ಚಿಕ್ಕಮಗಳೂರು: ನಗರದ ಗೃಹ ಮಂಡಳಿ ಬಡಾವಣೆ ವ್ಯಾಪ್ತಿಯ ಹೊರ ವಲಯದಲ್ಲಿರುವ ಬಾಲಕರ ವಸತಿ ನಿಲಯಗಳು ನೂರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆಶ್ರಯ ತಾಣವಾಗಿವೆ. ಆದರೆ, ಇಲ್ಲಿನ ವಿದ್ಯಾರ್ಥಿಗಳು ಕಾಲೇಜುಗಳಿಗೆ ತೆರಳಲು ಸೂಕ್ತ ರಸ್ತೆ ಇಲ್ಲದೆ ಕಲ್ಲು–ಮುಳ್ಳು, ಮಣ್ಣಿನ ಹಾದಿಯಲ್ಲಿಯೇ ಸಾಗಬೇಕಾದ ಅನಿವಾರ್ಯತೆ ಇದೆ.
ಸಮಾಜ ಕಲ್ಯಾಣ ಇಲಾಖೆ ಹಾಗೂ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ ಪದವಿ ಪೂರ್ವ, ಮೆಟ್ರಿಕ್ ನಂತರದ ಬಾಲಕರ ಮತ್ತು ಎಂಜಿನಿಯರಿಂಗ್ (ಎರಡು ಪ್ರತ್ಯೇಕ) ವಸತಿ ನಿಲಯ ಸೇರಿ ನಾಲ್ಕು ವಸತಿ ನಿಲಯಗಳು ಇಲ್ಲಿವೆ. ಪಿಯು, ಪದವಿ, ಐಟಿಐ, ಡಿಪ್ಲೊಮಾ, ಕಾನೂನು, ಎಂಜಿನಿಯರಿಂಗ್ ಸೇರಿ ವಿವಿಧ ಕೋರ್ಸ್‌ಗಳ 600 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಸತಿ ನಿಲಯ ಆರಂಭವಾಗಿ ಎರಡು ವರ್ಷ ಕಳೆದರೂ ವಿದ್ಯಾರ್ಥಿಗಳ ಓಡಾಟಕ್ಕೆ ಸೂಕ್ತ ಕಾಂಕ್ರಿಟ್ ರಸ್ತೆ ನಿರ್ಮಾಣವಾಗಿಲ್ಲ.
ಕಾಡಂಚಿನ ಎತ್ತರದ ಪ್ರದೇಶದಲ್ಲಿ ಸರ್ಕಾರಿ ಐಟಿಐ ಕಾಲೇಜು ಸಹಿತ ವಸತಿ ನಿಲಯಗಳಿವೆ. ಸಮೀಪದಲ್ಲೇ ನೂತನ ಜಿಲ್ಲಾ ಕೋರ್ಟ್ ಸಂಕೀರ್ಣವೂ ಸಹ ನಿಮಾರ್ಣವಾಗುತ್ತಿದ್ದು, ನಿಗದಿತ ರಸ್ತೆ ಮಾರ್ಗವಿಲ್ಲದೆ ಕಡಿದಾದ ಕಲ್ಲು–ಮುಳ್ಳು ತುಂಬಿದ ಮಣ್ಣಿನ ಹಾದಿಯಲ್ಲೇ ವಿದ್ಯಾರ್ಥಿಗಳು ನಡೆದುಕೊಂಡು ಕಾಲೇಜುಗಳಿಗೆ ಸೇರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ವಸತಿ ನಿಲಯಗಳ ಸಮೀಪದಲ್ಲೇ ಕಾಫಿ ಕ್ಯೂರಿಂಗ್, ಪ್ಲಾಸ್ಟಿಕ್ ಘನ ತ್ಯಾಜ್ಯ ಸೇರಿದಂತೆ ಹಲವು ಕೈಗಾರಿಗಳಿವೆ. ಇಲ್ಲಿ ನೂರಾರು ಲಾರಿಗಳು ಸಂಚರಿಸುತ್ತವೆ. ಆದರೆ, ವಸತಿ ನಿಲಯಕ್ಕೆ ಸಂಪರ್ಕ ಕಲ್ಪಿಸಲು ಸರಿಯಾದ ರಸ್ತೆ ಇಲ್ಲ.
