ಚಿಕ್ಕಮಗಳೂರು: ಶ್ರೀರಾಮ ಸೇನೆಯಿಂದ ಆಯೋಜಿಸಿದ್ದ 21ನೇ ದತ್ತಮಾಲಾ ಅಭಿಯಾನಕ್ಕೆ ಭಾನುವಾರ ತೆರೆ ಬಿದ್ದಿದೆ. ದತ್ತಮಾಲಾಧಾರಿಗಳು ನಗರದಲ್ಲಿ ಶೋಭಾಯಾತ್ರೆ, ಶ್ರೀಗುರು ದತ್ತಾತ್ರೇಯಸ್ವಾಮಿ ಬಾಬಾಬುಡನ್ ದರ್ಗಾದಲ್ಲಿ ದತ್ತ ಪಾದುಕೆ ದರ್ಶನ ಪಡೆದರು.
ನ. 4ರಂದು ದತ್ತಮಾಲಾಧಾರಣೆ ಮೂಲಕ ಅಭಿಯಾನ ಆರಂಭವಾಗಿತ್ತು. ನ. 7ರಂದು ದತ್ತ ದೀಪೋತ್ಸವ, 9ರಂದು ಪಡಿ ಸಂಗ್ರಹ ಮಾಡಲಾಗಿತ್ತು.
ಭಾನುವಾರ ನಗರದ ಶಂಕರಮಠದ ಬಳಿ ನಡೆದ ಧರ್ಮಸಭೆಯ ನಂತರ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ
ಶೋಭಯಾತ್ರೆ ಆರಂಭವಾಯಿತು. ಕೇಸರಿ ಶಲ್ಯ, ಪಂಚೆ, ಬಿಳಿ ಶರ್ಟ್ ಧರಿಸಿದ್ದ ನೂರಾರು ದತ್ತಭಕ್ತರು ದತ್ತ ಭಜನೆ ಮೂಲಕ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಬ್ಯಾಡ್‌ಸೆಟ್ ವಾದನಕ್ಕೆ ಯುವ ಮಾಲಾಧಾರಿಗಳು ಕುಣಿದು ಕುಪ್ಪಳಿಸಿದರು. ಶೋಭಯಾತ್ರೆಯಲ್ಲಿ ಅಲಂಕೃತ ದತ್ತಾತ್ರೇಯರ ಮೂರ್ತಿಯನ್ನು ತರಲಾಯಿತು. ಸಾವರ್ಕರ್ ಸೇರಿ ಹಿಂದೂ ನಾಯಕರ ಭಾವಚಿತ್ರಗಳು ಮೆರವಣಿಗೆಯಲ್ಲಿ ರಾರಾಜಿಸಿದವು.
ಶೋಭಾಯಾತ್ರೆಯು ಎಂ.ಜಿ. ರಸ್ತೆ, ಆಜಾದ್ ಪಾರ್ಕ್ ಮೂಲಕ ಬೋಳರಾಮೇಶ್ವರ ದೇವಸ್ತಾನದ ತನಕ ಸಾಗಿ ಅಂತ್ಯವಾಯಿತು. ಅಲ್ಲಿಂದ ದತ್ತಮಾಲಾಧಾರಿಗಳು ವಾಹನಗಳ ಮೂಲಕ ಶ್ರೀಗುರು ದತ್ತಾತ್ರೇಯಸ್ವಾಮಿ ಬಾಬಾಬುಡನ್ ದರ್ಗಾದತ್ತ ಪ್ರಯಾಣ ಬೆಳೆಸಿದರು.
ಭಜನೆಯೊಂದಿಗೆ ಬ್ಯಾರಿಕೇಡ್‌ನಲ್ಲಿ ಸರತಿ ಸಾಲಿನಲ್ಲಿ ಸಾಗಿದ ಭಕ್ತರು, ಗುಹೆಯೊಳಗೆ ತೆರಳಿ ದತ್ತಪಾದುಕೆ ದರ್ಶನ ಪಡೆದರು. ಸ್ವಾಮೀಜಿಗಳಿಗೆ
ಮಾತ್ರ ದತ್ತಪಾದುಕೆಗೆ ಹೂವು ಹಾಕಿ ಪೂಜೆ ಸಲ್ಲಿಸಲು ಅವಕಾಶವಿತ್ತು. ಪಾದುಕೆ ದರ್ಶನದ ನಂತರ ಹೊರ ಭಾಗದಲ್ಲಿರುವ ಮಂಟಪದಲ್ಲಿ ಗಣಪತಿ ಹೋಮ, ಹವನ ಸೇರಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ರಾಜ್ಯ ಘಟಕದ ಅಧ್ಯಕ್ಷ ಗಂಗಾಧರ ಕುಲಕರ್ಣಿ, ಸಿದ್ದಲಿಂಗ ಸ್ವಾಮೀಜಿ, ವಿಭಾಗೀಯ ಅಧ್ಯಕ್ಷ ರಂಜಿತ್ ಶೆಟ್ಟಿ, ಜಿಲ್ಲಾ ಘಟಕದ ಅಧ್ಯಕ್ಷ ಅರ್ಜುನ್, ಸಂಜಿತ್ ಸುವರ್ಣ, ಜ್ಞಾನೇಂದ್ರ ಜೈನ್ ಪಾಲ್ಗೊಂಡಿದ್ದರು.
