ನರಸಿಂಹರಾಜಪುರ: ಇಲ್ಲಿನ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಹಲವು ವರ್ಷಗಳ ಹಿಂದೆ ಆರಂಭವಾಗಿದ್ದ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಪ್ರಸ್ತುತ ಬಾಗಿಲು ಮುಚ್ಚಿದೆ. ಇಲ್ಲಿ ಲಭ್ಯವಾಗುವ ಔಷಧಿಯನ್ನು ಅವಲಂಬಿಸಿದ್ದ ರೋಗಿಗಳು ಪರದಾಡುವಂತಾಗಿದೆ.
ಬಡ ರೋಗಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮುಕ್ತ ಮಾರುಕಟ್ಟೆಯ ಔಷಧಿ ಮಳಿಗೆಗಳಲ್ಲಿ ಲಭ್ಯವಾಗುವ ಔಷಧಿಗಳ ಬೆಲೆಗಿಂತಲೂ ಕಡಿಮೆ ಬೆಲೆಗೆ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಜನೌಷಧಿ ಕೇಂದ್ರ ತೆರೆಯಲಾಗಿತ್ತು. ಸಾಕಷ್ಟು ಮಂದಿಗೆ ಇದರಿಂದ ಅನುಕೂಲವಾಗಿತ್ತು.
‘ಉತ್ತಮವಾಗಿ ಕಾರ್ಯನಿರ್ವಹಿಸು ತ್ತಿದ್ದ ಈ ಕೇಂದ್ರ ಒಂದು ವಾರದಿಂದ ಬಾಗಿಲು ಮುಚ್ಚಿದೆ. ಇಲ್ಲಿ ನಾಲ್ಕೈದು ತಿಂಗಳಿನಿಂದಲೂ ಮಧುಮೇಹ, ರಕ್ತದ ಒತ್ತಡ ಹಾಗೂ ಇತರೆ ರೋಗಗಳ ನಿಯಂತ್ರಣಕ್ಕೆ ಬೇಕಾದ ಔಷಧಗಳೂ ಲಭ್ಯವಾಗುತ್ತಿರಲಿಲ್ಲ. ರೋಗಿಗಳು ಹಲವು ಬಾರಿ ಮನವಿ ಮಾಡಿದರೂ ಸಹ ತರಿಸಿಕೊಡುತ್ತಿರಲಿಲ್ಲ’ ಎಂಬುದು ಗ್ರಾಹಕರ ಆರೋಪವಾಗಿದೆ.
‘ನಾಲ್ಕೈದು ತಿಂಗಳಿನಿಂದಲೂ ಜನೌಷಧಿ ಕೇಂದ್ರದಲ್ಲಿ ಸಾಮಾನ್ಯ ರೋಗಗಳಿಗೆ ಬೇಕಾದ ಔಷಧಿಗಳು ಲಭ್ಯವಾಗುತ್ತಿರಲಿಲ್ಲ. ಔಷಧಿಗಳು ಕಡಿಮೆ ದರದಲ್ಲಿ ಲಭಿಸುತ್ತಿದ್ದುದರಿಂದ ಅನುಕೂಲವಾಗಿತ್ತು. ಇಲ್ಲಿ ಔಷಧಿ ಲಭಿಸದೆ ಇರುವುದರಿಂದ ಕೊಪ್ಪ ಜನೌಷಧಿ ಕೇಂದ್ರದಿಂದ ಔಷಧಿ ತರಿಸಿಕೊಳ್ಳುತ್ತಿದ್ದೇನೆ’ ಎಂದು ನಿಯಮಿತ ವಾಗಿ ಔಷಧಿ ಖರೀದಿಸುತ್ತಿದ್ದ ಬಿ.ಎಚ್.ಕೈಮರ ಗ್ರಾಮದ ನಿವಾಸಿ ವಾಸುದೇವ್ ಕೋಟ್ಯಾನ್ ತಿಳಿಸಿದರು.
ಈ ಬಗ್ಗೆ ‘ಪ್ರಜಾವಾಣಿ’ ಎಂಎಸ್ ಐಎಲ್‌ನ ಡಿಎಂಒ ಮಂಜುನಾಥ್ ಅವರನ್ನು ಸಂಪರ್ಕಿಸಿದಾಗ, ‘ಈ ಹಿಂದೆ ಔಷಧಿ ಮಳಿಗೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನೌಕರ ಸರ್ಕಾರಕ್ಕೆ ವಂಚನೆ ಮಾಡಿರುವುದರಿಂದ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಕೋವಿಡ್ ಇರುವುದರಿಂದ ಯಾರೂ ಕೆಲಸಕ್ಕೆ ಬರದಿರುವುದರಿಂದ ಹೊಸ ಬರನ್ನು ನೇಮಕ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಬಾಗಿಲು ಮುಚ್ಚಲಾಗಿದೆ’ ಎಂದು ತಿಳಿಸಿದರು.
ಜನೌಷಧಿ ಕೇಂದ್ರ ಬಾಗಿಲು ಮುಚ್ಚಿರುವ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ‘ಸಂಪರ್ಕಿಸಿದಾಗ ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಅವರು ಹೇಳಿದರು.
ಸಾಕಷ್ಟು ಬಡರೋಗಿಗಳ ಆರೋಗ್ಯ ಕಾಪಾಡಲು, ಆರ್ಥಿಕ ಮಿತವ್ಯಯದಲ್ಲಿ ಔಷಧಿ ಲಭ್ಯವಾಗುತ್ತಿದ್ದ ಜನೌಷಧಿ ಕೇಂದ್ರ ಬಾಗಿಲು ಮುಚ್ಚಿರುವುದು ಹಲವು ರೋಗಿಗಳು ಔಷಧಿಯನ್ನು ಅಧಿಕ ಬೆಲೆ ಕೊಟ್ಟು ಖರೀದಿಸುವ ಅಥವಾ ಬೇರೆಡೆಯಿಂದ ಔಷಧಿ ತರಿಸುವ ಸ್ಥಿತಿ ನಿರ್ಮಾಣವಾಗಿದೆ. ಕೋವಿಡ್ ಲಾಕ್‌ಡೌನ್ ಇರುವುದರಿಂದ ಸಂಬಂಧಪಟ್ಟವರು ಕೂಡಲೇ ಇತ್ತ ಗಮನಹರಿಸಿ ಜನೌಷಧಿ ಕೇಂದ್ರದ ಆರಂಭಿಸಿ ಅನುಕೂಲ ಕಲ್ಪಿಸಿ ಕೊಡಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.