ಶೃಂಗೇರಿ: ‘ಚನ್ನಪಟ್ಟಣದ ಉಪ ಚುನಾವಣೆ ಪ್ರಚಾರ ಸಂದರ್ಭ ಸಚಿವ ಜಮೀರ್ ಅಹಮದ್ ಖಾನ್ ಅವರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕಾಲಿಯಾ (ಕರಿಯ) ಕುಮಾರಸ್ವಾಮಿ ಎಂದು ಕರೆದು ವರ್ಣಭೇದ ನೀತಿ ಅನುಸರಿಸಿದ್ದಾರೆ. ಇದರಿಂದ ಒಕ್ಕಲಿಗರ ಸಮುದಾಯದ ಭಾವನೆಗೆ ಘಾಸಿಯಾಗಿದೆ’ ಎಂದು ಒಕ್ಕಲಿಗರ ಸಂಘದ ಜಿಲ್ಲಾ ಘಟಕದ ನಿರ್ದೆಶಕ ಕೆ.ಎಸ್.ರಮೇಶ್ ತಿಳಿಸಿದ್ದಾರೆ.
ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಶೃಂಗೇರಿ ತಾಲ್ಲೂಕು ಕಚೇರಿಯಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಒಕ್ಕಲಿಗರ ಸಂಘದಿಂದ ಶುಕ್ರವಾರ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
‘ಮಾಜಿ ಪ್ರಧಾನಿಯಾಗಿರುವ ಎಚ್.ಡಿ.ದೇವೆಗೌಡ ಅವರ ಕುಟುಂಬವನ್ನು ಮುಸ್ಲಿಮರೆಲ್ಲ ಚಂದಾ ಸಂಗ್ರಹಿಸಿ ಖರೀದಿಸುತ್ತೇವೆ ಎಂಬ ಹೇಳಿಕೆ ನೀಡಿ ಒಕ್ಕಲಿಗರ ಸಮುದಾಯದ ಭಾವನೆಗೆ ಚ್ಯುತಿ ಆಗಿದೆ. ಎರಡು ಸಮುದಾಯಗಳ ನಡುವೆ ವಿಷ ಬೀಜ ಬಿತ್ತಿ ಸಮಾಜದ ಸ್ವಾಸ್ಥ್ಯವನ್ನು ಕದಡುವ ಸಚಿವ ಜಮೀರ್ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು. ಇಲ್ಲದಿದ್ದರೆ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸುತ್ತೇವೆ’ ಎಂದು ಹೇಳಿದರು.
ತಾಲ್ಲೂಕು ಯುವ ಒಕ್ಕಲಿಗರ ಸಂಘದ ಅಧ್ಯಕ್ಷ ಸಚೀಂದ್ರ, ಪದಾಧಿಕಾರಿಗಳಾದ ರಾಜೇಶ್ ದ್ಯಾವಂಟು, ಗಣೇಶ್ ಹೆಗ್ಡೆ, ಪ್ರಜ್ವಲ್, ಶ್ರೇಯಸ್, ಭರತ್ ಗಿಣಿಕಲ್, ಜಿ.ಜಿ.ಮಂಜುನಾಥ್, ನವೀನ್ ಕಿಗ್ಗಾ, ಮನು ಕೋಚ್ಚವಳ್ಳಿ, ಸಾಯಿಪ್ರಕಾಶ್, ಕಾನೋಳ್ಳಿ ವಿಶ್ವನಾಥ್, ಸಂಪತ್ ಮಸಿಗೆ, ಪ್ರೇಮ್ ಕುಮಾರ್, ಚಂದ್ರಶೇಖರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.