ಚಿಕ್ಕಮಗಳೂರು: ತಾಲ್ಲೂಕಿನ ಗಿರಿಶ್ರೇಣಿಯ ಶ್ರೀಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ/ಸಂಸ್ಥೆ ಗುಹೆಯ ಮುಂಭಾಗದ ಆವರಣದಲ್ಲಿ ದತ್ತ ಜಯಂತಿ ನಿಮಿತ್ತ ಹೋಮ, ಹವನ ಕೈಂಕರ್ಯಗಳನ್ನು ಅರ್ಚಕರು ಗುರುವಾರ ನೆರವೇರಿಸಿದರು.
ಅರ್ಚಕರಾದ ಪಿ.ಎಂ. ಸಂದೀಪ್, ಕೆ. ಶ್ರೀಧರ, ಪ್ರದೀಪ್, ಪ್ರವೀಣ್ ಅವರು ಪೂಜಾವಿಧಿಗಳನ್ನು ನೆರವೇರಿಸಿದರು. ದತ್ತಪೀಠದಲ್ಲಿ ದತ್ತ ಪಾದುಕೆಗಳಿಗೆ ಪೂಜೆ, ಅಭಿಷೇಕ ಜರುಗಿದವು.
‘ರುದ್ರ ಹೋಮ, ದತ್ತಧಾರಕ ಹೋಮ, ಗುಹೆಯೊಳಗೆ ದತ್ತಪಾದುಕೆಗೆ ಏಕಾದಶಾವರ ರುದ್ರಾಭಿಷೇಕ, ಪೂಜೆ ನೆರವೇರಿಸಲಾಯಿತು’ ಎಂದು ಅರ್ಚಕ ಶ್ರೀಧರ ‘ಪ್ರಜಾವಾಣಿ’ಗೆ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ, ಶಾಸಕ ಸಿ.ಟಿ.ರವಿ, ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಹೋಮದಲ್ಲಿ ಪಾಲ್ಗೊಂಡಿದ್ದರು.
ಈ ಹಿಂದೆ ಗಿರಿಯಲ್ಲಿನ ತಾತ್ಕಾಲಿಕ ಶೆಡ್‌ನಲ್ಲಿ ಹೋಮ, ಹವನ ಜರುಗುತ್ತಿದ್ದವು. ಜಿಲ್ಲೆ ಮತ್ತು ಹೊರ ಜಿಲ್ಲೆಗಳ ಸಹಸ್ರಾರು ಭಕ್ತರು ಗುಹೆಯಲ್ಲಿ ಪಾದುಕೆ ದರ್ಶನ ಪಡೆದರು.
‘2 ದಶಕಗಳ ನಂತರ ಗುಹೆ ಅಂಗಳದಲ್ಲಿ ಹೋಮ’
‘ಎರಡು ದಶಕಗಳ ಹಿಂದೆ ಗುಹೆಯ ಅಂಗಳದಲ್ಲಿ ಹೋಮ ನಡೆದಿತ್ತು. ಆಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಿ.ಬಿ.ಚಂದ್ರೇಗೌಡ ಅವರು ಹೋಮ, ಸಂಕಲ್ಪದಲ್ಲಿ ಪಾಲ್ಗೊಂಡಿದ್ದರು’ ಎಂದು ಸಿ.ಟಿ.ರವಿ ನೆನಪಿಸಿಕೊಂಡರು.
ಗಿರಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ‘ದತ್ತ ಪೀಠದಲ್ಲಿ ಪಾದುಕೆಗೆ ಅರ್ಚಕರಿಂದ ಪೂಜೆ ಆರಂಭವಾಗಿರುವುದು ಖುಷಿ ತಂದಿದೆ. ಮುಂದೆ ದತ್ತಪೀಠ ಮತ್ತು ಬಾಬಾಬುಡನ್ ದರ್ಗಾ ಎರಡೂ ಬೇರೆ ಎಂಬುದನ್ನು ನಿರೂಪಿಸುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತೇವೆ. ಸರ್ಕಾರದಲ್ಲಿ ಆಗದಿದ್ದರೆ ಕೋರ್ಟ್‌ನಲ್ಲಿ ಹೋರಾಟ ಮಾಡುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.