ADVERTISEMENT

ಚಿಕ್ಕಮಗಳೂರು | ಹೆಚ್ಚಿದ ಡೆಂಗಿ ಪ್ರಕರಣ; ನಲುಗಿದ ಕಾಫಿನಾಡು

ಮಳೆಗಾಲದಲ್ಲೇ ಲಗ್ಗೆ ಇಡುವ ಡೆಂಗಿ: ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯಿಂದ ಜಾಗೃತಿ

ವಿಜಯಕುಮಾರ್‌ ಎಸ್‌.ಕೆ
Published 24 ಜೂನ್ 2024, 5:31 IST
Last Updated 24 ಜೂನ್ 2024, 5:31 IST
ಕೆಎಸ್‌ಆರ್‌ಟಿಸಿ ವಿಭಾಗೀಯ ಕಾರ್ಯಗಾರದಲ್ಲಿ ಸಂಗ್ರಹಿಸಿರುವ ಟೈರ್‌ಗಳಲ್ಲಿ ಶೇಖರಣೆಯಾಗಿರುವ ನೀರು ಪರಿಶೀಲಿಸುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ
ಕೆಎಸ್‌ಆರ್‌ಟಿಸಿ ವಿಭಾಗೀಯ ಕಾರ್ಯಗಾರದಲ್ಲಿ ಸಂಗ್ರಹಿಸಿರುವ ಟೈರ್‌ಗಳಲ್ಲಿ ಶೇಖರಣೆಯಾಗಿರುವ ನೀರು ಪರಿಶೀಲಿಸುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ   

ಚಿಕ್ಕಮಗಳೂರು: ಮಳೆಗಾಲದಲ್ಲಿ ಕಾಫಿನಾಡಿಗೆ ಪ್ರವಾಸಿಗರು ಲಗ್ಗೆ ಇಡುವಂತೆ ಈ ಬಾರಿ ಡೆಂಗಿ ಕೂಡ ಲಗ್ಗೆ ಇಟ್ಟಿದೆ. 2024ರ ಜನವರಿಯಿಂದ ಈವರೆಗೆ 438 ಜನ ಡೆಂಗಿ ಜ್ವರದಿಂದ ನಲುಗಿದ್ದಾರೆ.

ಜನವರಿಯಿಂದ ಏಪ್ರಿಲ್‌ ತನಕ ಕಡಿಮೆ ಇದ್ದ ಡೆಂಗಿ ಪ್ರಕರಣಗಳು, ಮೇ ಮತ್ತು ಜೂನ್‌ನಲ್ಲಿ ಹೆಚ್ಚಾಗಿವೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ಈ ರೋಗ ಹರಡುತ್ತದೆ. ಮೇ ಮತ್ತು ಜೂನ್‌ನಲ್ಲಿ ಮಳೆ ಸುರಿದು ಅಲ್ಲಲ್ಲಿ ನೀರು ಸಂಗ್ರಹ ಆಗಿದ್ದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿದೆ.

ಈಡಿಸ್‌ ಇಜಿಪ್ಟೈ ಸೊಳ್ಳೆ ಕಚ್ಚುವಿಕೆಯಿಂದ ಡೆಂಗಿ ಜ್ವರ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಸ್ವಚ್ಛವಾದ ನೀರಿನಲ್ಲಿ ಮಾತ್ರ ಈ ಸೊಳ್ಳೆಗಳು ಸಂತಾನಾಭಿವೃದ್ಧಿ ಮಾಡುತ್ತವೆ. ಹಗಲಿನಲ್ಲಿ ಮನುಷ್ಯರಿಗೆ ಕಚ್ಚುವುದು ಈ ಸೊಳ್ಳೆಗಳ ಹವ್ಯಾಸ. ಉತ್ಪತ್ತಿಯಾದ ಎಲ್ಲಾ ಸೊಳ್ಳೆಗಳು ಕಚ್ಚುವಿಕೆಯಿಂದ ರೋಗ ಹರಡುವುದಿಲ್ಲ. ಡೆಂಗಿ ರೋಗಿಗೆ ಕಚ್ಚಿದ ಸೊಳ್ಳೆ ಮತ್ತೊಬ್ಬರಿಗೆ ಕಚ್ಚುವುದರಿಂದ ಮಾತ್ರ ರೋಗ ಹರಡುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ADVERTISEMENT

