ADVERTISEMENT

ದತ್ತಾತ್ರೇಯ ಬ್ರಾಹ್ಮಣ ಎಂದು ಚುನಾವಣೆಗಾಗಿ ರಾಹುಲ್‌ ಸುಳ್ಳು: ಶೋಭಾ ಟೀಕೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2018, 11:13 IST
Last Updated 28 ನವೆಂಬರ್ 2018, 11:13 IST
ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ   

ಚಿಕ್ಕಮಗಳೂರು: ‘ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗಾಂಧಿ ಅವರು ಚರ್ಚ್‌ನಲ್ಲಿ ಹೆಸರು ನೋಂದಣಿಯಾಗಿರುವುದು ಗೊತ್ತಿದ್ದೂ, ತಾನು ದತ್ತಾತ್ರೇಯ ಬ್ರಾಹ್ಮಣ ಎಂದು ಹೇಳಿಕೊಂಡಿದ್ದಾರೆ. ಚುನಾವಣೆಗಾಗಿ ಸುಳ್ಳು ಹೇಳಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಬುಧವಾರ ಇಲ್ಲಿ ಟೀಕಿಸಿದರು.

‘ನಾವು ಅಪ್ಪನ ಜಾತಿ ಆಧರಿಸಿ ಜಾತಿ ಪ್ರಮಾಣಪತ್ರ ಪಡೆಯುತ್ತೇವೆ. ಅಂತರಧರ್ಮೀಯ, ಅಂತರ್ಜಾತಿ ವಿವಾಹವಾಗಿದ್ದರೂ ಜಾತಿ ಪ್ರಮಾಣಪತ್ರಕ್ಕೆ ಅಪ್ಪನ ಜಾತಿಯೇ ಮಾನದಂಡ. ರಾಹುಲ್‌ಗಾಂಧಿ ಅವರಿಗೆ ಬ್ರಾಹ್ಮಣ ಜಾತಿ ಪ್ರಮಾಣಪತ್ರ ಸಿಕ್ಕಿದ್ದು ಯಾವಾಗ’ ಎಂದು ಪ್ರತಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

ಇದನ್ನೂ ಓದಿ:‘ನಾನು ಕಾಶ್ಮೀರ ಬ್ರಾಹ್ಮಣ, ದತ್ತಾತ್ರೇಯ ಗೋತ್ರ’: ಎಂದಿದ್ದಾರಂತೆ ರಾಹುಲ್‌ ಗಾಂಧಿ

‘ಅಪ್ಪನ ಜಾತಿ ಪರಿಗಣಿಸಿದರೆ ರಾಹುಲ್‌ ಅವರು ದತ್ತಾತ್ರೇಯ ಗೋತ್ರದ ಬ್ರಾಹ್ಮಣರಾಗಿದ್ದು ಹೇಗೆ ಎಂಬುದು ತಿಳಿಯುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಇಂಥ ಹೇಳಿಕೆ ನೀಡಿರುವುದು ಆಶ್ಚರ್ಯದ ಸಂಗತಿ’ ಎಂದು ಕುಟುಕಿದರು.

‘ಐದು ರಾಜ್ಯಗಳಲ್ಲಿ ಈಗ ಚುನಾವಣೆ ಇದೆ. ಚುನಾವಣೆ ರಾಜಕೀಯಕ್ಕಾಗಿ ಕರ್ನಾಟಕದಲ್ಲೂ ‘ಟೆಂಪಲ್‌ ರನ್‌’ (ಗುಡಿ ಸುತ್ತಾಟ) ಮಾಡಿದ್ದರು. ಇತರ ರಾಜ್ಯಗಳಲ್ಲೂ ಅದನ್ನು ಮುಂದುವರಿಸಿದ್ದಾರೆ. ಅಲ್ಪಸಂಖ್ಯಾತರನ್ನು ಒಲೈಕೆ ಮಾಡುವಂಥ ಪ್ರಣಾಳಿಕೆಯನ್ನು ಕಾಂಗ್ರೆಸ್‌ ಬಿಡುಗಡೆ ಮಾಡಿದೆ’ ಎಂದು ಲೇವಡಿ ಮಾಡಿದರು.

ಇದನ್ನೂ ಓದಿ:‘ಬೀದೀಲಿ ತಿಲಕ, ಮನೇಲಿ ಟೋಪಿ’: ಕಾಶ್ಮೀರಿ ಬ್ರಾಹ್ಮಣ ಹೇಳಿಕೆಗೆ ಬಿಜೆಪಿ ವ್ಯಾಖ್ಯಾನ​

‘ಅಭಿವೃದ್ಧಿ ಕಾರ್ಯಗಳಿಗೆ ಶಾಸಕರು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಅನುದಾನ ಕೇಳಿದರೆ, ರೈತರ ಸಾಲಮನ್ನಾದ ಸಬೂಬು ನೀಡುತ್ತಾರೆ. ಎಷ್ಟು ರೈತರ ಸಾಲಮನ್ನಾ ಆಗಿದೆ, ಯಾವ್ಯಾವ ಬ್ಯಾಂಕುಗಳಲ್ಲಿ ಆಗಿದೆ ಎಂಬುದನ್ನು ಮುಖ್ಯಮಂತ್ರಿ ಸ್ಪಷ್ಟಪಡಿಸಬೇಕು. ರಾಜ್ಯದ ಹಣಕಾಸಿನ ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಬೇಕು’ ಎಂದು ಅವರು ಆಗ್ರಹಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.