ADVERTISEMENT

ಭೂಮಂಡಲ ಸನಾತನ ಧರ್ಮದವರಿಗೆ ಸೇರಿದ್ದು: ಸಿ.ಟಿ. ರವಿ

ಶ್ರೀರಾಮ ಸೇನೆಯಿಂದ ದತ್ತಮಾಲಾ ಅಭಿಯಾನ: ಶೋಭಾಯಾತ್ರೆ, ಪಾದುಕೆ ದರ್ಶನ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2024, 16:46 IST
Last Updated 10 ನವೆಂಬರ್ 2024, 16:46 IST
ದತ್ತಮಾಲಾ ಅಭಿಯಾನದ ಅಂಗವಾಗಿ ಶ್ರೀರಾಮ ಸೇನೆ ಕಾರ್ಯಕರ್ತರು ಚಿಕ್ಕಮಗಳೂರಿನಲ್ಲಿ ಭಾನುವಾರ ಶೋಭಾಯಾತ್ರೆ ನಡೆಸಿದರು
ದತ್ತಮಾಲಾ ಅಭಿಯಾನದ ಅಂಗವಾಗಿ ಶ್ರೀರಾಮ ಸೇನೆ ಕಾರ್ಯಕರ್ತರು ಚಿಕ್ಕಮಗಳೂರಿನಲ್ಲಿ ಭಾನುವಾರ ಶೋಭಾಯಾತ್ರೆ ನಡೆಸಿದರು   

ಚಿಕ್ಕಮಗಳೂರು: ‘ಸಮಸ್ತ ಭೂಮಂಡಲ ಸನಾತನ ಧರ್ಮದವರಿಗೆ ಸೇರಿದ್ದು. ಈ ಧರ್ಮದಿಂದ ದೂರ ಹೋದವರಿಗೆ ಭೂಮಂಡಲ ನನ್ನದು ಎಂದು ಹೇಳುವ ಅಧಿಕಾರ ಇಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.

ದತ್ತಮಾಲಾ ಅಭಿಯಾನದ ಅಂಗವಾಗಿ ಶ್ರೀರಾಮ ಸೇನೆ ನೇತೃತ್ವದಲ್ಲಿ ಆಯೋಜಿಸಿದ್ದ ಧರ್ಮಸಭೆಯಲ್ಲಿ ಮಾತನಾಡಿದ ಅವರು, ‘ಸನಾತನ ಧರ್ಮದಿಂದ ದೂರ ಹೋದವರಿಗೆ ಭೂಮಿಯ ಮೇಲೆ ಬದುಕುವ ಹಕ್ಕಿದೆಯೇ ಹೊರತು, ನನ್ನದು ಎಂದು ಹೇಳುವ ಅಧಿಕಾರ ಇಲ್ಲ’ ಎಂದರು.

‘ಬಲಿ ಚಕ್ರವರ್ತಿ ಇಡೀ ಭೂಮಂಡಲವನ್ನು ವಿಷ್ಣುವಿನ ಅವತಾರವಾದ ವಾಮನನಿಗೆ ಆ ಕಾಲದಲ್ಲೇ ದಾನ ಕೊಟ್ಟಿದ್ದಾನೆ. ಒಮ್ಮೆ ದಾನ ಸ್ವೀಕಾರ ಮಾಡಿದ ನಂತರ ಮರುದಾನ ಕೊಡುವ ಪದ್ಧತಿ ಇಲ್ಲ. ಕೊಡಲೇಬೇಕೆಂದರೆ ವಾಮನನೇ ಮತ್ತೆ ಬಂದು ಕೊಡಬೇಕು. ಅಲ್ಲಿಯ ತನಕ ಸಮಸ್ತ ಭೂಮಂಡಲವೇ ಮಹಾವಿಷ್ಣುವಿಗೆ ಸೇರಿದ್ದು, ಅಂದರೆ ಸನಾತನ ಧರ್ಮೀಯರಿಗೆ ಸೇರಿದ್ದು’ ಎಂದು ಹೇಳಿದರು.

ADVERTISEMENT

‘ದಶಾವತಾರದಲ್ಲಿ, ಬಹು ದೇವರಾಧಾನೆಯಲ್ಲಿ, ದೇವನೊಬ್ಬ ನಾಮ ಹಲವು ಎಂಬುದರಲ್ಲಿ ನಂಬಿಕೆ ಇರುವವರಿಗೆ ಮಾತ್ರ ವಾರಸುದಾರಿಕೆ ಇದೆ. ಬೇರೆಯವರಿಗೆ ಇಲ್ಲ’ ಎಂದರು.

‘ವಕ್ಫ್‌ ಮಂಡಳಿ ಎಂಬುದು ಆಧುನಿಕ ಭಸ್ಮಾಸುರ ಇದ್ದಂತೆ. ಇಡಿಯಾಗಿ ಸಿಗುವ ಮತಗಳ ಆಸೆಗೆ ಈ ಭಸ್ಮಾಸುರನಿಗೆ ನಮ್ಮವರೇ ವರ ಕೊಟ್ಟಿದ್ದಾರೆ. ಅಂದಿನ ಭಸ್ಮಾಸುರ ಎಲ್ಲರ ತಲೆಯ ಮೇಲೆ ಕೈ ಇಡಲು ಬರುತ್ತಿದ್ದ. ವರ ಕೊಟ್ಟ ಶಿವನನ್ನೇ ಅಟ್ಟಿಸಿಕೊಂಡು ಹೋಗಿದ್ದ. ಆಗ ವಿಷ್ಣು ಮೋಹಿನಿ ರೂಪದಲ್ಲಿ ಬಂದು ಭಸ್ಮಾಸುರನ್ನು ನಾಶ ಮಾಡಿದ ಕಥೆ ಕೇಳಿದ್ದೇವೆ. ಇಂದಿನ ಭಸ್ಮಾಸುರ ಎಲ್ಲರ ಜಮೀನಿನ ಮೇಲೆ ಕೈ ಇಡಲು ಬರುತ್ತಿದ್ದಾನೆ. ವಕ್ಫ್‌ ಮಂಡಳಿ ಎಂಬ ಆಧುನಿಕ ಭಸ್ಮಾಸುರನನ್ನು ನಾಶ ಮಾಡಲು ಇಡೀ ಹಿಂದೂ ಸಮಾಜ ಸಂಘಟಿತವಾಗಿ ಎದ್ದು ನಿಲ್ಲಬೇಕಿದೆ’ ಎಂದರು.

ಶ್ರೀರಾಮ ಸೇನೆ ರಾಜ್ಯ ಘಟಕದ ಅಧ್ಯಕ್ಷ ಗಂಗಾಧರ ಕುಲಕರ್ಣಿ, ವಿಭಾಗೀಯ ಅಧ್ಯಕ್ಷ ರಂಜಿತ್ ಶೆಟ್ಟಿ ಭಾಗವಹಿಸಿದ್ದರು. ಸಭೆಯ ಬಳಿಕ ನಗರದ ಎಂ.ಜಿ. ರಸ್ತೆಯಲ್ಲಿ ನೂರಾರು ಕಾರ್ಯಕರ್ತರು ಶೋಭಾಯಾತ್ರೆ ನಡೆಸಿದರು. ಬಳಿಕ ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾಕ್ಕೆ ಭೇಟಿ ನೀಡಿ, ದತ್ತ ಪಾದುಕೆಯ ದರ್ಶನ ಪಡೆದರು.

ಜಮೀರ್‌ ಅಹಮದ್‌ ನೇಣಿಗೇರಿಸಬೇಕು:ಮುತಾಲಿಕ್ ‘ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 25 ಸಾವಿರಕ್ಕೂ ಹೆಚ್ಚು ಬಾಂಗ್ಲಾ ಮುಸ್ಲಿಮರಿದ್ದಾರೆ. ಅವರಿಗೆ ಮತದಾನದ ಹಕ್ಕನ್ನು ಜಮೀರ್ ಅಹಮದ್ ಕೊಡಿಸಿದ್ದಾರೆ’ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆರೋಪಿಸಿದರು. ‘ಚಾಮರಾಜಪೇಟೆ ಔರಂಗಜೇಬ(ಜಮೀರ್ ಅಹಮದ್) ಈ ರೀತಿಯ ಅನೇಕ ಬ್ಲಂಡರ್‌ಗಳನ್ನು ಮಾಡಿದ್ದಾರೆ. ಅವರನ್ನು ಗಡಿಪಾರು ಮಾಡಬೇಕು ಅಮಾನತು ಮಾಡಬೇಕು ಎಂದು ಬಿಜೆಪಿಯವರು ಆಗ್ರಹಿಸುತ್ತಿದ್ದಾರೆ. ಇದ್ಯಾವುದನ್ನೂ ಮಾಡದೆ ಅವರನ್ನು ಒಂದು ಆಲದ ಮರಕ್ಕೆ ನೇಣು ಹಾಕಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಕ್ಫ್‌ ಆಸ್ತಿ ಹೆಸರಿನಲ್ಲಿ ಬೇಕಾದ ಜಮೀನು ಕಿತ್ತುಕೊಳ್ಳಲು ಇದು ಸಚಿವ ಜಮೀರ್ ಅಹಮದ್ ಅಪ್ಪನ ಆಸ್ತಿಯಲ್ಲ ಎಂದು ಕಿಡಿ ಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.