ಚಿಕ್ಕಮಗಳೂರು: ಸಿಹಿ ಕುಂಬಳವನ್ನು ಸ್ಥಳೀಯವಾಗಿ ತರಕಾರಿಯಾಗಿ ಅಷ್ಟೇ ಬಳಸಿ ಅದರೊಳಗಿನ ಬೀಜವನ್ನು ಬಿಸಾಡುವುದೇ ಹೆಚ್ಚು. ಕಡೂರು ಮತ್ತು ಬೀರೂರು ಭಾಗದ ರೈತರು ಬೀಜವನ್ನಷ್ಟೇ ತೆಗೆದು ಮಾರಾಟ ಮಾಡುತ್ತಿದ್ದಾರೆ. ಇಲ್ಲಿನ ಸಿಹಿ ಕುಂಬಳದ ಬೀಜಕ್ಕೆ ಜಪಾನ್, ಅಮೆರಿಕಾ, ಚೀನಾ ದೇಶಗಳಲ್ಲಿ ಬಲು ಬೇಡಿಕೆ ಇದ್ದು, ಈ ಭಾಗದ ರೈತರಿಗೆ ಲಾಭದ ಬೆಳೆಯಾಗಿದೆ.
ಮಣ್ಣಿನ ಗುಣ ಮತ್ತು ಹವಾಮಾನಕ್ಕೆ ಹೊಂದಿಕೆಯಾದರಷ್ಟೇ ಗುಣಮಟ್ಟದ ಕುಂಬಳ ಕಾಯಿಗಳನ್ನು ಬೆಳೆಯಲು ಸಾಧ್ಯ. ಆದ್ದರಿಂದಲೇ ಕಡೂರು ತಾಲ್ಲೂಕಿನ ಹಲವು ಹಳ್ಳಿಗಳನ್ನು ಗುರುತಿಸಿ ಬಿತ್ತನೆ ಬೀಜ ಮಾರಾಟ ಮಾಡುವ ಕಂಪನಿಗಳು ರೈತರ ಮೂಲಕ ಕುಂಬಳ ಕಾಯಿ ಬೆಳೆಸುತ್ತಿವೆ. ಆಸಕ್ತಿ ಇರುವ ರೈತರನ್ನು ಗುರುತಿಸಿ ಕಂಪನಿಗಳ ಪ್ರತಿನಿಧಿಗಳೇ ಬಿತ್ತನೆ ಬೀಜ ವಿತರಣೆ ಮಾಡುತ್ತಾರೆ. ಮೂರು ತಿಂಗಳ ಬಳಿಕ ಉತ್ಪಾದನೆಯಾಗುವ ಬೀಜವನ್ನು ಮತ್ತೆ ಅದೇ ಪ್ರತಿನಿಧಿಗಳು ಮಾರುಕಟ್ಟೆ ದರಕ್ಕೆ ಖರೀದಿ ಮಾಡುತ್ತಾರೆ.
ಸಿಹಿ ಕುಂಬಳ ಕಾಯಿ ಒಡೆದು ಅದರಲ್ಲಿನ ಬೀಜ ತೆಗೆದು ಒಣಗಿಸಿ ತೂಕದ ಲೆಕ್ಕದಲ್ಲಿ ರೈತರು ಮಾರಾಟ ಮಾಡುವುದು ಈ ಬೆಳೆಯ ವಿಶೇಷ. ಈ ಬೆಳೆಯಲ್ಲಿ ರೈತರಿಗೆ ಬೀಜವಷ್ಟೇ ಮುಖ್ಯ. ಬೀಜ ತೆಗೆದ ಬಳಿಕ ಕುಂಬಳ ಕಾಯಿ ಲೆಕ್ಕಕ್ಕಿಲ್ಲ.
ಬೀಜಕ್ಕಾಗಿ ಬೆಳೆಯುವ ಈ ಕುಂಬಳ ಸಾಮಾನ್ಯ ಬೆಳೆ ಪದ್ಧತಿಗಿಂತ ಭಿನ್ನ. ಕುಂಬಳದಲ್ಲಿ ಗಂಡು ಮತ್ತು ಹೆಣ್ಣು ಎಂಬ ಎರಡು ವಿಧಗಳಿವೆ. ಎರಡನ್ನೂ ಪ್ರತ್ಯೇಕವಾಗಿ ರೈತರು ಬೆಳೆಯುತ್ತಾರೆ. ಗಂಡು ಕುಂಬಳನ್ನು 10 ದಿನ ಮೊದಲೇ ಬಿತ್ತನೆ ಮಾಡುತ್ತಾರೆ. ಹೆಣ್ಣು ಕುಂಬಳದ ಗಿಡದಲ್ಲಿ ಮೊಗ್ಗು ಹೊರಡುವ ಸಂದರ್ಭಕ್ಕೆ ಸರಿಯಾಗಿ ಗಂಡು ಕುಂಬಳದ ಗಿಡದಲ್ಲಿ ಹೂವುಗಳು ಅರಳುತ್ತವೆ.
ಗಂಡು ಕುಂಬಳದ ಹೂವುಗಳನ್ನು ಕಿತ್ತು ಹೆಣ್ಣು ಕುಂಬಳದ ಮೊಗ್ಗಿಗೆ ಪರಾಗಸ್ಪರ್ಶ ಮಾಡುತ್ತಾರೆ. ಬಳಿಕ ಆ ಮೊಗ್ಗಿಗೆ ಜೇನುಹುಳ ಸೇರಿದಂತೆ ಯಾವುದೇ ಹುಳುಗಳ ಸ್ಪರ್ಶವಾಗದಂತೆ ಪೇಪರ್ ಕಟ್ಟಿ ಕಾಪಾಡುತ್ತಾರೆ. ಜೇನುಹುಳು ಅಥವಾ ಬೇರೆ ಹುಳುಗಳ ಸ್ಪರ್ಶವಾದರೆ ತಳಿಯ ಗುಣಮಟ್ಟ ಹಾಳಾಗುತ್ತದೆ ಎಂಬ ಕಾರಣಕ್ಕೆ ಈ ತಂತ್ರವನ್ನು ರೈತರು ಅನುರಿಸುತ್ತಾರೆ. ಹೂವು ಕಿತ್ತ ಬಳಿಕ ಗಂಡು ಕುಂಬಳ ಪ್ರಯೋಜನಕ್ಕೆ ಬರುವುದಿಲ್ಲ. ಹೆಣ್ಣು ಕುಂಬಳದ ಒಳಗಿರುವ ಬೀಜ ಬಲಿಯಲು ಮೂರು ತಿಂಗಳು ಬೇಕಾಗುತ್ತದೆ. ಅಲ್ಲಿಯ ತನಕ ಅವುಗಳನ್ನು ಸಲಹುತ್ತಾರೆ. ಕಾಯಿ ಒಡೆದು ಬೀಜಗಳನ್ನು ಪ್ರತ್ಯೇಕಿಸಿ ಒಣಗಿಸುತ್ತಾರೆ.
ಸಿಹಿ ಕುಂಬಳದ ಬೀಜದಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು, ಆರೋಗ್ಯದಾಯಕ ಎಂಬ ಕಾರಣಕ್ಕೆ ಬೇಡಿಕೆ ಹೆಚ್ಚಿದೆ ಎಂದು ಈ ಕಂಪನಿಗಳ ಪ್ರತಿನಿಧಿಗಳು ವಿವರಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.