ADVERTISEMENT

ಚಿಕ್ಕಮಗಳೂರು | ಆಮದು ಹೆಚ್ಚಳ: ಕಾಳುಮೆಣಸಿನ ಧಾರಣೆ ಕುಸಿತ

ಶ್ರೀಲಂಕಾದಿಂದ ಕಳಪೆ ಕಾಳುಮೆಣಸು ಆವಕ: ಕೆ.ಜಿಗೆ ₹610ಕ್ಕೆ ಇಳಿದ ಬೆಲೆ

ರವಿ ಕೆಳಂಗಡಿ
Published 23 ಅಕ್ಟೋಬರ್ 2024, 6:32 IST
Last Updated 23 ಅಕ್ಟೋಬರ್ 2024, 6:32 IST
ಕಳಸ ತಾಲ್ಲೂಕಿನಲ್ಲಿ ಬೆಳೆದಿರುವ ಕಾಳುಮೆಣಸಿನ ಬಳ್ಳಿಯಲ್ಲಿ ಅತ್ಯಂತ ಕಡಿಮೆ ಫಸಲು ಇರುವುದು
ಕಳಸ ತಾಲ್ಲೂಕಿನಲ್ಲಿ ಬೆಳೆದಿರುವ ಕಾಳುಮೆಣಸಿನ ಬಳ್ಳಿಯಲ್ಲಿ ಅತ್ಯಂತ ಕಡಿಮೆ ಫಸಲು ಇರುವುದು   

ಕಳಸ (ಚಿಕ್ಕಮಗಳೂರು): ನಾಲ್ಕು ತಿಂಗಳ ಹಿಂದೆ ಕೆ.ಜಿ.ಗೆ ₹700ಕ್ಕೆ ಏರಿಕೆ ಕಂಡಿದ್ದ ಕಾಳುಮೆಣಸಿನ ಧಾರಣೆ ₹610ಕ್ಕೆ ಕುಸಿದಿದೆ. ಶ್ರೀಲಂಕಾದಿಂದ ಭಾರತಕ್ಕೆ ಕಳಪೆ ಗುಣಮಟ್ಟದ ಕಾಳುಮೆಣಸಿನ ಆವಕ ಹೆಚ್ಚಿರುವುದು ದೇಸಿ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಗೆ ಪ್ರಮುಖ ಕಾರಣ ಎನ್ನುತ್ತಾರೆ ಬೆಳೆಗಾರರು.

ಹವಾಮಾನ ವೈಪರೀತ್ಯದಿಂದ ಈ ಬಾರಿ ಮಲೆನಾಡಿನಲ್ಲಿ ಕಾಳುಮೆಣಸಿನ ಇಳುವರಿ ಶೇ 30ರಷ್ಟು ಕುಸಿಯುವ ಸಾಧ್ಯತೆ ಇದೆ. ಇಳುವರಿ ಕುಸಿತದ ಜತೆಗೆ ಬೆಲೆಯಲ್ಲೂ ಇಳಿಕೆಯಾಗುತ್ತಿರುವುದು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

ಶ್ರೀಲಂಕಾ, ವಿಯೆಟ್ನಾಂ, ಬ್ರೆಜಿಲ್, ಈಕ್ವೆಡಾರ್, ಮಡಗಾಸ್ಕರ್‌ನಿಂದ ಭಾರತ ಕಾಳುಮೆಣಸು ಆಮದು ಮಾಡಿಕೊಳ್ಳುತ್ತದೆ. ಕಳೆದ 4 ತಿಂಗಳಲ್ಲಿ 12 ಸಾವಿರ ಟನ್‌ನಷ್ಟು ಕಾಳುಮೆಣಸು ದೇಶಕ್ಕೆ ಬಂದಿದೆ. ಇದರಲ್ಲಿ ಶ್ರೀಲಂಕಾದಿಂದಲೇ 10 ಸಾವಿರ ಟನ್‍ನಷ್ಟು ಕಾಳುಮೆಣಸು ಬಂದಿದೆ. ಮುಕ್ತ ವ್ಯಾಪಾರ ಮಾರುಕಟ್ಟೆ ಒಪ್ಪಂದದ ಪ್ರಕಾರ ಶ್ರೀಲಂಕಾದಿಂದ ಭಾರತಕ್ಕೆ 2,500 ಟನ್‌ ಕಾಳುಮೆಣಸನ್ನು ಯಾವುದೇ ತೆರಿಗೆ ಇಲ್ಲದೆ ತರಬಹುದಾಗಿದೆ. 2,500 ಟನ್‌ಗಿಂತ ಹೆಚ್ಚಿದ್ದರೆ ಮಾತ್ರ ಶೇ 8ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಇದು ವ್ಯಾಪಾರಿಗಳಿಗೆ ಅನುಕೂಲವಾಗಿದ್ದು, ದಾಖಲೆ ಪ್ರಮಾಣದಲ್ಲಿ ಕಾಳುಮೆಣಸಿನ ಆವಕವಾಗುತ್ತಿದೆ ಎನ್ನುತ್ತಾರೆ ಸ್ಥಳೀಯ ವ್ಯಾಪಾರಿಗಳು.

ADVERTISEMENT

ಶ್ರೀಲಂಕಾದಿಂದ ಭಾರತಕ್ಕೆ ಬರುವ ಕಾಳುಮೆಣಸು ಹಗುರವಾಗಿದ್ದು ಹೆಚ್ಚಿನ ತೇವಾಂಶ ಹೊಂದಿದೆ ಎಂಬ ದೂರು ಇದೆ. ಬೆಲೆ ಕಡಿಮೆ ಇರುವುದರಿಂದ ಆಮದು ಮಾಡಿಕೊಂಡ ಕಳಪೆ ಗುಣಮಟ್ಟದ ಕಾಳುಮೆಣಸಿನ ಮಾರಾಟ ಮಾರುಕಟ್ಟೆಯಲ್ಲಿ ಜೋರಾಗಿದೆ. ಪರಿಣಾಮ, ದೇಶದಲ್ಲಿ ಬೆಳೆಯುವ ಗುಣಮಟ್ಟದ ಕಾಳುಮೆಣಸಿಗೆ ಬೆಲೆ ಮತ್ತು ಬೇಡಿಕೆ ಕಡಿಮೆಯಾಗಿದೆ ಎಂದು ಗೌತಹಳ್ಳಿಯ ಕಾಳುಮೆಣಸು ಬೆಳೆಗಾರ ಕರಣ್ ಹೇಳಿದರು.

‘ಶ್ರೀಲಂಕಾದಿಂದ ಕಾಳುಮೆಣಸು ಆಮದು ಮಾಡಿಕೊಂಡು ಇಲ್ಲಿನ ಉತ್ಪನ್ನದೊಂದಿಗೆ ಮಿಶ್ರಣ ಮಾಡಿ ಅದನ್ನು ವಿದೇಶಕ್ಕೆ ಮರು ರಫ್ತು ಮಾಡುವ ಯತ್ನವೂ ನಡೆಯುತ್ತಿದೆ. ಇದರಿಂದ ಭಾರತದ ಕಾಳುಮೆಣಸಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೆಟ್ಟ ಹೆಸರು ಬಂದು, ಬೆಲೆ, ಬೇಡಿಕೆ ಕುಸಿಯುವ ಸಾಧ್ಯತೆ ಇದೆ’ ಎನ್ನುತ್ತಾರೆ ಬೆಳೆಗಾರರು.

ಶ್ರೀಲಂಕಾದಿಂದ ಕಳಪೆ ಗುಣಮಟ್ಟದ ಕಾಳು ಮೆಣಸಿನ ಆಮದು ತಡೆದು ದೇಶದಲ್ಲಿ ಬೆಳೆಯುವ ಕಾಳುಮೆಣಸಿಗೆ ಉತ್ತಮ ಧಾರಣೆ ದೊರೆಯುವಂತೆ ಮಾಡುವುದು ಸರ್ಕಾರದ ಕರ್ತವ್ಯ.
-ಲಿಂಬೆಕೊಂಡ ಚಂದ್ರಶೇಖರ್, ಕಾಳುಮೆಣಸು ಬೆಳೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.