ADVERTISEMENT

ಚಿಕ್ಕಮಗಳೂರು: ಇಂದಿರಾ ಕ್ಯಾಂಟೀನ್‌ಗೆ ಬೇಡಿಕೆ; ಹೆಚ್ಚುವರಿ ಕ್ಯಾಂಟೀನ್‌ಗೆ ಒತ್ತಾಯ

ವಿಜಯಕುಮಾರ್ ಎಸ್.ಕೆ.
Published 17 ಜೂನ್ 2024, 7:14 IST
Last Updated 17 ಜೂನ್ 2024, 7:14 IST
ಚಿಕ್ಕಮಗಳೂರಿನ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಸೇವಿಸುತ್ತಿರುವ ಶ್ರಮಿಕರು
ಚಿಕ್ಕಮಗಳೂರಿನ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಸೇವಿಸುತ್ತಿರುವ ಶ್ರಮಿಕರು   

ಚಿಕ್ಕಮಗಳೂರು: ಜಿಲ್ಲೆಯಲ್ಲಿನ ಇಂದಿರಾ ಕ್ಯಾಂಟೀನ್‌ಗಳು ಬಡವರು ಮತ್ತು ವಿದ್ಯಾರ್ಥಿಗಳ ಅನ್ನದ ಬಟ್ಟಲಾಗಿದ್ದು, ಇನ್ನಷ್ಟು ಕ್ಯಾಂಟೀನ್‌ಗಳನ್ನು ತೆರೆಯಬೇಕು ಎಂಬ ಬೇಡಿಕೆ ನಗರದಲ್ಲಿದೆ.

ಜಿಲ್ಲೆಯಲ್ಲಿ ಒಟ್ಟು ಏಳು ಇಂದಿರಾ ಕ್ಯಾಂಟೀನ್‌ಗಳಿದ್ದು, ಪ್ರತಿನಿತ್ಯ ಸರಾಸರಿ 4 ಸಾವಿರ ಬಡವರ ಹೊಟ್ಟೆ ತುಂಬಿಸುತ್ತಿವೆ. ಚಿಕ್ಕಮಗಳೂರು ನಗರದಲ್ಲಿನ ಇಂದಿರಾ ಕ್ಯಾಂಟೀನ್‌ಗಳ ಬಳಿ ಹೋಗಿ ನಿಂತರೆ ಶ್ರಮಿಕರು ಮತ್ತು ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಊಟ–ಉಪಾಹಾರ ಸೇವಿಸುವುದು ಕಾಣಿಸುತ್ತದೆ. 

ಕಾರ್ಮಿಕರು, ಆಟೊ ರಿಕ್ಷಾ ಚಾಲಕರು, ಅಂಗಡಿ–ಮುಂಗಟ್ಟುಗಳಲ್ಲಿ ದುಡಿಯುವವರು, ಸೆಕ್ಯೂರಿಟಿ ಕೆಲಸ ಮಾಡುವವರು ಹೀಗೆ ಹಸಿದವರೇ ಹೆಚ್ಚಿನ ಸಂಖ್ಯೆಯಲ್ಲಿ ಇಂದಿರಾ ಕ್ಯಾಂಟೀನ್ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಾರಾಂತ್ಯದಲ್ಲಿ ಪ್ರವಾಸಿಗರೂ ಉಪಾಹಾರ ಸೇವಿಸುತ್ತಾರೆ ಎಂದು ಇಂದಿರಾ ಕ್ಯಾಂಟೀನ್ ನಿರ್ವಹಣೆ ಮಾಡುವವರು ಹೇಳುತ್ತಾರೆ.

ADVERTISEMENT

ಬೆಳಿಗ್ಗೆ ಉಪಾಹಾರಕ್ಕೆ ಚಿತ್ರಾನ್ನ, ಪಲಾವು, ಟೊಮೊಟೊ ಬಾತು ತಯಾರಿಸಲಾಗುತ್ತದೆ. ಭಾನುವಾರ ವಿಶೇಷವಾಗಿ ಉಪ್ಪಿಟ್ಟು ಕೇಸರಿ ಬಾತು ನೀಡಲಾಗುತ್ತಿದೆ. ಮಧ್ಯಾಹ್ನ ಅನ್ನ, ಸಾಂಬರ್, ಮೊಸರನ್ನ, ಉಪ್ಪಿನಕಾಯಿ ನೀಡಲಾಗುತ್ತದೆ. ರಾತ್ರಿ ಊಟಕ್ಕೆ ಅನ್ನ, ಸಾಂಬರ್ ಅಥವಾ ಪಲಾವು ನೀಡಲಾಗುತ್ತಿದೆ.

ಬೆಳಿಗ್ಗೆ ತಿಂಡಿ, ರಾತ್ರಿ ಊಟ ಸೇರಿ ದಿನಕ್ಕೆ ಸರಾಸರಿ 1,500 ಜನ ಊಟ–ಉಪಾಹಾರ ಮಾಡುತ್ತಿದ್ದಾರೆ. ₹10ಕ್ಕೆ ಒಂದು ಬೌಲ್ ಮಾತ್ರ ಅನ್ನ ಸಿಗುತ್ತಿದ್ದು, ಅದು ಹಸಿದವರ ಹೊಟ್ಟೆ ತುಂಬಿಸುವುದಿಲ್ಲ. ಶ್ರಮಿಕರಲ್ಲಿ ಬಹುತೇಕರು ₹20 ನೀಡಿ ಎರಡು ಬೌಲ್ ಅನ್ನ ಪಡೆಯುವುದು ಸಾಮಾನ್ಯ.

ಮಧ್ಯಾಹ್ನದ ಊಟಕ್ಕೆ ಬಹುತೇಕ ವಿದ್ಯಾರ್ಥಿಗಳೇ ಇಂದಿರಾ ಕ್ಯಾಂಟೀನ್‌ಗೆ ಮುತ್ತಿಗೆ ಹಾಕಿರುತ್ತಾರೆ. ನಗರದಲ್ಲಿ ಒಂದೇ ಕ್ಯಾಂಟೀನ್ ಇದ್ದು, ಬಸ್ ನಿಲ್ದಾಣದ ಪಕ್ಕದಲ್ಲೇ ಇದೆ. ಬೆಳಿಗ್ಗೆ ಬೇಗ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟಕ್ಕೆ ಇಂದಿರಾ ಕ್ಯಾಂಟೀನ್ ಆಧಾರವಾಗಿದೆ.

ನಗರದ ಆಜಾದ್ ಪಾರ್ಕ್‌ ವೃತ್ತದ ಬಳಿ ಮತ್ತೊಂದು ಇಂದಿರಾ ಕ್ಯಾಂಟೀನ್ ತೆರೆದರೆ ಇನ್ನಷ್ಟು ಅನುಕೂಲ ಆಗಲಿದೆ ಎನ್ನುತ್ತಾರೆ ವಿದ್ಯಾರ್ಥಿಗಳು. ಆಜಾದ್ ಪಾರ್ಕ್ ವೃತ್ತ ಎಂದರೆ ಸದಾ ಜನರಿಂದ ಗಿಜಿಗುಡುವ ಪ್ರದೇಶ. ಪಕ್ಕದಲ್ಲೇ ಸರ್ಕಾರಿ ಆಸ್ಪತ್ರೆ ಇದ್ದು, ಅಲ್ಲಿಗೆ ಬರುವ ಹೊರ ರೋಗಿಗಳು ಮತ್ತು ಅವರ ಸಂಬಂಧಿಕರಿಗೆ ಅನುಕೂಲ ಆಗಲಿದೆ. ಅಲ್ಲದೇ ಪಕ್ಕದಲ್ಲೇ ಸರ್ಕಾರಿ ಜ್ಯೂನಿಯರ್ ಕಾಲೇಜಿದ್ದು, ಅಲ್ಲಿನ ವಿದ್ಯಾರ್ಥಿಗಳಿಗೂ ಹೆಚ್ಚು ಉಪಯೋಗವಾಗಲಿದೆ.

ಇಂದಿರಾ ಕ್ಯಾಂಟೀನ್ ಇಲ್ಲದಿರುವುದರಿಂದ ಸುತ್ತಮುತ್ತ ಇರುವ ಹೋಟೆಲ್ ಮತ್ತು ಕೈಗಾಡಿಗಳಲ್ಲಿ ದುಬಾರಿ ಹಣ ಪಾವತಿಸಿ ಊಟ–ಉಪಾಹಾರ ಮಾಡುವುದು ಅನಿವಾರ್ಯವಾಗಿದೆ. 