ಮಳೆಗಾಲದಲ್ಲೇ ಹೆಚ್ಚಾಗಿ ಈ ರೋಗ ಹರಡುತ್ತದೆ. ಎಲ್ಲೆಂದರಲ್ಲಿ ಮಳೆ ನೀರು ಸಂಗ್ರಹವಾಗುತ್ತದೆ. ಸೊಳ್ಳೆಗಳ ಸಂತಾನ ಅಭಿವೃದ್ಧಿಗೆ ಹೆಚ್ಚು ಅನುಕೂಲ ಆಗುತ್ತದೆ. ಚಿಕ್ಕಮಗಳೂರು ಜಿಲ್ಲೆಗೆ ಮಳೆಗಾಲದಲ್ಲೇ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿರುತ್ತದೆ. ಪ್ರವಾಸಿಗರಲ್ಲಿ ಯಾರದರೂ ಸೋಂಕಿತರಿದ್ದರೆ ಅವರಿಗೆ ಕಚ್ಚಿದ ಸೊಳ್ಳೆ ಸ್ಥಳೀಯರಿಗೆ ಕಚ್ಚುವುದರಿಂದ ರೋಗ ಹರಡುತ್ತದೆ. ಚಿಕ್ಕಮಗಳೂರು ತಾಲ್ಲೂಕಿನಲ್ಲೇ ಹೆಚ್ಚು ಪ್ರಕರಣ ಕಾಣಿಸಿಕೊಂಡಿದ್ದು, ಶೇ 70ರಷ್ಟು ಡೆಂಗಿ ಸೋಂಕಿತರು ಇದೇ ತಾಲ್ಲೂಕಿನವರಾಗಿದ್ದಾರೆ.

ಡೆಂಗಿ ಮಾತ್ರವಲ್ಲದೇ ಬೇರೆ ಬೇರೆ ಜ್ವರಗಳೂ ಜನರನ್ನು ಕಾಡುತ್ತಿವೆ. ಈಡಿಸ್‌ ಇಜಿಪ್ಟೈ ಸೊಳ್ಳೆಗಳ ಜೊತೆಗೆ ಬೇರೆ ಸೊಳ್ಳೆಗಳ ಸಂಖ್ಯೆ ಕೂಡ ಮಳೆಗಾಲದಲ್ಲಿ ಹೆಚ್ಚಾಗುತ್ತವೆ. ಇದರಿಂದಾಗಿ ಡೆಂಗಿ ಮಾತ್ರವಲ್ಲದೇ ವಿಷಮಶೀತ ಜ್ವರ ಕೂಡ ಜನರನ್ನು ಕಾಡುತ್ತಿದೆ. ಡೆಂಗಿಯಿಂದ ಈವರೆಗೆ ಒಬ್ಬರೂ ಮೃತಪಟ್ಟಿಲ್ಲ. ಇದು ಸಮಾಧಾನದ ಸಂಗತಿ ಎಂದು ವೈದ್ಯರು ಹೇಳುತ್ತಾರೆ.

ಚಿಕ್ಕಮಗಳೂರು ನಗರದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಲಾರ್ವ ಸರ್ವೆ ನಡೆಸುತ್ತಿರುವುದು

ಡೆಂಗಿ ಬಗ್ಗೆ ಆತಂಕಪಡುವ ಅಗತ್ಯ ಇಲ್ಲ. ರೋಗ ಲಕ್ಷಣ ಕಂಡ ಕೂಡಲೇ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ಗುಣಮುಖರಾಗಬೇಕು

-ಡಾ.ಅಶ್ವತ್ಥಬಾಬು ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

ಡೆಂಗಿ ರೋಗದ ಮುಖ್ಯ ಲಕ್ಷಣಗಳು

* ಇದ್ದಕ್ಕಿದ್ದಂತೆ ತೀವ್ರ ಜ್ವರ ವಿಪರೀತ ತಲೆನೋವು.

* ಕಣ್ಣುಗಳ ಹಿಂಭಾಗ ಮಾಂಸಕಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು.

* ತೀವ್ರ ಸ್ಥಿತಿಯಲ್ಲಿ ಬಾಯಿ ಮೂಗು ಮತ್ತು ವಸಡುಗಳಲ್ಲಿ ರಕ್ತಸ್ತ್ರಾವ.

* ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ತ್ರಾವದ ಗುರುತು ಕಾಣಿಸಿಕೊಳ್ಳುತ್ತವೆ.

ರೋಗಕ್ಕೆ ಚಿಕಿತ್ಸೆ ಏನು

ಡೆಂಗಿ ಜ್ವರಕ್ಕೆ ಯಾವುದೇ ನಿರ್ದಿಷ್ಟ ಔಷದಿ ಅಥವಾ ಲಸಿಕೆ ಇಲ್ಲ. ರೋಗದ ಲಕ್ಷಣಗಳಿಗೆ ಅನುಸಾರವಾಗಿ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬಹುದು. ಡೆಂಗಿ ಲಕ್ಷಣಗಳು ಕಂಡುಬಂದರೆ ತಕ್ಷಣ ಸರ್ಕಾರಿ ಆಸ್ಪತ್ರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂಬುದು ಆರೋಗ್ಯ ಇಲಾಖೆ ನೀಡುವ ಸಲಹೆ.