ಹಿಂದೆ ಕಲ್ಯಾಣ ನಗರದಲ್ಲಿದ್ದ ವಸತಿ ನಿಲಯಗಳನ್ನು ಬಾಲಕಿಯರಿಗೆ ಬಿಟ್ಟು ಕೊಟ್ಟು ಕೈಗಾರಿಕಾ ವಲಯದ ಪ್ರದೇಶದಲ್ಲಿರುವ ಸರ್ಕಾರಿ ಜಾಗದಲ್ಲಿ ಸುಸಜ್ಜಿತ ಬಾಲಕರ ವಸತಿ ನಿಲಯ ನಿರ್ಮಿಸಲಾಗಿದೆ. ಬೀಕನಹಳ್ಳಿ ಗ್ರಾಮ ಪಂಚಾಯಿತಿ ಪರಿಮಿತಿಗೆ ಒಳಪಡುವ ಇಲ್ಲಿ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮೂಲ ಸೌಕರ್ಯ ಕಲ್ಪಿಸಲು ಗಮನಹರಿಸದಿರುವುದು ಬೇಸರದ ಸಂಗತಿ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ರಸ್ತೆ ಬದಿಯಲ್ಲಿ ಕಂಬಗಳಿಗೆ ವಿದ್ಯುತ್ ದೀಪಗಳಿಲ್ಲ. ರಾತ್ರಿ ಓಡಾಡಲು ಭಯವಾಗುತ್ತದೆ ಎಂದು ಅಳಲು ತೋಡಿಕೊಳ್ಳುತ್ತಾರೆ.
ಮಳೆಗಾಲದಲ್ಲಿ ವಿದ್ಯಾರ್ಥಿಗಳು, ಅಧಿಕಾರಿಗಳು ಇಲ್ಲಿನ ಮಣ್ಣಿನ ರಸ್ತೆಯಲ್ಲಿ ಓಡಾಡುವುದೇ ದುಸ್ತರ. ಹಾಸ್ಟೆಲ್‌ಗಳಿಗೆ ಬೇಕಾದ ಅಡುಗೆ ಸಾಮಗ್ರಿ, ಪರಿಕರಗಳನ್ನು ಸಾಗಿಸಲು ವಾಹನ ಬಾರದೆ ಕಷ್ಟಪಡಬೇಕಾಗುತ್ತದೆ. ಬೇಸಿಗೆ ಆರಂಭವಾಗಿದ್ದು, ಈ ಅವಧಿಯಲ್ಲಿಯೇ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಿದ್ದರೆ ಅನುಕೂಲವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಕಾಡಂಚಿನ ಪ್ರದೇಶದಲ್ಲಿ ವಸತಿ ನಿಲಯಗಳಿದ್ದು ಕತ್ತಲಿನಲ್ಲಿ ಕೆಲ ವಿದ್ಯಾರ್ಥಿಗಳಿಗೆ ವನ್ಯಪ್ರಾಣಿಗಳ ಭಯ ಕಾಡುತ್ತಿದೆ. ಸುಸಜ್ಜಿತ ಕಾಂಪೌಂಡ್ ಇದ್ದರೂ ಹಿಂದೆ ಹಾಸ್ಟೆಲ್ ಸುತ್ತಮುತ್ತ ಕಾಡುಪ್ರಾಣಿಗಳ ಓಡಾಟ ಸ್ಥಳೀಯರು ಹಾಗೂ ಅಲ್ಲಿನ ವಿದ್ಯಾರ್ಥಿಗಳಲ್ಲಿ ಆತಂಕ ತಂದಿತ್ತು. ಈಗ ಹಾಸ್ಟೆಲ್ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಬೀದಿ ದೀಪ ಹಾಗೂ ಸರಿಯಾದ ರಸ್ತೆ ಇಲ್ಲದಿರುವುದು ಮತ್ತಷ್ಟು ಭಯಕ್ಕೆ ಕಾರಣವಾಗಿದೆ. ಕಾಂಕ್ರಿಟ್ ರಸ್ತೆ ನಿರ್ಮಾಣ ಮತ್ತು ದೀಪಗಳ ಅಳವಡಿಕೆ ಮಾಡಬೇಕು ಎಂಬುದು ಸ್ಥಳೀಯರು ಹಾಗೂ ವಿದ್ಯಾರ್ಥಿಗಳ ಒತ್ತಾಯ.
ವಸತಿ ನಿಲಯಗಳ ಸಂಪರ್ಕ ಕಲ್ಪಿಸುವ ರಸ್ತೆ ಮಣ್ಣಿನಿಂದ ಕೂಡಿ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಮಳೆಗಾಲದ ಅಂತ್ಯದೊಳಗೆ ಯಾವುದಾದರೂ ಇಲಾಖೆ ಅನುದಾನದಲ್ಲಿ ರಸ್ತೆ ನಿರ್ಮಿಸಲಾಗುವುದು-ಎಚ್.ಡಿ.ತಮ್ಮಯ್ಯ, ಶಾಸಕ
ಹಾಸ್ಟೆಲ್ ಬಳಿ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಶಾಸಕರು ಜಿಲ್ಲಾ ಪಂಚಾಯಿತಿ ಸಿಇಒ ಗಮನಕ್ಕೆ ತರಲಾಗಿದೆ. ಇಲಾಖೆಗೆ ಹೊಸದಾಗಿ ಅನುದಾನ ಬಿಡುಗಡೆಯಾಗಿಲ್ಲ. ಅನುದಾನದ ಕೊರತೆಯಿಂದ ಕಾಮಗಾರಿ ಬಾಕಿ ಇದೆ-ಯೋಗೇಶ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.