ಆಲ್ದೂರು: ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯಕ್ಕೆ ಜಿಲ್ಲೆಯಲ್ಲಿ ಹಿನ್ನೆಡೆಯಾಗಿದೆ. ಮೂರನೇ ಹಂತದಲ್ಲಿ ಶೇ 56.65ರಷ್ಟು ಪ್ರಗತಿ ಸಾಧಿಸಿದ್ದು, ಬಾಕಿ ಪೂರ್ಣಗೊಳಿಸಲು ಇನ್ನು ಏಳುದಿನಗಳಷ್ಟೇ ಬಾಕಿ ಉಳಿದಿವೆ.
ಬೆಳೆ ಸಮೀಕ್ಷೆ ಕಾರ್ಯವು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದೆ. ರೈತರಿಗೆ ಅನುಕೂಲ ಆಗುವಂತೆ ಮೊಬೈಲ್ ಆ್ಯಪ್ ಕೂಡ ಕೃಷಿ ಇಲಾಖೆ ಬಿಡುಗಡೆ ಮಾಡಿದೆ. ರೈತರೇ ಈ ಆ್ಯಪ್ ಬಳಕೆ ಮಾಡಿಕೊಂಡು ಬೆಳೆ ಸಮೀಕ್ಷೆ ಮಾಡಿ ಆಪ್‌ಲೋಡ್ ಮಾಡಲು ಅವಕಾಶ ಇದೆ.
ರಾಜ್ಯದಲ್ಲಿ ಕಳೆದ ವರ್ಷ ಶೇ 98ರಷ್ಟು ಸಮೀಕ್ಷೆ ನಡೆದಿತ್ತು. ಈ ವರ್ಷ ಹಲವು ಬಾರಿ ಅವಕಾಶ ನೀಡಿದರೂ ಶೇ 81.36ರಷ್ಟು ಮಾತ್ರ ಇದೆ. ಆದ್ದರಿಂದ ಸಮೀಕ್ಷೆ ಕಾರ್ಯ ಹೆಚ್ಚಿನದಾಗಿ ನಡೆಯ ಬೇಕು. ಅ. 25ರವರೆಗೆ ಮತ್ತೊಂದು ಅವಕಾಶ ನೀಡಲಾಗಿದೆ ಎಂದು ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ.ಅನ್ಬುಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಶೇ 79.49ರಷ್ಟು ಸಮೀಕ್ಷೆ ಕಾರ್ಯ ನಡೆದಿತ್ತು. ಬಾಕಿ ಉಳಿದಿದ್ದ ಸಮೀಕ್ಷೆಗಳನ್ನು ಎರಡನೇ ಹಂತದಲ್ಲಿ ನಡೆಸಲಾಗಿದ್ದು, ಅವುಗಳ ಪೈಕಿ ಶೇ 58.23ರಷ್ಟು ನಡೆದಿದೆ. ಮೂರನೇ ಹಂತದಲ್ಲಿ 56.65ರಷ್ಟು ನಡೆದಿದೆ.
ಬೆಳೆ ಸಮೀಕ್ಷೆ ಬಗ್ಗೆ ಕೃಷಿ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಜಂಟಿಯಾಗಿ ಸಮೀಕ್ಷೆ ನಡೆಸುತ್ತಿದ್ದಾರೆ. ಬೆಳೆ ಸಮೀಕ್ಷೆಗೆ ಪ್ರತಿನಿಧಿಗಳನ್ನೂ ಕೃಷಿ ಇಲಾಖೆ ನೇಮಕ ಮಾಡಿಕೊಂಡಿದೆ. ಆದರೂ, ಸಮೀಕ್ಷೆ ಕಾರ್ಯ ಕಡಿಮೆಯಾಗಿದೆ.
ರೈತರೇ ನೇರವಾಗಿ ಸಮೀಕ್ಷೆ ನಡೆಸಲು ‘ಫಾರ್ಮರ್ ಕ್ರಾಫ್ಟ್ ಸರ್ವೆ’ ಆ್ಯಪ್ ಬಿಡುಗಡೆ ಮಾಡಲಾಗಿದೆ. ಈ ಆ್ಯಪ್‌ನಲ್ಲಿ ರೈತರೇ ತಮ್ಮ ಬೆಳೆಯ ಚಿತ್ರಗಳನ್ನು ತೆಗೆದು ಅಪ್‌ಲೋಡ್ ಮಾಡಬಹುದು ಎಂದು ಕೃಷಿ ಅಧಿಕಾರಿ ಇಂದ್ರಕುಮಾರ್ ನಾಯಕ್ ತಿಳಿಸಿದರು.
ಬೆಳೆ ಸಮೀಕ್ಷೆ ಮಾಡುವಾಗ ಮೊದಲಿಗೆ ಆಧಾರ್ ಇ– ಕೆವೈಸಿ ಜಮೀನಿನ ಮಾಹಿತಿ ಲಿಂಕ್ ಮಾಡುವ ಪ್ರಕ್ರಿಯೆ ಇದೆ. ಅವುಗಳನ್ನು ನಿರ್ವಹಿಸಿ ಅಪ್‌ಲೋಡ್ ಮಾಡಬೇಕು. ಇಲ್ಲದಿದ್ದರೆ ಬೆಳೆ ಪರಿಹಾರ, ಬೆಳೆವಿಮೆ, ಬೆಂಬಲ ಬೆಲೆ ಸೌಲಭ್ಯ, ಬ್ಯಾಂಕ್ ಸಾಲ ಸೇರಿ ಇತರ ಸೌಲಭ್ಯಗಳಿಂದ ರೈತರು ವಂಚಿತರಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಸಿಬ್ಬಂದಿ ಬೆಳೆ ಸಮೀಕ್ಷೆ ನಡೆಸುವಾಗ ಮಾಡುವ ತಪ್ಪಿನಿಂದ ರೈತರಿಗೆ ಅನ್ಯಾಯವಾಗುವ ಸಾಧ್ಯತೆ ಇರುತ್ತದೆ. ಇದೇ ಕಾರಣಕ್ಕೆ ಸರ್ಕಾರ ರೈತರಿಗೆ ಅವಕಾಶ ನೀಡಿದೆ ಎಂದರು.
ಈ ಆ್ಯಪ್ ಬಳಕೆ ಬಗ್ಗೆ ಯುಟ್ಯೂಬ್‌ನಲ್ಲೂ ಇಲಾಖೆಯಿಂದ ಪ್ರತ್ಯೇಕ ವಿಡಿಯೊ ತುಣುಕು ಹಾಕಲಾಗಿದೆ. ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿಗಳೊಂದಿಗೆ ಕೂಡ ಸಮೀಕ್ಷೆ ನಡೆಸುವ ಬಗ್ಗೆಯೂ ತಿಳಿಸಲಾಗಿದೆ. ರೈತರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೂರು ಹಂತಗಳಲ್ಲಿ ಸಮೀಕ್ಷೆ ನಡೆಯುತ್ತಿದ್ದು, 3,64,591 ತಾಕುಗಳಲ್ಲಿ ಸಮೀಕ್ಷೆ ನಡೆದಿದೆ. ಬಾಕಿ ತಾಲ್ಲೂಕುಗಳ ಸರ್ವೆ ಅ. 25ರೊಳಗೆ ನಡೆಯಬೇಕಿದೆ. ಇಲ್ಲದಿದ್ದರೆ ರೈತರು ಸರ್ಕಾರದ ಸವಲತ್ತುಗಳಿಂದ ವಂಚಿತರಾಗುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.