‘ಆಜಾದ್ ಪಾರ್ಕ್ ಬಳಿ ಇಂದಿರಾ ಕ್ಯಾಂಟೀನ್ ತೆರೆಯಲು ಈ ಹಿಂದೆಯೇ ಜಾಗ ಗುರುತಿಸಲಾಗಿತ್ತು. ನಿರ್ಮಾಣಕ್ಕೆ ಬೇಕಿರುವ ಸಲಕರಣೆಗಳನ್ನು ಕ್ರೇನ್‌ಗಳ ಸಹಿತ ತರಲಾಗಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ಕಾಮಗಾರಿ ಆರಂಭಿಸಲು ಆಗಲಿಲ್ಲ. ಚಿಕ್ಕಮಗಳೂರು ನಗರದಲ್ಲಿ ನಿರ್ಮಾಣವಾಗಬೇಕಿದ್ದ ಎರಡನೇ ಇಂದಿರಾ ಕ್ಯಾಂಟೀನ್ ಬೇರೆ ಜಿಲ್ಲೆಗೆ ವರ್ಗಾಯಿಸಲಾಯಿತು. ಈಗಲಾದರೂ ಜಾಗದ ಸಮಸ್ಯೆ ಬಗೆಹರಿಸಿ ಇಂದಿರಾ ಕ್ಯಾಂಟೀನ್ ತೆರೆಯಬೇಕು’ ಎಂದು ಕೆಂಪನಹಳ್ಳಿ ಲೋಹಿತ್ ಹೇಳಿದರು.

ಹೊಸ ತಾಲ್ಲೂಕುಗಳಾದ ಕಳಸ ಮತ್ತು ಅಜ್ಜಂಪುರದಲ್ಲಿ ಇಂದಿರಾ ಕ್ಯಾಂಟೀನ್‌ಗಳಿಲ್ಲ. ಅಲ್ಲಿಯೂ ತೆರೆಯಬೇಕೆಂಬ ಒತ್ತಡ ಸ್ಥಳೀಯರಲ್ಲಿದೆ.

ಪೂರಕ ಮಾಹಿತಿ: ರವಿಕುಮಾರ್ ಶೆಟ್ಟಿಹಡ್ಲು, ಕೆ.ನಾಗರಾಜ್, ಬಾಲು ಮಚ್ಚೇರಿ.

