟ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಾರೆ.
ಮಳೆ: ಭತ್ತ ಶುಂಠಿಗೂ ಬರೆ
ಮೂಡಿಗೆರೆ: ತಾಲ್ಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯು ರೈತರ ಪಾಲಿಗೆ ಶಾಪವಾಗುತ್ತಿದ್ದು ಬೆಳೆದಿರುವ ಬೆಳೆಯೆಲ್ಲವನ್ನು ಆಹುತಿ ಪಡೆಯುತ್ತಿದೆ. ತಾಲ್ಲೂಕಿನಲ್ಲಿ ಸುಮಾರು 5 ಸಾವಿರ ಎಕರೆ ಪ್ರದೇಶದಲ್ಲಿ ಭತ್ತದ ಬೆಳೆ ಬೆಳೆಯಲಾಗಿದ್ದು ಭತ್ತವು ಈಗಾಗಲೇ ತೆನೆ ಒಡೆಯುವ ಹಂತಕ್ಕೆ ತಲುಪಿದೆ. ಈ ಸಮಯದಲ್ಲಿ ಮಳೆ‌ ಸುರಿಯುತ್ತಿರುವುದರಿಂದ‌ ತೆನೆಯಲ್ಲಿನ ಹಾಲು ಕಟ್ಟದೇ ಮಳೆಯ ಹೊಡೆತಕ್ಕೆ ಕರಗುತ್ತಿದೆ. ಇದರಿಂದ ಭತ್ತ ಜೊಳ್ಳಾಗುವ ಅಪಾಯ ಎದುರಾಗಿದೆ. ಅಲ್ಲದೇ ಈ ಅಡ್ಡ ಮಳೆಯ‌ ಹನಿಗಳು ರಭಸವಾಗಿ ಬೀಳುತ್ತಿರುವುದರಿಂದ ಭತ್ತದ ಪೈರು ತೆನೆ ಬಿಡುವ ಮೊದಲೇ ನೆಲ‌ಕಚ್ಚುವ ಆತಂಕ ಕಾಡುತ್ತಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯು ಶುಂಠಿ ಬೆಳೆಗೂ ಕಂಟಕವಾಗಿದೆ. ಈಗಾಗಲೇ ಹುಲುಸಾಗಿ ಬೆಳೆದಿರುವ ಶುಂಠಿಗೆ ಮಣ್ಣು ಏರಿಸುವ ಕಾರ್ಯ ಮುಗಿದಿದೆ. ಸದಾ ಮಳೆ‌ ಸುರಿಯುತ್ತಿರುವುದರಿಂದ ಕೊಳೆರೋಗ ಹರಡುವ ಆತಂಕ ಸೃಷ್ಟಿಯಾಗಿದೆ. ಅಲ್ಲದೇ ಶುಂಠಿಯಲ್ಲಿ ಕಂದು ಹೊಡೆದು ದಪ್ಪವಾಗುವ ಕಾಲವಾಗಿರುವುದರಿಂದ ಅಗತ್ಯಕ್ಕಿಂತ ಹೆಚ್ಚು ನೀರು ಪೂರೈಕೆಯು ಗುಣಮಟ್ಟದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಸಾಮಾನ್ಯವಾಗಿ ‌ಅಕ್ಟೋಬರ್ ತಿಂಗಳಿನಲ್ಲಿ‌ ಆಗೋಮ್ಮೆ ಈಗೊಮ್ಮೆ ಮಳೆ‌ ಸುರಿದು ಬಿಡುವು ನೀಡುತ್ತಿತ್ತು. ಈ ಬಾರಿ‌ ಹದಿನೈದು ದಿನಗಳಿಂದ ಮಳೆ ಸುರಿಯುತ್ತಿರುವುದು ಬೆಳೆಗಾರರನ್ನು ಸಂಕಷ್ಟಕ್ಕೆ‌ ದೂಡಿದೆ.
ಏಲಕ್ಕಿ ಬೆಳೆಗೂ ಸಂಕಷ್ಟ
ಏಲಕ್ಕಿ ಬೆಳೆ ನಶಿಸುತ್ತಿರುವ ಬೆಳೆ ಎಂದೇ ಗುರುತಿಸಿಕೊಂಡಿದೆ. ಅಕಾಲಿಕ‌ ಮಳೆ ವನ್ಯಪ್ರಾಣಿಗಳ ಹಾವಳಿ ಕಾರ್ಮಿಕರ ಕೊರತೆಯು ಮಲೆನಾಡಿನಿಂದ ಏಲಕ್ಕಿ ಬೆಳೆ‌ನಶಿಸಲು ಕಾರಣ. ಈ ಬಾರಿಯ ಮಳೆಯು ಬೆಳೆಗಾರರನ್ನು ಇನ್ನಷ್ಟು ಸಂಕಷ್ಟಕ್ಕೆ‌ ತಳ್ಳಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಏಲಕ್ಕಿಯ 2 ಹಾಗೂ 3ನೇ ಹಂತದ ಕಟಾವು ಪೂರ್ಣಗೊಂಡಿಲ್ಲ. ಕೆಲವೆಡೆ ಹಣ್ಣಾಗಿರುವ ಏಲಕ್ಕಿಯು ಗಿಡದಿಂದ‌ ಕಳಚಿ ಬೀಳತೊಡಗಿದೆ. ಕಟಾವು ಮಾಡಿದರೂ ಒಣಗಿಸಿಕೊಳ್ಳಲಾಗದೆ ಪರದಾಡುವಂತಾಗಿದೆ. ಮಳೆಯ ನಡುವೆಯೇ ಏಲಕ್ಕಿಯನ್ನು ಕೊಯ್ಲು ಮಾಡಿ ನೆರಳಿನಲ್ಲಿಯೇ (ಮನೆ ಶೆಡ್ಡಿನೊಳಗೆ) ಒಣಗಿಸುವ ಪ್ರಯತ್ನ ನಡೆಸಿದೆ. ಇದರಿಂದ ಗುಣಮಟ್ಟ ಕಳಪೆಯಾಗುತ್ತಿದ್ದು ರೈತರು ನಷ್ಟ ಅನುಭವಿಸುವಂತಾಗಿದೆ. 
ರಾಗಿ ಬೆಳೆಗೆ ಅನುಕೂಲ
ನಿರಂತರ ಮಳೆ ಮಲೆನಾಡಿನಲ್ಲಿ ಕಷ್ಟದ ಮೇಲೆ ಬರೆ ಎಳೆಯುತ್ತಿದ್ದರೆ ಬಯಲು ಸೀಮೆಯಲ್ಲಿ ರಾಗಿ ಬಿತ್ತನೆ ಮಾಡಿದವರಿಗೆ ಅನುಕೂಲ ಮಾಡಿದೆ. ರಾಗಿಗೆ ಮಳೆ ಕೊರತೆ ಎದುರಿಸುತ್ತಿದ್ದ ರೈತರು ಕೊಂಚ ಸಮಾಧಾನಪಟ್ಟಿದ್ದಾರೆ. ಕಡೂರು ತರೀಕೆರೆ ಅಜ್ಜಂಪುರ ಭಾಗದಲ್ಲಿ ರೈತರು ಮೊದಲು ಶೆಂಗಾ ಮತ್ತು ಈರುಳ್ಳಿ ಬೆಳೆದು ಎರಡನೇ ಬೆಳೆಯಾಗಿ ರಾಗಿ ಬಿತ್ತನೆ ಮಾಡಿದ್ದರು. ಈಗ ರಾಗಿ ಬೆಳೆಗೆ ಅನುಕೂಲವಾಗಿದೆ ಎಂದು ರೈತರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.