ADVERTISEMENT

ದೇವಿರಮ್ಮ ದೀಪೋತ್ಸವ: ಬೆಟ್ಟ ಏರಿದ ಭಕ್ತರು

ಬೆಟ್ಟದಲ್ಲಿ ವರ್ಷಕ್ಕೊಮ್ಮೆ ವಿಶೇಷ ಪೂಜೆ, ಮಹಾಮಂಗಳಾರತಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 15:58 IST
Last Updated 30 ಅಕ್ಟೋಬರ್ 2024, 15:58 IST
ಬಿಂಡಿಗ ದೇವಿರಮ್ಮ ಬೆಟ್ಟ ಏರುತ್ತಿರುವ ಭಕ್ತರು
ಬಿಂಡಿಗ ದೇವಿರಮ್ಮ ಬೆಟ್ಟ ಏರುತ್ತಿರುವ ಭಕ್ತರು   

ಚಿಕ್ಕಮಗಳೂರು: ಬಿಂಡಿಗ ಐತಿಹಾಸಿಕ ದೇವಿರಮ್ಮನ ಜಾತ್ರಾ ಮಹೋತ್ಸವ ಆರಂಭವಾಗಿದ್ದು, ಭಕ್ತರು ಬೆಟ್ಟ ಹತ್ತಲು ಆರಂಭಿಸಿದ್ದಾರೆ. 

ಸುಮಾರು 3ಸಾವಿರ ಅಡಿ ಎತ್ತರದ ಬೆಟ್ಟದಲ್ಲಿ ನೆಲೆಸಿ ವರ್ಷಕ್ಕೊಮ್ಮೆ ದರ್ಶನ ನೀಡುವ, ಶಕ್ತಿ ದೇವತೆಯ ಪ್ರತೀಕವೂ ಆಗಿರುವ ದೇವಿರಮ್ಮನ ದರ್ಶನ ಪಡೆಯಲು ಪ್ರತಿವರ್ಷ ರಾಜ್ಯದ ವಿವಿಧ ಜಿಲ್ಲೆಗಳ ಮೂಲೆ ಮೂಲೆಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಬರುತ್ತಾರೆ. ದೀಪಾವಳಿ ಹಬ್ಬದ ಹಿಂದಿನ ದಿನ ಅಂದರೆ ನರಕ ಚತುರ್ದಶಿಯಂದು ಭಕ್ತರು ಬರಿಗಾಲಲ್ಲಿ ದುರ್ಗಮವಾದ ಬೆಟ್ಟವನ್ನೇರಿ ದೇವಿಯ ಮೂರ್ತಿ ಕಣ್ತಂಬಿಕೊಳ್ಳುವುದು ಇಲ್ಲಿನ ವಿಶೇಷ.

ಬೆಟ್ಟದಲ್ಲಿ ವರ್ಷಕ್ಕೊಮ್ಮೆ ವಿಶೇಷ ಪೂಜೆ, ಮಹಾಮಂಗಳಾರತಿ, ನಡೆಯಲಿದೆ. ಒಂದು ದಿನ ಮಾತ್ರವೇ ಭಕ್ತರು ಬೆಟ್ಟವೇರಲು ಅವಕಾಶವಿದೆ. ವಿವಿಧ ಜಿಲ್ಲೆ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಬರುವ ಭಕ್ತರು ಬುಧವಾರ ಸಂಜೆಯಿಂದಲೇ ಇರುವೆಗಳ ಸಾಲಿನಂತೆ ಮೊಬೈಲ್ ಬೆಳಕು ಹಿಡಿದು ಬೆಟ್ಟ ಏರುತ್ತಿದ್ದಾರೆ.

ADVERTISEMENT

ಇನ್ನು ಹರಕೆ ಹೊತ್ತ ಭಕ್ತರು ಬಳೆ, ತುಪ್ಪದ ಬಟ್ಟೆ, ಕಟ್ಟಿಗೆಯನ್ನು ಹೊತ್ತು ಸಾಗಿ ದೇವಿಗೆ ಸಮರ್ಪಿಸುತ್ತಿದ್ದಾರೆ. ದೇವಿರಮ್ಮ ಬೆಟ್ಟ ಏರಲು ನಿರ್ದಿಷ್ಟ ದಾರಿಯಿಲ್ಲ ಕಲ್ಲು–ಮಳ್ಳಿನ ಕಡಿದಾದ ಹಾದಿಯಲ್ಲೇ ಸಾಗಬೇಕು. ಬೆಟ್ಟದ ತುದಿಯಲ್ಲಿ ಪ್ರತಿಷ್ಠಾಪಿಸುವ ದೇವಿಯ ದರ್ಶನವಾದ ಬಳಿಕ ಕುಳಿತುಕೊಳ್ಳದೇ ಬೆಟ್ಟದಿಂದ ಇಳಿಯಬೇಕು.

