ಚಿಕ್ಕಮಗಳೂರು: ಶ್ರೀರಾಮಸೇನೆ ವತಿಯಿಂದ ಜರುಗಿದ 15ನೇ ವರ್ಷದ ದತ್ತಮಾಲಾ ಅಭಿಯಾನ ಅಂಗವಾಗಿ ದತ್ತ ಭಕ್ತರು ಗುರುವಾರ ಗಿರಿಗೆ ತೆರಳಿ ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ದತ್ತ ಪಾದುಕೆ ದರ್ಶನ ಪಡೆದರು.
ಮಾಲಾಧಾರಿಗಳು, ದತ್ತ ಭಕ್ತರು ವಾಹನಗಳಲ್ಲಿ ಗಿರಿಗೆ ತೆರಳಿದರು. ದತ್ತ ಪೀಠದಲ್ಲಿ ಪಾದುಕೆ ದರ್ಶನ ಮಾಡಿ ಭಕ್ತಿ ಸಮರ್ಪಿಸಿದರು. ಗಿರಿ ಶ್ರೇಣಿಯಲ್ಲಿ ಮಂಜುಮುಸುಕು ಆವರಿಸಿತ್ತು. ಚಳಿಯ ವಾತಾವರಣ ಇತ್ತು.
ದತ್ತ ಹೋಮ: ದತ್ತ ಪೀಠ ಆವರಣದ ಹೊರವಲಯದಲ್ಲಿನ ಸಭಾ ಮಂಟಪ ದಲ್ಲಿ ದತ್ತ ಹೋಮ ನೆರವೇರಿಸಿದರು. ದತ್ತಾತ್ರೇಯ ನಾಮಸ್ಮರಣೆ, ಪೂಜಾ ಕೈಂಕರ್ಯಗಳು ಜರುಗಿದವು.
ಭಕ್ತರು ಕೈಂಕರ್ಯಗಳಲ್ಲಿ ಪಾಲ್ಗೊಂಡು ಪುನೀತ ಭಾವ ಮೆರೆದರು. ಪ್ರಸಾದ ವಿತರಿಸಲಾಯಿತು.
ಕೋವಿಡ್ ಬಿಕ್ಕಟ್ಟಿನಿಂದಾಗಿ ಈ ಬಾರಿ ಗಿರಿಗೆ ತೆರಳಲು 100 ಮಂದಿಗೆ ಮೀತಿ ಹೇರಲಾಗಿತ್ತು. ಸುಮಾರು 150 ಮಂದಿ ಪಾಲ್ಗೊಂಡಿದ್ದರು. ಹೊರ ಜಿಲ್ಲೆಗಳಿಂದ ಭಕ್ತರು ಬಂದಿರಲಿಲ್ಲ. ಈ ಭಾರಿ ಶೋಭಾ ಯಾತ್ರೆ, ಧಾರ್ಮಿಕ ಸಭೆಯೂ ಇರಲಿಲ್ಲ.
ಪ್ರಮೋದ್ ಮುತಾಲಿಕ್ ಗೈರು: ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅಭಿಯಾನದಲ್ಲಿ ಪಾಲ್ಗೊಂಡಿರಲಿಲ್ಲ.
‘ಅನಾರೋಗ್ಯದಿಂದಾಗಿ ಮುತಾ ಲಿಕ್ ಅವರು ಈ ಬಾರಿ ಬಂದಿಲ್ಲ’ ಎಂದು ರಂಜಿತ್ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪೊಲೀಸ್ ಭದ್ರತೆ: ಗಿರಿ ಶ್ರೇಣಿ ಮಾರ್ಗದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ದರ್ಗಾ ಆವರಣದ ಸುತ್ತ ಪೊಲೀಸರನ್ನು ನಿಯೋಜಿಸಲಾಗಿತ್ತು. ಅಭಿಯಾನದ ನಿಮಿತ್ತ ಗಿರಿಶ್ರೇಣಿ ತಾಣಗಳಿಗೆ ಪ್ರವಾಸಿ ವಾಹನಗಳಿಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿತ್ತು.
ದತ್ತ ಭಕ್ತರ ಪ್ರತಿಭಟನೆ: ಆಝಾನ್ ಕೂಗುವ ಜಾಗದಲ್ಲಿ ನಮಗೂ ಧ್ವನಿ ವರ್ಧಕ ಬಳಕೆ, ಭಜನೆಗೆ ಅವಕಾಶ ನೀಡಬೇಕು ಎಂದು ದತ್ತ ಭಕ್ತರು ಪ್ರತಿಭಟನೆ ನಡೆಸಿದರು. ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿದರು. ಜಿಲ್ಲಾಧಿಕಾರಿ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು.