ಚಿಕ್ಕಮಗಳೂರು ನಗರದಲ್ಲಿರುವ ಇಂದಿರಾ ಕ್ಯಾಂಟೀನ್
ಚಿಕ್ಕಮಗಳೂರಿನ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಸೇವಿಸುತ್ತಿರುವ ವಿದ್ಯಾರ್ಥಿಗಳು
ಮಳೆ ಬಂದರೆ ಸೋರುವ ಕಟ್ಟಡ
ಜಿಲ್ಲೆಯಲ್ಲಿರುವ ಎಲ್ಲಾ ಏಳು ಇಂದಿರಾ ಕ್ಯಾಂಟೀನ್‌ಗಳಲ್ಲೂ ಮಳೆ ಬಂದರೆ ಸೋರುವ ಸ್ಥಿತಿ ಇದ್ದು ಸಮಸ್ಯೆಯಾಗಿ ಕಾಡುತ್ತಿದೆ. ಅಡುಗೆ ತಯಾರಿಸುವ ಸಲಕರಣೆಗಳು ಕೂಡ ಹಾಳಾಗಿದ್ದು ಅವುಗಳನ್ನು ಬದಲಿಸಬೇಕು ಎಂದು ಕ್ಯಾಂಟೀನ್ ಸಿಬ್ಬಂದಿ ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದ್ದಾರೆ. ‘ಕಟ್ಟಡ ದುರಸ್ತಿ ಸೇರಿ ಅಗತ್ಯ ಕಾಮಗಾರಿಗೆ ಜಿಲ್ಲಾಧಿಕಾರಿ ಅವರ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಹೋಗಿದ್ದು ಶೀಘ್ರವೇ ಸಮಸ್ಯೆ ಬಗೆಹರಿಸುವ ಭರವಸೆ ದೊರೆತಿದೆ’ ಎಂದು ಸಿಬ್ಬಂದಿ ಹೇಳುತ್ತಾರೆ. ಕುಡಿಯುವ ನೀರು ಶುದ್ಧೀಕರಣ ಯಂತ್ರಗಳನ್ನು ಅಳವಡಿಸಲಾಗಿದೆ. ಆದರೆ ವಾರದಲ್ಲಿ ಎರಡು ಅಥವಾ ಮೂರು ಬಾರಿ ಮಾತ್ರ ಯಗಚಿ ನದಿ ನೀರು ಪೂರೈಕೆಯಾಗುತ್ತಿದ್ದು ಕೊಳವೆ ಬಾವಿ ನೀರೆ ಆಧಾರವಾಗಿದೆ ಎಂದು ಅವರು ವಿವರಿಸುತ್ತಾರೆ. ಇನ್ನು ಸಿಬ್ಬಂದಿ ವೇತನ ನಾಲ್ಕು ತಿಂಗಳಿನಿಂದ ಬಾಕಿ ಇದ್ದು ಕೂಡಲೇ ಬಿಡುಗಡೆ ಮಾಡಬೇಕು ಎಂಬುದು ಅವರ ಒತ್ತಾಯ.
ಹಸಿದವರಿಗೆ ಆಸರೆ: ಬೇಕಿದೆ ಶುಚಿತ್ವ
ಮೂಡಿಗೆರೆ: ‘ಹೋಟೆಲಲ್ಲಿ ಊಟ ಮಾಡಬೇಕೆಂದರೆ ದಿನಕ್ಕೆ ನೂರೈವತ್ತಾದ್ರೂ ಬೇಕು ಇಲ್ಲಿ ಮೂವತ್ತು ರೂಪಾಯಿಯಲ್ಲಿ ದಿನ ಕಳೆದೋಗ್ತದೆ… ಏನೂ ಇಲ್ಲದ ನಮ್ಮಂತೋರಿಗೆ ದೇವರು ಕೊಟ್ಟಿರೋ ಹೋಟೆಲ್ ಸ್ವಾಮಿ ಇದು…’ ಇದು ತಟ್ಟೆ ಕೈಯಲ್ಲಿಡಿದು ಚಿತ್ರನ್ನ ಹಾಕಿಸಿಕೊಳ್ಳುತ್ತಿದ್ದ ಲೋಕಪ್ಪ ಎಂಬ ವೃದ್ಧ ಹೇಳಿದ ಮಾತು. ‌ ಪಟ್ಟಣದ ಕೆಇಬಿ ರಸ್ತೆಯಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಾಗಿದ್ದು ಅನುದಾನವಿಲ್ಲದೇ ಸ್ಥಗಿತವಾಗಿದ್ದ ಕ್ಯಾಂಟೀನ್ ಪುನರಾರಂಭವಾಗಿದ್ದು ಬೆಳಿಗ್ಗೆ ಮಧ್ಯಾಹ್ನ ರಾತ್ರಿ ಮೂರು ಹೊತ್ತುಗಳ ತಿಂಡಿ ಊಟ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಳಿಗ್ಗಿನ ತಿಂಡಿಗೆ 40 ರಿಂದ 50 ಮಂದಿ ಮಧ್ಯಾಹ್ನ ಊಟಕ್ಕೆ 35 ರಿಂದ 40 ಮಂದಿ ರಾತ್ರಿ ಊಟಕ್ಕೆ 20 ರಿಂದ 30 ಮಂದಿ ಕ್ಯಾಂಟೀನ್‌ನಲ್ಲಿ ಉಪಯೋಗ ಪಡೆಯುತ್ತಿದ್ದಾರೆ. ‘ಸರ್ಕಾರದ ಆದೇಶದಂತೆ ನಿರ್ದಿಷ್ಟ ಮೆನು ಪ್ರಕಾರ ತಿಂಡಿ ನೀಡುವುದಿಲ್ಲ. ಊಟ ತಿಂಡಿ ಪಡೆದುಕೊಳ್ಳವವರ ಸಂಖ್ಯೆ ಕಡಿಮೆಯಿದ್ದರೂ ಹೆಚ್ಚಿನ ಸಂಖ್ಯೆ ಪ್ರದರ್ಶಿಸಿ ಅನುದಾನವನ್ನು ಪಡೆದುಕೊಳ್ಳುತ್ತಾರೋ ಏನೋ ಗುಣಮಟ್ಟ ಹಾಗೂ ಶುಚಿತ್ವಕ್ಕೆ ಆದ್ಯತೆ ನೀಡಿದರೆ ಇಂದಿರಾ ಕ್ಯಾಂಟೀನ್ ಇನ್ನಷ್ಟು ಜನಾನುರಾಗಿಯಾಗುತ್ತದೆ’ ಎಂಬುದು ಹೋಟೆಲ್‌ನಲ್ಲಿ ತಿಂಡಿ ಸವಿಯುತ್ತಿದ್ದ ಮಂಜುನಾಥ್ ಮಾತು. ‘ಬಾಗಿಲ ಗಾಜು ಹೊಡೆದಿದ್ದು ರಾತ್ರಿ ವೇಳೆ ನಾಯಿಗಳು ಕ್ಯಾಂಟೀನ್ ಒಳಗೆ ಬಂದು ಮಲಗಿ ಮಲಮೂತ್ರ ವಿಸರ್ಜಿಸುವುದರಿಂದ ಕ್ಯಾಂಟೀನ್ ಒಳಗೆ ವಾಸನೆಯುಕ್ತವಾಗಿದೆ. ಶಾಸಕರು ಜನಪ್ರತಿನಿಧಿಗಳು ಅಧಿಕಾರಿಗಳನ್ನೊಳಗೊಂಡ ಸ್ಥಳೀಯ ವ್ಯಕ್ತಿಗಳ ಸಮಿತಿ ರಚಿಸಿ ಕ್ಯಾಂಟೀನ್ ಮೇಲುಸ್ತುವಾರಿಯನ್ನು ನಿರ್ವಹಿಸಿದರೆ ಮಾದರಿಯನ್ನಾಗಿ ಮಾಡಬಹುದು’ ಎನ್ನುತ್ತಾರೆ ಲೋಕೇಶ್ ಮೇಗಲಪೇಟೆ.
4 ತಿಂಗಳಿಂದ ವೇತನ ಬಾಕಿ
ಕೊಪ್ಪ: ಎಂ.ಎಸ್.ದ್ಯಾವೇಗೌಡ ಸ್ಮಾರಕ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್ ಸಾರ್ವಜನಿಕರಿಗೆ ಅನುಕೂಲವಾಗಿದೆ. ಇಲ್ಲಿ ಪ್ರತಿದಿನ ಬೆಳಿಗ್ಗೆ ತಿಂಡಿ 150 ರಿಂದ 200 ಪ್ಲೇಟ್ ತಿಂಡಿ ಮಧ್ಯಾಹ್ನ 80 ರಿಂದ 100 ಪ್ಲೇಟ್ ಊಟ ಖರ್ಚಾಗುತ್ತದೆ. ಭಾನುವಾರ ಸುಮಾರು 250 ಪ್ಲೇಟ್ ತಿಂಡಿ ಮಧ್ಯಾಹ್ನ 180 ರಿಂದ 200 ಪ್ಲೇಟ್ ಊಟ ಖರ್ಚಾಗುತ್ತದೆ ಎಂದು ಸಿಬ್ಬಂದಿ ತಿಳಿಸಿದರು. ಕ್ಯಾಂಟೀನ್‌ನಲ್ಲಿ 4 ಮಂದಿ ಸಿಬ್ಬಂದಿ ಇದ್ದಾರೆ. ಕಳೆದ 4 ತಿಂಗಳಿಂದ ಸಂಬಳ ಸಿಕ್ಕಿಲ್ಲ. ಕ್ಯಾಂಟೀನ್ ಚಾವಣಿ ಮಳೆಗಾಲದಲ್ಲಿ ಸೋರುತ್ತದೆ ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂಬುದು ಅವರ ಮನವಿ.
ಹಾಳಾಗಿರುವ ಕುಡಿಯುವ ನೀರಿನ ಟ್ಯಾಂಕ್
ತರೀಕೆರೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗ ಇರುವ ಇಂದಿರಾ ಕ್ಯಾಂಟೀನ್ ಪ್ರಾರಂಭದಿಂದಲೂ ವ್ಯವಸ್ಥಿತವಾಗಿ ನಡೆಯುತ್ತಿದೆ. ಇಲ್ಲಿ ಬೆಳಗಿನ ಉಪಾಹಾರಕ್ಕೆ ಸುಮಾರು 420 ರಿಂದ 450 ಜನ ಮಧ್ಯಾಹ್ನದ ಊಟಕ್ಕೆ ಸುಮಾರು 350 ಜನ ಮತ್ತು ರಾತ್ರಿ ಊಟಕ್ಕೆ 80 ರಿಂದ 90 ಜನ ಬರುತ್ತಿದ್ದಾರೆ. ಪ್ರಾರಂಭದಲ್ಲಿ ಅಳವಡಿಸಲಾಗಿದ್ದ ಶುದ್ಧ ಕುಡಿಯುವ ನೀರಿನ ಟ್ಯಾಂಕ್ ಸೇರಿ ಕೆಲ ಯಂತ್ರೋಪಕರಣಗಳು ಹಾಳಾಗಿವೆ. ಪೈಪ್‌ಲೈನ್ ಬದಲಾವಣೆ ಮಾಡಬೇಕಾಗಿದ್ದು ಸಿಸಿಟಿವಿ ಕ್ಯಾಮೆರಾಗಳು ಹಾಳಾಗಿದ್ದು ದುರಸ್ತಿಯಾಗಬೇಕಿದೆ. ಇವುಗಳ ದುರಸ್ತಿಗಾಗಿ ತರಿಕೆರೆ ಪುರಸಭೆಗೆ ಸುಮಾರು ₹5 ಲಕ್ಷ ಹಣ ಬಿಡುಗಡೆಯಾಗಿದ್ದು ಸದ್ಯದಲ್ಲಿಯೇ ಟೆಂಡರ್ ಕರೆದು ಹಾಳಾಗಿರುವ ಎಲ್ಲಾ ಉಪಕರಣಗಳನ್ನು ಸರಿಪಡಿಸಲಾಗುವುದೆಂದು ತರೀಕೆರೆ ಪುರಸಭೆಯ ಮುಖ್ಯ ಅಧಿಕಾರಿ ಎಚ್. ಪ್ರಶಾಂತ್ ಹೇಳಿದರು. ಇನ್ನು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸಮಯಕ್ಕೆ ಸರಿಯಾಗಿ ವೇತನ ಪಾವತಿಯಾಗುತ್ತಿಲ್ಲ. ಸ್ವಚ್ಛತೆ ಹಾಗೂ ಮೂಲ ಸೌಕರ್ಯಗಳನ್ನು ಪುರಸಭೆ ಕಲ್ಪಿಸುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಕೆಟ್ಟ ಆರ್.ಒ: ಕ್ಯಾನ್‌ ನೀರು
ಕಡೂರು: ಪಟ್ಟಣದ ಕೆ.ಎಲ್‌.ವಿ. ವೃತ್ತದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ‌ ಪ್ರತಿನಿತ್ಯ ಬೆಳಿಗ್ಗೆ 350ರಿಂದ 400 ಜನರಿಗೆ ಬೆಳಗಿನ ತಿಂಡಿ ಮಧ್ಯಾಹ್ನ 160ರಿಂದ 180 ಜನರಿಗೆ ಊಟ ರಾತ್ರಿ 50ರಿಂದ 60 ಜನರಿಗೆ ಊಟ ದೊರೆಯುತ್ತಿದೆ. ಬಹುತೇಕ ಕೂಲಿ‌ಕಾರ್ಮಿಕರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಬೆಳಗಿನ ತಿಂಡಿಗೆ ಇಡ್ಲಿ ಸಾಂಬಾರ್ ಗೀ ರೈಸ್ ಪಲಾವ್ ಪುಳಿಯೋಗರೆ ದೊರೆಯುತ್ತಿದ್ದು ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಅನ್ನ ಸಾಂಬಾರ್ ನೀಡಲಾಗುತ್ತಿದೆ. ಕ್ಯಾಂಟೀನ್‌ನಲ್ಲಿ ಮೇಲೆ ಇಟ್ಟಿದ್ದ ನೀರಿನ ಟ್ಯಾಂಕ್ ಹಾಳಾಗಿದೆ. ಕುಡಿಯುವ ನೀರಿನ ಆರ್.ಒ. ವ್ಯವಸ್ಥೆ ಸಂಪೂರ್ಣ ಕೆಟ್ಟಿದ್ದು ಪ್ರಸ್ತುತ ಗ್ರಾಹಕರಿಗೆ ಶುದ್ಧ ಕುಡಿಯುವ ನೀರಿನ ಘಟಕದಿಂದ ಕ್ಯಾನ್‌ಗಳಲ್ಲಿ ನೀರು ತಂದು ನೀಡಲಾಗುತ್ತಿದೆ. ‘ಇವುಗಳನ್ನು ಸರಿಪಡಿಸಲು ಅಂದಾಜು‌ ಪಟ್ಟಿ ಸಲ್ಲಿಸಲಾಗಿದೆ. ಶೀಘ್ರವೇ ಸರಿಪಡಿಸುವ ವ್ಯವಸ್ಥೆ ಮಾಡಲಾಗುವುದು’ ಎಂದು‌ ಪುರಸಭೆಯ ಆರೋಗ್ಯಾಧಿಕಾರಿ ಶ್ರೀನಿವಾಸ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.