ಚಿಕ್ಕಮಗಳೂರು: ತಾಲ್ಲೂಕಿನ ದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾ ಸಮೀಪ ಆಝಾನ್ ಕೂಗುವ ಜಾಗದಲ್ಲಿ ನಮಗೂ ಧ್ವನಿವರ್ಧಕ ಬಳಕೆ ಹಾಗೂ ಭಜನೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಬಾಬಾಬುಡನ್ ಗಿರಿಯಲ್ಲಿ ಭಕ್ತರು ಗುರುವಾರ ದಿಢೀರ್ ಪ್ರತಿಭಟನೆ ನಡೆಸಿದರು.
‘ಈ ಪ್ರದೇಶದಲ್ಲಿ ಧ್ವನಿವರ್ಧಕ ಬಳಸಿ ಆಝಾನ್ ಕೂಗಲಾಗುತ್ತದೆ. ಅದೇ ಜಾಗದಲ್ಲಿ ನಮಗೂ ಅವಕಾಶ ನೀಡದಿದ್ದರೆ ಮುತ್ತಿಗೆ ಹಾಕುತ್ತೇವೆ’ ಎಂದು ಶ್ರೀರಾಮ ಸೇನೆ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಮುತ್ತಿಗೆಗೆ ಮುಂದಾದ ಪ್ರತಿಭಟನಕಾರರನ್ನು ಪೊಲೀಸರು ತಡೆದರು. ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಹಾಕೆ ಪ್ರತಿಭಟನಕಾರರೊಂದಿಗೆ ಮಾತುಕತೆ ನಡೆಸಿದರು.
‘ನೀವು ದೂರು ನೀಡಿದರೆ ಪರಿಶೀಲಿಸುತ್ತೇವೆ. ನಿಯಮ ಉಲ್ಲಂಘನೆಯಾಗಿದ್ದರೆ ಎಫ್‌ಐಆರ್ ದಾಖಲಿಸುತ್ತೇವೆ’ ಎಂದು ಎಸ್ಪಿ ತಿಳಿಸಿದರು.
ಜಿಲ್ಲಾಡಳಿತ ಡಿ.6ರೊಳಗೆ ಸ್ಪಷ್ಟ ಉತ್ತರ ನೀಡಬೇಕು ಎಂದು ಕೋರಿ ಭಕ್ತರು ಪ್ರತಿಭಟನೆ ಕೈಬಿಟ್ಟರು. ಜೇವರ್ಗಿಯ ಕರುಣೇಶ್ವರ ಮಠದ ಸಿದ್ದಲಿಂಗ ಸ್ವಾಮೀಜಿ, ಕಾಳಿಮಠದ ಋಷಿಕುಮಾರ ಸ್ವಾಮೀಜಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.