ಜಿಲ್ಲಾಡಳಿತ ವತಿಯಿಂದ ಈಗಾಗಲೇ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ತುರ್ತು ಅಂಬುಲೆನ್ಸ್, ಅಗ್ನಿಶಾಮಕದಳ, ಆರೋಗ್ಯಸೇವೆ ನೀಡಲು ಸಿಬ್ಬಂದಿ ನಿಯೋಜಿಸಲಾಗಿದೆ. ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಬರುವ ಸಾಧ್ಯತೆ ಇದೆ. ಪೊಲೀಸರು ವಾಹನದಟ್ಟಣೆ ತಡೆಗೆ ಬ್ಯಾರಿಕೇಡ್ ಅಳವಡಿಸಿ ಸೂಕ್ತ ಭದ್ರತೆ ಒದಗಿಸಿದ್ದಾರೆ.

ಬುಧವಾರ ಮಧ್ಯಾಹ್ನವೇ ದೇವಿಯ ಉತ್ಸವ ಮೂರ್ತಿ ಬೆಟ್ಟದಲ್ಲಿನ ಗುಡಿಗೆ ಕೊಂಡೊಯ್ಯಲಾಗಿದೆ. ಭಕ್ತರು ಬೆಟ್ಟ ಏರಲು ಆರಂಭಿಸಿದ್ದಾರೆ ಎಂದು ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಕುಲಶೇಖರ್ ತಿಳಿಸಿದರು.

ಚಿಕ್ಕಮಗಳೂರು ತಾಲ್ಲೂಕಿನ ಮಲ್ಲೇನಹಳ್ಳಿ ಬಿಂಡಿಗ ದೇವಿರಮ್ಮ ಬೆಟ್ಟ ಏರುತ್ತಿರುವ ಭಕ್ತರು

ಮೊದಲ ಬಾರಿಗೆ ಮಳೆ ಅಡ್ಡಿ

ದೇವಿರಮ್ಮ ಜಾತ್ರೆ ದಿನ ಸಾಮಾನ್ಯವಾಗಿ ಮಳೆ ಇರುವುದಿಲ್ಲ. ಇದೇ ಮೊದಲ ಬಾರಿಗೆ ಮಳೆ ಅಡ್ಡಿಯಾಗಿದೆ. ಬುಧವಾರ ಸಂಜೆಯಿಂದ ಮಳೆ ಆರಂಭವಾಗಿದೆ. ಕಡಿದಾದ ಹಾದಿಯಲ್ಲಿ ಬೆಟ್ಟ ಏರಬೇಕಿದ್ದು ಮಳೆಯಾದರೆ ಜಾರಿಕೆ ಹೆಚ್ಚಾಗಲಿದೆ. ಇದರಿಂದ ಅನಾಹುತಗಳು ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಭಕ್ತರ ಸಂಖ್ಯೆ ಈ ಬಾರಿ ಕಡಿಮೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಬುಧವಾರ ಮತ್ತು ಗುರುವಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮೊದಲೇ ಮುನ್ಸೂಚನೆ ನೀಡಿತ್ತು. ಆದ್ದರಿಂದ 14 ವರ್ಷಕ್ಕೂ ಕಡಿಮೆ ವಯಸ್ಸಿನ ಮತ್ತು 60 ವರ್ಷ ಮೇಲ್ಪಟ್ಟವರು ಬೆಟ್ಟ ಏರುವ ಬಗ್ಗೆ ಆಲೋಚನೆ ನಡೆಸಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ. ಭಕ್ತರು ಮಳೆಯ ನಡುವೆಯೇ ಬೆಟ್ಟ ಏರುತ್ತಿದ್ದು ಭದ್ರತಾ ಸಿಬ್ಬಂದಿ ರಕ್ಷಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ತಂಡ ಕೂಡ ಮಳೆಯಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

50 ಬಸ್ ಸೌಕರ್ಯ

ದೇವಿರಮ್ಮ ದರ್ಶನಕ್ಕೆ ಬರುವ ಭಕ್ತರಿಗೆ ಚಿಕ್ಕಮಗಳೂರು ನಗರದಿಂದ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಮಾಡಲಾಗಿದೆ.  ಚಿಕ್ಕಮಗಳೂರಿನಿಂದ ಬಸ್‌ನಲ್ಲಿ ಬರುವ ಪ್ರಯಾಣಿಕರು ಐ.ಜಿ-ರಸ್ತೆ ಎಂ.ಜಿ.ರಸ್ತೆ ಡಿಎಸಿಜಿ ಪಾಲಿಟೆಕ್ನಿಕ್ ಮೈದಾನಗಳಲ್ಲಿ ವಾಹನ ನಿಲುಗಡೆ ಮಾಡಬೇಕು ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ದೇವಿರಮ್ಮ ಬೆಟ್ಟ ಏರಲು ಚಿಕ್ಕಮಗಳೂರು ನಗರದಿಂದ ಬಸ್‌ನಲ್ಲಿ ತೆರಳುತ್ತಿರುವ ಭಕ್ತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.