ಚಿಕ್ಕಮಗಳೂರು: ತಾಲ್ಲೂಕಿನ ಬಿಂಡಿಗದ ಮಲ್ಲೇನಹಳ್ಳಿಯ ಆದಿಶಕ್ತಿ ದೇವೀರಮ್ಮನವರ ದೀಪೋತ್ಸವಕ್ಕೆ ಬರುವ ಭಕ್ತರು ಈ ಬಾರಿ ಹಗಲಿನಲ್ಲಿ ಮಾತ್ರ ಬೆಟ್ಟ ಹತ್ತಬೇಕು. ಅಶಕ್ತರು, ವೃದ್ಧರು, ಮಕ್ಕಳು, ರೋಗಿಗಳು ಬೆಟ್ಟ ಏರದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಸುರಕ್ಷತೆ ದೃಷ್ಟಿಯಿಂದ ಬೆಟ್ಟ ಹತ್ತದಿರುವುದು ಸೂಕ್ತ. ಹತ್ತಲೇಬೇಕಾದಲ್ಲಿ ಹಗಲಿನಲ್ಲಿ ಮಾತ್ರ ಹತ್ತಬೇಕು. 27ರಂದು ಬೆಟ್ಟದಲ್ಲಿ ಪೂಜಾ ಕೈಂಕರ್ಯಗಳು ಇರುತ್ತವೆ. ಹಿಂದಿನ ರಾತ್ರಿಯೇ ಭಕ್ತರು ಬೆಟ್ಟ ಹತ್ತಲು ಶುರು ಮಾಡಬಾರದು. 27ರಂದು ಹಗಲಿನಲ್ಲಿ ಮಾತ್ರ ಹತ್ತಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.
ಸತತವಾಗಿ ಮಳೆಯಾಗುತ್ತಿದೆ. ದೇವೀರಮ್ಮ ಬೆಟ್ಟವು ಕಡಿದಾದ ಎತ್ತರದ ಇಳಿಜಾರಿನ ಪ್ರದೇಶವಾಗಿದೆ. ಸಹಸ್ರಾರು ಭಕ್ತರು ಬೆಟ್ಟ ಹತ್ತುವುದರಿಂದ ಕಾಲು ದಾರಿ ಒತ್ತಡ ಮತ್ತು ಮಳೆ ನೀರಿನಿಂದ ಸಡಿಲಗೊಂಡು ಕುಸಿಯುವ ಸಾಧ್ಯತೆ ಇರುತ್ತದೆ ಎಂದು ಭೂವಿಜ್ಞಾನಿಗಳು ವರದಿ ನೀಡಿದ್ದಾರೆ. ಹವಾಮಾನ ಇಲಾಖೆ ಭಾರಿ ಮಳೆಯ ಮುನ್ಸೂಚನೆ ನೀಡಿದೆ. ಹಗಲಿನಲ್ಲಿಯೇ ಬೆಟ್ಟ ಹತ್ತುವಂತೆ ದೇಗುಲ ಸಮಿತಿಯೂ ಮನವಿ ಮಾಡಿದೆ. ಹೀಗಾಗಿ ರಾತ್ರಿ ಹೊತ್ತಿನಲ್ಲಿ ಬೆಟ್ಟ ಹತ್ತುವುದು ಸುರಕ್ಷಿತವಲ್ಲ ಎಂದು ಕಂಡುಬಂದಿದೆ. ಭಕ್ತರು ಸೂಚನೆಯನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.