ಸೊಳ್ಳೆ ಉತ್ಪತ್ತಿ ತಾಣ ನಾಶಕ್ಕೆ ಕ್ರಮ

ಆರೋಗ್ಯ ಇಲಾಖೆ ಪ್ರತಿ ತಿಂಗಳು ಮೊದಲ ಮತ್ತು ಮೂರನೇ ಶುಕ್ರವಾರ ಲಾರ್ವ(ಸೊಳ್ಳೆಗಳ ಮೊಟ್ಟೆ) ಸರ್ವೆಗಳನ್ನು ಮಾಡುತ್ತಿದೆ. ಡೆಂಗಿ ಪ್ರಕರಣ ಹೆಚ್ಚಿರುವುದರಿಂದ ಲಾರ್ವ ಸರ್ವೆ  ಕಾರ್ಯ ಈಗ ಹೆಚ್ಚಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಜತೆಗೆ ಪ್ಯಾರಾ ಮೆಡಿಕಲ್‌ ನರ್ಸಿಂಗ್‌ ವಿದ್ಯಾರ್ಥಿಗಳು ಆಶಾ ಕಾರ್ಯಕರ್ತೆಯರು ಜೋಡಿಸಿಕೊಂಡು ಸಮರೋಪಾದಿಯಲ್ಲಿ ಡೆಂಗಿ ಎದುರಿಸಲಾಗುತ್ತಿದೆ. ಹೆಚ್ಚು ಡೆಂಗಿ ಪ್ರಕರಣ ಇರುವ ಕಡೆ ಲಾರ್ವ ಸರ್ವೆ ನಡೆಸಿ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಮಾಡಲಾಗುತ್ತಿದೆ ಎಂದು ವಿವರಿಸುತ್ತಾರೆ. ಜ್ವರ ಪರೀಕ್ಷೆ ಹೆಚ್ಚಿಸಲಾಗಿದ್ದು ಹೆಚ್ಚು ಜ್ವರ ಪ್ರಕರಣ ಕಂಡುಬಂದ ಕಡೆ ಜ್ವರ ಕ್ಲಿನಿಕ್‌ ತೆರೆಯಲಾಗುತ್ತಿದೆ.  ನಗರಸಭೆ ಮತ್ತು ಗ್ರಾಮ ಪಂಚಾಯಿತಿ  ಮೂಲಕ ಫಾಗಿಂಗ್‌ ಮಾಡಿಸಲಾಗುತ್ತಿದೆ ಎಂದು ಹೇಳಿದರು. ಕೆರೆಗಳಲ್ಲಿ ಸಂಗ್ರಹವಾಗುವ ನೀರಿನಲ್ಲೂ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಆದ್ದರಿಂದ ಅಲ್ಲಲ್ಲಿ ಕೆರೆಗಳಿಗೆ ಗಪ್ಪಿ ಗ್ಯಾಬೂಸಿಯ ಮೀನು ಮರಿಗಳನ್ನು ಬಿಡಲಾಗಿದೆ. ಈ ಮೀನುಗಳು ಸೊಳ್ಳೆ ಇಡುವ ಮೊಟ್ಟೆಗಳನ್ನು ತಿಂದು ನಾಶ ಮಾಡುತ್ತವೆ ಎಂದು ತಿಳಿಸಿದರು.

ಮುನ್ನೆಚ್ಚರಿಕೆ ಹೇಗೆ

* ಮನೆಯ ಸುತ್ತ ನೀರು ಸಂಗ್ರಹವಾಗದಂತೆ ಎಚ್ಚರ ವಹಿಸಬೇಕು.

* ನೀರು ಸಂಗ್ರಹ ತೊಟ್ಟಿಗಳನ್ನು ವಾರಕ್ಕೊಮ್ಮೆ ತೊಳೆದು ಒಣಗಿಸಬೇಕು.

* ಮನೆಯ ಸುತ್ತಮುತ್ತ ಬಾಟಲಿ ಡಬ್ಬಿ ತೆಂಗಿನ ಚಿಪ್ಪುಗಳಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು.

* ಘನತ್ಯಾಜ್ಯ ಸಮರ್ಪಕವಾಗಿ ನಿರ್ವಹಿಸಬೇಕು.

* ಸೊಳ್ಳೆ ಪರದೆ ಅಥವಾ ಸೊಳ್ಳೆ ನಿಯಂತ್ರಕ ಲಿಕ್ವಿಡ್‌ ಬಳಸಬೇಕು.

ಡೆಂಗಿ ಪ್ರಕರಣದ ವಿವರ

ತಾಲ್ಲೂಕು; ಡೆಂಗಿ ಪರೀಕ್ಷೆ ; ಡೆಂಗಿ ಪ್ರಕರಣ; ಸಕ್ರಿಯ

ಚಿಕ್ಕಮಗಳೂರು; 1558; 304; 18

ಕಡೂರು; 208; 30; 2 

ತರೀಕೆರೆ; 224; 29; 3

ಎನ್.ಆರ್.ಪುರ; 90; 14; 2

ಕೊಪ್ಪ; 153; 21; 3

ಶೃಂಗೇರಿ; 191; 21; 2

ಮೂಡಿಗೆರೆ; 166; 19; 2 ಒಟ್ಟು; 2590; 438; 32

ತಿಂಗಳುವಾರು ವಿವರ

ತಿಂಗಳು; ಪರೀಕ್ಷೆ; ಡೆಂಗಿ ಪ್ರಕರಣ

ಜನವರಿ; 70; 6

ಫೆಬ್ರುವರಿ; 110; 17

ಮಾರ್ಚ್‌; 85; 14

ಏಪ್ರಿಲ್‌; 135; 33

ಮೇ; 481; 120

ಜೂನ್;‌ 1399; 248

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.