ಜಿಲ್ಲಾಧಿಕಾರಿ ಬಳಿಗೆ ಐದಾರು ಮಂದಿ ತೆರಳಿ ಮಾತುಕತೆ ನಡೆಸುವಂತೆ ಪೊಲೀಸರು ತಿಳಿಸಿದರೂ, ಪ್ರತಿಭಟನಕಾರರು ಸುತಾರಾಂ ಒಪ್ಪಲಿಲ್ಲ.
ಜಿಲ್ಲಾಧಿಕಾರಿ ಬಗಾದಿ ಗೌತಮ್, ಎಸ್ಪಿ ಅಕ್ಷಮ್ ಎಂ.ಹಾಕೆ ಸ್ಥಳಕ್ಕೆ ಬಂದು ಪ್ರತಿಭಟನಕಾರರೊಂದಿಗೆ ಮಾತುಕತೆ ನಡೆಸಿದರು.
‘ದತ್ತ ಪೀಠ ಸಮೀಪದಲ್ಲಿ ಆಝಾನ್ ಕೂಗುತ್ತಾರೆ. ಧ್ವನಿವರ್ಧಕ ಬಳಸುತ್ತಾರೆ. ಇದು ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆ’ ಎಂದು ಶ್ರೀರಾಮ ಸೇನೆ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಆರೋಪಿಸಿದರು.
‘ಧ್ವನಿವರ್ಧಕ ಬಳಸಲು ಅವಕಾಶ ಇದ್ದರೆ ಈಗ ತೆರೆವುಗೊಳಿಸಿರುವುದು ಏಕೆ?’ ಎಂದೂ ಪ್ರಶ್ನಿಸಿದರು.
‘ನೀವು ಬುಧವಾರ ಮನವಿ ನೀಡಿದ್ದೀರಿ. ಹಿಂದಿನ ದಾಖಲೆಗಳು, ಕೋರ್ಟ್ ಆದೇಶಗಳು, ಕಾನೂನು ವಿಚಾರಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಸಂಬಂಧಪಟ್ಟವರಿಗೆ ತಿಳಿಸಿದ್ದೇವೆ. ಇದು ಬಹಳ ಸೂಕ್ಷ್ಮ ವಿಚಾರ, ಏಕಾಏಕಿ ನಿರ್ಣಯ ಕೈಗೊಳ್ಳಲು ಸಾಧ್ಯ ಇಲ್ಲ. ವರದಿ ಆಧರಿಸಿ, ಸುಪ್ರೀಂ ಕೋರ್ಟ್ ಆದೇಶದಂತೆ ಕ್ರಮ ವಹಿಸುತ್ತೇವೆ’ ಎಂದು ಜಿಲ್ಲಾಧಿಕಾರಿ ಬಗಾದಿ ಗೌತಮ್ ಪ್ರತಿಭಟನಕಾರರಿಗೆ ಮನವರಿಕೆ ಮಾಡಿದರು.
‘ಈ ಆವರಣದ ಮೂರು ಕಿಲೋ ಮೀಟರ್ ಸುತ್ತ ಧ್ವನಿ ವರ್ಧಕ ಬಳಸುವಂತಿಲ್ಲ. ಇದು ಜಿಲ್ಲಾಡಳಿತಕ್ಕೆ ತಿಳಿದಿಲ್ಲವೇ’ ಎಂದು ಮುಖಂಡ ಮಹೇಶ್ ಕಟ್ಟಿನಮನೆ ಪ್ರಶ್ನಿಸಿದರು.
ಜಿಲ್ಲಾಧಿಕಾರಿ ಬಗಾದಿ ಗೌತಮ್ ಮತ್ತು ಎಸ್ಪಿ ಅಕ್ಷಯ ಅವರು ಮನವಿ ಪರಿಶೀಲಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.
ರಾಜ್ಯ ಸರ್ಕಾರವು ಈ ಬಾರಿ ಚಳಿಗಾಲದ ಅಧಿವೇಶನದಲ್ಲಿ ದತ್ತಪೀಠ ವಿಚಾರ ಇತ್ಯರ್ಥ ಪಡಿಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ ಎಂದು ಕಾಳಿ ಮಠದ ಋಷಿಕುಮಾರ ಸ್ವಾಮೀಜಿ ಎಚ್ಚರಿಸಿದರು.
ಆನಂದ್ ಶೆಟ್ಟಿ ಅಡ್ಯಾರ್, ರಂಜಿತ್ ಶೆಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.