ಚಿಕ್ಕಮಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಿ.ಸಿ.ರೋಡ್‌ನಲ್ಲಿನ ಸಿಪಿಐ ಕಚೇರಿ ಮೇಲೆ ದಾಳಿ ನಡೆಸಿರುವುದನ್ನು ಖಂಡಿಸಿ ಸಿಪಿಐ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಕಿಡಿಗೇಡಿಗಳನ್ನು ಬಂಧಿಸುವಂತೆ ಘೋಷಣೆ ಕೂಗಿದರು.
ಸಿಪಿಐ ಮುಖಂಡ ಬಿ.ಅಮ್ಜದ್ ಮಾತನಾಡಿ, ಸುಪ್ರೀಂ ಕೋರ್ಟ್ ತೀರ್ಪನ್ನು ಗೌರವಿಸುವುದು ಎಲ್ಲರ ಕರ್ತವ್ಯವಾಗಿದೆ. ಅದರಂತೆ ಕೇರಳ ಸರ್ಕಾರವು ನಡೆದುಕೊಳ್ಳುತ್ತಿದೆ ಎಂದರು.
‘ಸಿಪಿಐ ಕಾರ್ಯಕರ್ತರೂ ರಾಷ್ಟ್ರಪ್ರೇಮಿಗಳೇ ಆಗಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲಂಘನೆಯಾಗಲು ಬಿಡುವುದಿಲ್ಲ. ಸಂವಿಧಾನದ ಹಿತಾಸಕ್ತಿಗೆ ಧಕ್ಕೆಯಾದರೆ ಕಾರ್ಯಕರ್ತರು ಕೈಕಟ್ಟಿ ಕೂರುವುದಿಲ್ಲ’ ಎಂದರು.
ಜಿಲ್ಲಾ ಸಂಚಾಲಕ ಎಚ್.ಎಂ.ರೇಣುಕಾರಾದ್ಯ ಮಾತನಾಡಿ, ‘ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಇಲ್ಲಿ ಒಳ್ಳೆ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ಎಲ್ಲರಿಗೂ ಸ್ವಾತಂತ್ರ್ಯ ಇದೆ. ಆದರೆ, ಕೆಲ ಕಿಡಿಗೇಡಿಗಳು ರಾತ್ರಿ ಸಮಯದಲ್ಲಿ ಸಿಪಿಐ ಕಚೇರಿ ಮೇಲೆ ದಾಳಿ ನಡೆಸಿ, ಅಲ್ಲಿನ ವಸ್ತುಗಳಿಗೆ ಬೆಂಕಿ ಹಚ್ಚಿರುವುದು ಖಂಡನೀಯ’ ಎಂದರು.
‘ಸ್ತ್ರೀ ಯಾವ ವಯಸ್ಸಿನವರಾದರೇ ಏನು? ಸ್ತ್ರೀ ಯಾವಗಲೂ ಸ್ತ್ರೀ ಆಗಿಯೇ ಇರುತ್ತಾಳೆ. ಅದರಲ್ಲಿ ವಯಸ್ಸಿನ ಭೇದಭಾವ ತೋರುವುದು ಸರಿಯಲ್ಲ. ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲವನ್ನು ಯಾರೂ ರಾಜಕೀಯ ದುರುದ್ದೇಶಕ್ಕೆ ಬಳಸಿಕೊಳ್ಳಬಾರದು’ ಎಂದರು.
ಮುಖಂಡರಾದ ವಿಜಯಕುಮಾರ್, ರಘು, ಆರ್.ಆರ್.ಮಹೇಶ್, ಗುರುಶಾಂತಪ್ಪ, ಗೌಸ್ ಮೊಹಿಯುದ್ದೀನ್, ಗುರುಶಾಂತಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.