ADVERTISEMENT

ಚಿಕ್ಕಮಗಳೂರು: ನಾಲ್ಕು ತಿಂಗಳ ಮಗು ಸಾವು, ನರ್ಸ್‌ ನಿರ್ಲಕ್ಷ್ಯ ಆರೋಪ, ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2022, 16:34 IST
Last Updated 28 ಡಿಸೆಂಬರ್ 2022, 16:34 IST
ಚಿಕ್ಕಮಗಳೂರು ನಗರದ ಜಿಲ್ಲಾಸ್ಪತ್ರೆ ಎದುರು ಪ್ರತಿಭಟನೆ ನಡೆಸಲಾಯಿತು
ಚಿಕ್ಕಮಗಳೂರು ನಗರದ ಜಿಲ್ಲಾಸ್ಪತ್ರೆ ಎದುರು ಪ್ರತಿಭಟನೆ ನಡೆಸಲಾಯಿತು   

ಚಿಕ್ಕಮಗಳೂರು: ನಗರದ ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳ ವಿಭಾಗದ ವಾರ್ಡ್‌ನಲ್ಲಿ ನಾಲ್ಕು ತಿಂಗಳ ಗಂಡು ಮಗು ಮೃತಪಟ್ಟಿದ್ದು, ನರ್ಸ್‌ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆರೋಪಿಸಿ ಸಂಬಂಧಿಕರು ಬುಧವಾರ ಪ್ರತಿಭಟನೆ ನಡೆಸಿದರು.

ಹಾಸನ ಜಿಲ್ಲೆಯ ಎಸ್‌.ಸೂರಾಪುರದ ಮೀನಾಕ್ಷಿ ಅವರ ನಾಲ್ಕು ತಿಂಗಳ ಕಂದಮ್ಮ ಮೃತಪಟ್ಟಿದೆ. ಮಧ್ಯಾಹ್ನ ಮಗುವನ್ನು ದಾಖಲಿಸಿದ್ದು, ಸಂಜೆ ಮೃತಪಟ್ಟಿದೆ.

ನವಜಾತ ಶಿಶು ಆರೈಕೆ ವಿಶೇಷ ಘಟಕ (ಎಸ್‌ಎನ್‌ಸಿಯು) ಮುಂಭಾಗದಲ್ಲಿ ಸಂಬಂಧಿಕರು ಪ್ರತಿಭಟನೆ ನಡೆಸಿ, ನರ್ಸ್‌ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಮಗು ತಾಯಿ ಮೀನಾಕ್ಷಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಮಗುವಿಗೆ ಸೋಂಕು (ಇನ್ಪೆಕ್ಷನ್‌) ಆಗಿದೆ. ಐದು ದಿನ ಇರಬೇಕು ಎಂದು ವೈದ್ಯರು ತಿಳಿಸಿದರು. ವಾರ್ಡ್‌ನಲ್ಲಿ ಮಗು ಮೊದಲು ಹಾಲು ಕುಡಿಯಿತು ನಂತರ ಕುಡಿಯಲಿಲ್ಲ. ಹಿಂಸೆ ಮಾಡಿ ಹಾಲುಣಿಸಬೇಡಿ ಎಂದು ವೈದ್ಯರು ಹೇಳಿದರು. ಮಗುವಿಗೆ ಡ್ರಿಪ್ಸ್‌ ಹಾಕಿದರು’ ಎಂದು ತಿಳಿಸಿದರು.

‘ಡ್ರಿಪ್ಸ್‌ ಹನಿ ಹೋಗುತ್ತಿರಲಿಲ್ಲ. ಅದನ್ನು ತೆಗೆಯವಂತೆ ನರ್ಸ್‌ಗೆ ಹೇಳಿದೆವು, ಅವರು ತೆಗೆಯಲಿಲ್ಲ. ಮಗುವಿಗೆ ಹಾಲುಣಿಸುವಂತೆ ನರ್ಸ್‌ ಹೇಳಿದರು. ವೈದ್ಯರು ಹಿಂಸೆಯಿಂದ ಹಾಲುಣಿಸಬೇಡಿ ಎಂದು ಹೇಳಿದ್ದಾರೆ ಎಂದರೂ ಅವರು ಕೇಳಲಿಲ್ಲ. ಮಗುವನ್ನು ನನ್ನ ಎದೆಗೆ ಹಾಕಿ ಹಾಲು ಕುಡಿಯುವಂತೆ ತಟ್ಟಿದರು. ಮಗು ಉಸಿರು ಕಟ್ಟಿತು’ ಎಂದು ಅವರು ಆರೋಪಿಸಿದರು.

*
ಮಗುವಿಗೆ ನಿರಂತರವಾಗಿ ಅಳುತ್ತಿತ್ತು ಎಂದು ಆಸ್ಪತ್ರೆಗೆ ಕರೆ ತಂದಿದ್ದಾರೆ. ಹೆಚ್ಚು ಅಸ್ವಸ್ಥವಾಗಿದ್ದಾಗ ಮಕ್ಕಳು ಅಳವುದು ಜಾಸ್ತಿ. ವೈದ್ಯರು ಪರೀಕ್ಷಿಸಿ ವಾರ್ಡ್‌ಗೆ ದಾಖಲಿಸಿದ್ದಾರೆ. ಎಪಿಲೆಪ್ಸಿಯಿಂದ ಮಗು ಮೃತಪಟ್ಟಿದೆ.
-ಡಾ.ಸಿ.ಮೋಹನಕುಮಾರ್‌, ಜಿಲ್ಲಾ ಶಸ್ತ್ರಚಿಕಿತ್ಸಕ, ಜಿಲ್ಲಾಸ್ಪತ್ರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT