ADVERTISEMENT

ಕಡೂರು | ಒತ್ತುವರಿ ತೆರವು ವಿಳಂಬ: ಆಕ್ಷೇಪ

ಕಡೂರು ತಾಲ್ಲೂಕಿನ ಹಿರೇನಲ್ಲೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಜಾಗ

ಬಾಲು ಮಚ್ಚೇರಿ
Published 18 ಜೂನ್ 2024, 7:06 IST
Last Updated 18 ಜೂನ್ 2024, 7:06 IST
ಹಿರೇನಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ
ಹಿರೇನಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ   

ಕಡೂರು: ತಾಲ್ಲೂಕಿನ ಹಿರೇನಲ್ಲೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಜಾಗ ಒತ್ತುವರಿ ಮಾಡಿ ವ್ಯಕ್ತಿಯೊಬ್ಬರು ಕಟ್ಟಡ ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿರುವ ಸ್ಥಳೀಯರು, ಇದನ್ನು ತಡೆಯಲು ಸಂಬಂಧಿಸಿದವರು ಮುಂದಾಗುತ್ತಿಲ್ಲ ಎಂದು ದೂರಿದ್ದಾರೆ.

1965 ರಲ್ಲಿ ದಾನಿಯೊಬ್ಬರು ಆಸ್ಪತ್ರೆ ನಿರ್ಮಾಣಕ್ಕಾಗಿ ದಾನಪತ್ರ ಮಾಡಿಕೊಟ್ಟಿದ್ದಾರೆ. ಆ ಜಾಗವೂ ಸೇರಿದಂತೆ ಆರೋಗ್ಯ ಇಲಾಖೆಯ ಸುಪರ್ದಿನಲ್ಲಿ 4.55 ಎಕರೆ ಜಾಗವಿದೆ. 500×360 ಜಾಗ ಆರೋಗ್ಯ ಇಲಾಖೆಗೆ ಸೇರಿದ್ದೆಂದು ಗ್ರಾಮ ಪಂಚಾಯಿತಿ ಅಸೆಸ್‌ಮೆಂಟ್ ದಾಖಲೆ ಹೇಳುತ್ತದೆ. ಈ ಜಾಗದಲ್ಲಿಯೇ 1967 ರಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಈ ಕೇಂದ್ರವನ್ನು ಮೇಲ್ದರ್ಜೆಗೇರಿಸಿ‌ ಸಮುದಾಯ ಆರೋಗ್ಯ ಕೇಂದ್ರವನ್ನಾಗಿಸಲು ಪ್ರಸ್ತಾವನೆಯಿದೆ. ಈ ನಡುವೆ  ಆಸ್ಪತ್ರೆ ಜಾಗವನ್ನು ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಕಟ್ಟಡ ನಿರ್ಮಿಸುತ್ತಿರುವವರು ಈ ಜಾಗ ತಮಗೆ ಸೇರಿದೆ ಎಂದು ವಾದಿಸುತ್ತಿದ್ದಾರೆ. ಸದರಿ ಜಾಗದ ಮ್ಯುಟೇಷನ್ ರದ್ದು ಪಡಿಸಿ ತಮಗೆ ಸೇರಿದ ಜಾಗವನ್ನು ಸರ್ವೆ ಮಾಡಿಸಿ ಜಾಗವನ್ನು ಆರೋಗ್ಯ ಇಲಾಖೆಗೆ ಖಾತೆ ಮಾಡಿಸಿಕೊಡುವಂತೆ ತಹಶೀಲ್ದಾರ್‌ಗೆ ಮನವಿ ಮಾಡಲಾಗಿದೆ. ಆದರೆ ಈ ಬಗ್ಗೆ ಯಾವುದೇ ಪ್ರಗತಿಯಾಗಿಲ್ಲ. ಈ ನಡುವೆ ತರೀಕೆರೆ ಉಪ ವಿಭಾಗಾಧಿಕಾರಿಯವರು ಪ್ರಸ್ತುತ ಜಾಗದಲ್ಲಿ ಯಥಾಸ್ಥಿತಿ ಕಾಪಾಡುವಂತೆ ಫೆಬ್ರವರಿ‌28 ರಂದು ಆದೇಶ ಮಾಡಿದ್ದಾರೆ. ಹೀಗಿದ್ದರೂ ಕಟ್ಟಡ ಕಾಮಗಾರಿ ಮುಂದುವರಿದಿದೆ.