ಗೋರಿ ಸ್ಥಳಾಂತರವಾದಾಗ ತೃಪ್ತಿ: ಸಿ.ಟಿ.ರವಿ ದತ್ತಪೀಠದ ಇಷ್ಟ ದಿನಗಳ ಹೋರಾಟದಿಂದ ಸಮಾಧಾನ ಮಾತ್ರ ಸಿಕ್ಕಿದೆ. ಅಲ್ಲಿರುವ ಸಮಾಧಿ ಮತ್ತು ಗೋರಿಗಳು ಸ್ಥಳಾಂತರವಾದರೆ ಮಾತ್ರ ತೃಪ್ತಿ ಸಿಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು. ಧರ್ಮಸಭೆಯಲ್ಲಿ ಮಾತನಾಡಿದ ಅವರು ‘ಹಿಂದೂ ಅರ್ಚಕರ ನೇಮಕದಿಂದ ನಮ್ಮ ಹೋರಾಟಕ್ಕೆ ಸಿಕ್ಕಿರುವುದು ಸಮಾಧಾನ ಮಾತ್ರ. ಬಾಕಿ ಹೋರಾಟವನ್ನು ನ್ಯಾಯಾಲಯದಲ್ಲಿ ಮಾಡೋಣ ಸಮಾಜ ಜಾಗೃತಿಗೊಳಿಸುವ ಕೆಲಸವನ್ನೂ ಜತೆಯಲ್ಲೇ ಮುಂದುವರಿಸೋಣ’ ಎಂದರು. ‘ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರೊಂದಿಗೆ ಹಲವು ವರ್ಷಗಳ ನಂತರ ವೇದಿಕೆ ಹಂಚಿಕೊಳ್ಳುತ್ತಿದ್ದೇನೆ. ಹಿಂದೂ ಸಮಾಜವನ್ನು ಜಾಗೃತಿಗೊಳಿಸುವ ಕೆಲಸವನ್ನು ಯಾರೇ ಮಾಡಿದರೂ ಅದಕ್ಕೆ ಕೈಜೋಡಿಸುವುದು ನನ್ನ ಕೆಲಸ ಎಂದು ಭಾವಿಸಿ ಕಾರ್ಯಕ್ರಮಕ್ಕೆ ಬಂದಿದ್ದೇನೆ’ ಎಂದು ಹೇಳಿದರು. ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮಾತನಾಡಿ ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರಮಾಡಿ ಕೇಸರಿ ಬಾವುಟ ಹಾರಿಸಿದ್ದರೆ ಅದು ದತ್ತಪೀಠದ ಹೋರಾಟದ ಪ್ರತಿಫಲ ಎಂದು ಹೇಳಿದರು. ರಾಜ್ಯ ಘಟಕದ ಅಧ್ಯಕ್ಷ ಗಂಗಾಧರ ಕುಲಕರ್ಣಿ ಮಾತನಾಡಿ ‘ಗುರುದತ್ತಾತ್ರೇಯರ ಪೀಠ ಹಿಂದೂಗಳ ಪೀಠ ಎಂದು ನ್ಯಾಯಾಲಯದಲ್ಲಿ ಮಾನ್ಯತೆ ಸಿಕ್ಕಿದೆ. ದತ್ತಪೀಠವನ್ನು ಸಂಪೂರ್ಣ ಇಸ್ಲಾಮಿಕರಣ ಮಾಡಲು ಹೊರಟಿದ್ದರು. ನಮ್ಮ ನಿರಂತರ ಹೋರಾಟದಿಂದ ಅಲ್ಲಿ ಈಗ ಅರ್ಚಕರಿಂದ ತ್ರಿಕಾಲ ಪೂಜೆ ನಡೆಯುತ್ತಿದೆ. ಅಲ್ಲಿ ಭೂಮಿ ದೇವಸ್ಥಾನಕ್ಕಾಗಿ ನಮ್ಮ ಹೋರಾಟವಲ್ಲ. ಆಗಿರುವ ಅತಿಕ್ರಮಣವನ್ನು ಕಿತ್ತೊಗೆಯುವುದು ನಮ್ಮ ಉದ್ದೇಶ’ ಎಂದರು.
ಬಿಗಿ ಬಂದೋಬಸ್ತ್
ದತ್ತ ಜಯಂತಿ ಅಂಗವಾಗಿ ಚಿಕ್ಕಮಗಳೂರು ನಗರ ಮತ್ತು ಗಿರಿಭಾಗದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. 1700 ಪೊಲೀಸರು ಭದ್ರತೆ ಕೈಗೊಂಡಿದ್ದರು. ಅಭಿಯಾನದ ಅಂಗವಾಗಿ ಮುಳ್ಳಯ್ಯನಗಿರಿ ಸೀತಾಳಯ್ಯನಗಿರಿ ಗಾಳಿಕೆರೆ ಮಾಣಿಕ್ಯಧಾರ ಜಲಪಾತ ವೀಕ್ಷಣೆಗೆ ಬೇರೆ ಪ್ರವಾಸಿಗರನ್ನು ನಿರ್ಬಂಧಿಸಲಾಗಿತ್ತು. ಕೈಮರ ಚೆಕ್‌ಪೋಸ್ಟ್ ಬಳಿಯೇ ಬೇರೆ ವಾಹನಗಳನ್ನು ತಡೆದು ಪೊಲೀಸರು ವಾಪಸ್ ಕಳುಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.