ADVERTISEMENT

ದೇವಿರಮ್ಮ ಬೆಟ್ಟದಲ್ಲಿ ಜನಸಾಗರ: ಬೆಟ್ಟದ ತುದಿಗೆ ಏರಿ ದೇವಿಯ ದರ್ಶನ ಪಡೆದ ಭಕ್ತರು

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2024, 7:04 IST
Last Updated 31 ಅಕ್ಟೋಬರ್ 2024, 7:04 IST
   

ಚಿಕ್ಕಮಗಳೂರು: ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ದೇವಿರಮ್ಮ ದೇವಿಯನ್ನು ಕಣ್ತುಂಬಿಕೊಳ್ಳಲು ಗುರುವಾರ ದೇವಿರಮ್ಮ ಬೆಟ್ಟದಲ್ಲಿ ಭಕ್ತ ಸಾಗರವೇ ನೆರೆದಿದೆ.

ಚಿಕ್ಕಮಗಳೂರು ತಾಲ್ಲೂಕಿನ ಮಲ್ಲೇನಹಳ್ಳಿಯ ಬಿಂಡಿಗ ದೇವಿರಮ್ಮ ಜಾತ್ರೆ ಗುರುವಾರ ಆರಂಭವಾಗಿದೆ. ಬೆಟ್ಟದ ತುದಿಯಲ್ಲಿ ಸಮುದ್ರ ಮಟ್ಟದಿಂದ ಮೂರು ಸಾವಿರ ಅಡಿಗಳಷ್ಟು ಎತ್ತರದಲ್ಲಿರುವ ದೇಗುಲಕ್ಕೆ ಬುಧವಾರ ಸಂಜೆಯಿಂದಲೇ ಭಕ್ತರು ಬರಲಾರಂಭಿಸಿದರು. ಬೆಟ್ಟವೇರಿ ದೇವಿ ದರ್ಶನ ಮಾಡುತ್ತಿದ್ದಾರೆ.

ಇಡೀ ದೇವಿರಮ್ಮ ಗುಡ್ಡ ಭಕ್ತರಿಂದ ತುಂಬಿಕೊಂಡಿದೆ. ಇಡೀ ರಾತ್ರಿ ಕತ್ತಲೆಯಲ್ಲಿ ಮೊಬೈಲ್‌ ಟಾರ್ಚ್‌ ಬೆಳಗಿಸಿಕೊಂಡು ದುರ್ಗಮ ಹಾದಿಯಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಹಾಕಿದರು. ಚೂಪು ಆಕೃತಿಯ ಈ ಬೆಟ್ಟದ ತುದಿಗೆ ಏರಿ ಸಂಭ್ರಮಿಸಿದರು.

ADVERTISEMENT

ಮಲ್ಲೇನಹಳ್ಳಿ ಕಡೆಯಿಂದ ಪ್ರಮುಖ ದಾರಿಯಲ್ಲಿ ಬಹುತೇಕರು ಭಕ್ತರು ಬಂದರೆ, ಮಾಣಿಕ್ಯಧಾರ ಜಲಪಾತದ ಕಡೆಯಿಂದಲೂ ಭಕ್ತರು ಸಾಲುಗಟ್ಟಿ ಬಂದರು. ಇನ್ನೊಂದೆಡೆ ಅರಿಶಿಣಗುಪ್ಪೆ ಕಡೆಯಿಂದ ತೋಟದೊಳಗಿನ ಮಾರ್ಗದಲ್ಲೂ ಹಲವರು ಬಂದು ದೇವಿಯ ದರ್ಶನ ಪಡೆದರು.

ಹಾದಿಯುದ್ದಕ್ಕೂ ಎಲ್ಲರೂ ಎಲ್ಲರಿಗಾಗಿ ಸಹಕಾರ ನೀಡುತ್ತಲೆ ಪಯಣ ಸಾಗಿತು. ಒಬ್ಬರಿಗೊಬ್ಬರು ಆಸರೆಯಾಗಿ ಕೈ ಕೈ ಹಿಡಿದುಕೊಂಡು ನಡೆದರು. ಬುಧವಾರ ರಾತ್ರಿ ಮಳೆ ಸುರಿದಿದ್ದರಿಂದ ಜಾರಿಕೆ ಜಾಸ್ತಿಯಾಗಿತ್ತು. ಬಿದ್ದು ಎದ್ದು ಮುಂದೆ ಸಾಗುತ್ತಲೇ ದೇವಿಯ ದರ್ಶನ ಪಡೆದರು. ಕಡಿದಾದ ಪ್ರದೇಶದಲ್ಲಿ ಭಕ್ತರಿಗೆ ನೆರವಾಗಲು ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಅಲ್ಲಲ್ಲಿ ನಿಂತಿದ್ದರು. ಹಗ್ಗದ ಸಹಾಯದಿಂದ ಮೇಲೆ ಏರಲು ಸಹಕಾರ ಮಾಡಿದರು.

ಜಾತ್ರಾ ಮಹೋತ್ಸದ ನಿಮಿತ್ತ ಮಲ್ಲೇನಹಳ್ಳಿ, ಬಿಂಡಿಗ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಂಭ್ರಮ ಮನೆ ಮಾಡಿದೆ. ಬೆಟ್ಟದ ಪದತಲದಲ್ಲಿನ ಬಿಂಡಿಗದ ದೇವೀರಮ್ಮ ದೇಗುಲದಲ್ಲಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಇನ್ನುಳಿದ ಎರಡು ಮಾರ್ಗಗಳಲ್ಲೂ ಭಕ್ತರು ಬೆಟ್ಟ ಇಳಿದ ವಾಹನಗಳಲ್ಲಿ ಸಾಗುವ ಕಡೆ ಪ್ರಸಾದ ಲಭ್ಯವಾಗುವಂತೆ ದೇವಸ್ಥಾನ ಮಂಡಳಿ ವ್ಯವಸ್ಥೆ ಮಾಡಿತ್ತು. 

ಭಕ್ತರ ಅನುಕೂಲಕ್ಕಾಗಿ ಕಡೂರು, ಬೀರೂರು, ಚಿಕ್ಕಮಗಳೂರಿನಿಂದ ಮಲ್ಲೇನಹಳ್ಳಿಗೆ ವಿಶೇಷ ಬಸ್ಸುಗಳ ವ್ಯವಸ್ಥೆಯನ್ನು ಕೆಎಸ್‌ಆರ್‌ಟಿಸಿಯಿಂದ ವ್ಯವಸ್ಥೆ ಮಾಡಲಾಗಿತ್ತು. ಗಿರಿಶ್ರೇಣಿ, ಮಲ್ಲೇನಹಳ್ಳಿ ಮಾರ್ಗದಲ್ಲಿ ವಾಹನಗಳ ದಟ್ಟಣೆ ಜಾಸ್ತಿ ಇತ್ತು. ಬುಧವಾರ ಸಂಜೆಯಿಂದಲೇ ಮಳೆ ಮತ್ತು ಚಳಿಯ ನಡುವೆ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದರು. ಶಾಸಕ ಎಚ್.ಡಿ.ತಮ್ಮಯ್ಯ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಕುಟುಂಬ ಸಮೇತ ಬೆಟ್ಟ ಏರಿ ದೇವಿ ದರ್ಶನ ಪಡೆದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.