ADVERTISEMENT

ಆರೋಗ್ಯ ಇಲಾಖೆ ಜಾಗವನ್ನು ಅತಿಕ್ರಮಿಸಿರುವ ಬಗ್ಗೆ ಜಿಲ್ಲಾ ಕೆಡಿಪಿ ಸಭೆಯಲ್ಲಿಯೂ ಪ್ರಸ್ತಾಪವಾಗಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಕಾರ್ಯದರ್ಶಿ ರಾಜೇಂದ್ರ ಸಿಂಗ್ ಕಟಾರಿಯಾ ಸಮ್ಮುಖದಲ್ಲಿ ಆಸ್ಪತ್ರೆ ಜಾಗವನ್ನು ತೆರವುಗೊಳಿಸುವ ಕುರಿತು ಕ್ರಮ ವಹಿಸುವ ಬಗ್ಗೆ ಚರ್ಚೆಯೂ ನಡೆದಿದೆ. ಆದರೆ, ಇದುವರೆಗೆ ತೆರವು ಕಾರ್ಯ ನಡೆದಿಲ್ಲ. ಒತ್ತುವರಿ ತೆರವುಗೊಳಿಸಲು ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ಮುಂದಾಗಬೇಕೆಂಬುದು ಸಾರ್ವಜನಿಕರ ಆಗ್ರಹ.

ಗ್ರಾಮಪಂಚಾಯಿತಿಯ ಸ್ಪಷ್ಟನೆ

ಈ ಜಾಗದ ಬಗ್ಗೆ ತಮ್ಮ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಯಥಾಸ್ಥಿತಿ ಕಾಪಾಡಲು ಮಧ್ಯಂತರ ತಡೆಯಾಜ್ಞೆ ನೀಡಲಾಗಿದೆ. ಸರ್ಕಾರಿ ಜಾಗ ಒತ್ತುವರಿಗೆ ಅವಕಾಶ ನೀಡುವುದಿಲ್ಲ.

-ಕಾಂತರಾಜು ಉಪ ವಿಭಾಗಾಧಿಕಾರಿ

ಹಿರೇನಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಜಾಗವನ್ನು ಸರ್ವೆ ಮಾಡಿಸಿ ಸರಹದ್ದು ಗುರುತಿಸಿಕೊಡುವಂತೆ ಕಂದಾಯ ಇಲಾಖೆಗೆ ಪತ್ರ ಬರೆಯಲಾಗಿದೆ.

- ರವಿಕುಮಾರ್. ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

ಕೂಡಲೇ ಕ್ರಮ ವಹಿಸಬೇಕು’ ಸರ್ಕಾರಿ ಜಾಗವನ್ನು ಉಳಿಸುವುದು ನಮ್ಮ ಕರ್ತವ್ಯ. ಹಿರೇನಲ್ಲೂರಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲು ಜಾಗದ ಒತ್ತುವರಿ ತೆರವಿಗೆ ಅಧಿಕಾರಿಗಳು ಯಾಕೆ ಮುಂದಾಗುತ್ತಿಲ್ಲ ಎಂಬುದು ಪ್ರಶ್ನೆಯಾಗಿದೆ. ಶಾಸಕನಾಗಿ ಈ ಕುರಿತು ಜಿಲ್ಲಾ ಕೆಡಿಪಿ ಸಭೆಯಲ್ಲೆ ಪ್ರಸ್ತಾಪಿಸಿದ್ದೇನೆ. ಉಸ್ತುವಾರಿ ಸಚಿವರೂ ಸಹ ಒತ್ತುವರಿ ತೆರವಿಗೆ ಸೂಚಿಸಿದ್ದಾರೆ. ವಿಳಂಬ ಮಾಡದೆ ಜಿಲ್ಲಾಡಳಿತ ಮತ್ತು ಸಂಬಂದಿಸಿದವರು ಕೂಡಲೇ ಕ್ರಮ ಕೈಗೊಳ್ಳಬೇಕು. ಕೆ.ಎಸ್.ಆನಂದ್.ಶಾಸಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.