ADVERTISEMENT

ನರಸಿಂಹರಾಜಪುರ: ಉದ್ಘಾಟನೆ ಭಾಗ್ಯ ಕಾಣದ ಪ್ರಯೋಗಾಲಯ

ಕೆ.ವಿ.ನಾಗರಾಜ್
Published 9 ಮಾರ್ಚ್ 2024, 5:09 IST
Last Updated 9 ಮಾರ್ಚ್ 2024, 5:09 IST
ನರಸಿಂಹರಾಜಪುರದ ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನಿರ್ಮಿಸಿರುವ ಕೇಂದ್ರ ಪ್ರಯೋಗಾಲಯ ಕಟ್ಟಡ
ನರಸಿಂಹರಾಜಪುರದ ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನಿರ್ಮಿಸಿರುವ ಕೇಂದ್ರ ಪ್ರಯೋಗಾಲಯ ಕಟ್ಟಡ   

ನರಸಿಂಹರಾಜಪುರ: ಪಟ್ಟಣದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ನಿರ್ಮಿಸಿರುವ ಬ್ಲಾಕ್ ಲೆವೆಲ್ ಪಬ್ಲಿಕ್ ಹೆಲ್ತ್ ಲ್ಯಾಬೋರೆಟರಿಸ್ (ಬಿಎಲ್‌ಪಿಎಚ್‌ಎಲ್) ಕಟ್ಟಡ ನಿರ್ಮಾಣಗೊಂಡು ಹಲವು ತಿಂಗಳುಗಳು ಕಳೆದರೂ ಇನ್ನೂ ಉದ್ಘಾಟನೆಯಾಗಿಲ್ಲ.

ಕೇಂದ್ರ ಸರ್ಕಾರದ ಪಿಎಂ ಕೇರ್ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ಶೇ 65:35ರ ಅನುಪಾತದಲ್ಲಿ ಬಹುತೇಕ ಎಲ್ಲ ತಾಲ್ಲೂಕು ಕೇಂದ್ರದ ಆಸ್ಪತ್ರೆಗಳಲ್ಲಿ ಪ್ರಯೋಗಾಲಯ ಕಟ್ಟಡ ನಿರ್ಮಿಸಲಾಗಿದೆ. ಅಂತೆಯೇ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ₹40 ಲಕ್ಷ ವೆಚ್ಚದಲ್ಲಿ ಪ್ರತ್ಯೇಕ ಪ್ರಯೋಗಾಲಯ ಕಟ್ಟಡ ನಿರ್ಮಿಸಲಾಗಿದೆ.

ಈ ಕಟ್ಟಡ ಉದ್ಘಾಟನೆಯಾದರೆ, ಆಸ್ಪತ್ರೆಯ ಒಳಗಿರುವ ಪ್ರಯೋಗಾಲಯಗಳು ಇಲ್ಲಿಗೆ ಸ್ಥಳಾಂತರಗೊಳ್ಳುತ್ತವೆ. ಈಗಾಗಲೇ ಮೈಕ್ರೊಸ್ಕೋಪ್ , ಓವನ್, ಎಲೆಕ್ಟ್ರೊಲೈಟ್ ಎನಲೈಸರ್, ಇಎಸ್‌ಆರ್ ಎನಲೈಸರ್, ಎರಡು ರೆಫ್ರಿಜರೇಟರ್ ಸರ್ಕಾರದಿಂದ ಪೂರೈಕೆಯಾಗಿದೆ. ಆದರೆ, ಇವು ಬಳಕೆಯಾಗದೆ ನಿರುಪಯುಕ್ತವಾಗಿವೆ.

ADVERTISEMENT

ಕಟ್ಟಡದ ಕಾಮಗಾರಿ ಪೂರ್ಣಗೊಂಡಿರುವುದರಿಂದ ಮೇಲಧಿಕಾರಿಗಳ ಆದೇಶದಂತೆ ಕಟ್ಟಡವನ್ನು ಗುತ್ತಿಗೆದಾರರಿಂದ ಆಸ್ಪತ್ರೆಗೆ ಹಸ್ತಾಂತರಿಸಿಕೊಳ್ಳಲಾಗಿದೆ. ಕಟ್ಟಡ ಉದ್ಘಾಟನೆಯ ಸಮಯ ನಿಗದಿಗೆ ಕಳೆದ ಜನವರಿಯಲ್ಲೇ ಸಂಸದರಿಗೆ ಪತ್ರ ಬರೆಯಲಾಗಿದೆ ಎಂದು ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಡಾ.ವಿಜಯಕುಮಾರ್ ತಿಳಿಸಿದರು.

ಕಟ್ಟಡ ಉದ್ಘಾಟನೆಯ ಸಮಯ ನಿಗದಿಗೆ ಶಾಸಕರು ಹಾಗೂ ಸಂಸದರನ್ನು ಕೇಳಿಕೊಳ್ಳಲಾಗಿದೆ. ಸಂಸದರು ಕರೆ ಸ್ವೀಕರಿಸದಿರುವುದರಿಂದ ಅವರ ಆಪ್ತ ಸಹಾಯಕರ ಮೂಲಕ ಮನವಿ ಮಾಡಲಾಗಿದೆ. ಆರೋಗ್ಯ ಇಲಾಖೆಯ ಆಯುಕ್ತರು, ರಾಜ್ಯದ ಎಲ್ಲ ಕೇಂದ್ರ ಪ್ರಯೋಗಾಲಯಗಳನ್ನು ವರ್ಚುವಲ್ ಮೂಲಕ ಪ್ರಧಾನಿ ಉದ್ಘಾಟಿಸುವುದಾಗಿ ತಿಳಿಸಿದ್ದಾರೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಅಶ್ವಥ್ ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಯೋಗಾಲಯ ಉದ್ಘಾಟನೆಗೆ ಎರಡು ಬಾರಿ ಸಮಯ ನಿಗದಿ ಮಾಡಲಾಗಿತ್ತು. ಸ್ಥಳೀಯ ಸಂಸದರು ಸಮಯ ನೀಡುತ್ತಿಲ್ಲ. ಶಿಷ್ಟಾಚಾರ ಪಾಲನೆಯೊಂದಿಗೆ ಉದ್ಘಾಟಿಸಿ ಸಾರ್ವಜನಿಕ ಸೇವೆಗೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಪ್ರಯೋಗಾಲಯಕ್ಕೆ ಬೇಕಾಗಿರುವ ಉಪಕರಣಗಳು ಬಂದು ಹಲವು ತಿಂಗಳುಗಳೇ ಕಳೆದಿವೆ. ಶೀಘ್ರ ಉದ್ಘಾಟನೆ ಆಗಬೇಕು ಎಂದು ಆಸ್ಪತ್ರೆ ರಕ್ಷಾ ಸಮಿತಿ ಸದಸ್ಯ ಶ್ರೀಧರ್ ಒತ್ತಾಯಿಸಿದರು. ಸಂಸದರು ಫೋನ್ ಕರೆಗೆ ಲಭ್ಯರಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.