ADVERTISEMENT

ಚಿಕ್ಕಮಗಳೂರು: ಬಿಂಡಿಗ ದೇವಿರಮ್ಮ ಬೆಟ್ಟದಲ್ಲಿ ಭಕ್ತ ಸಾಗರ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2024, 4:33 IST
Last Updated 1 ನವೆಂಬರ್ 2024, 4:33 IST
ಚಿಕ್ಕಮಗಳೂರಿನ ಬಿಂಡಿಗ ದೇವಿರಮ್ಮ ದೇವಿಯ ದರ್ಶನ ಪಡೆಯಲು ದೇವಿರಮ್ಮ ಬೆಟ್ಟ ಹತ್ತಿದ ಜನ
ಚಿಕ್ಕಮಗಳೂರಿನ ಬಿಂಡಿಗ ದೇವಿರಮ್ಮ ದೇವಿಯ ದರ್ಶನ ಪಡೆಯಲು ದೇವಿರಮ್ಮ ಬೆಟ್ಟ ಹತ್ತಿದ ಜನ   

ಚಿಕ್ಕಮಗಳೂರು: ವರ್ಷಕ್ಕೊಮ್ಮೆ ದರ್ಶನ ನೀಡುವ ದೇವಿರಮ್ಮ ದೇವಿಯನ್ನು ಕಣ್ತುಂಬಿಕೊಳ್ಳಲು ಗುರುವಾರ ದೇವಿರಮ್ಮ ಬೆಟ್ಟದಲ್ಲಿ ಭಕ್ತ ಸಾಗರವೇ ನೆರೆದಿತ್ತು.

ಚಿಕ್ಕಮಗಳೂರು ತಾಲ್ಲೂಕಿನ ಮಲ್ಲೇನಹಳ್ಳಿಯ ಬಿಂಡಿಗ ದೇವಿರಮ್ಮ ಜಾತ್ರೆ ಗುರುವಾರ ಆರಂಭವಾಗಿದೆ. ಗುರುವಾರ ಬೆಳಿಗ್ಗೆಯಿಂದಲೇ ದೇವಿರಮ್ಮ ಗುಡ್ಡ ಭಕ್ತರಿಂದ ತುಂಬಿಕೊಂಡಿತ್ತು. ಕಲ್ಲು ಮುಳ್ಳುಗಳ ಹಾದಿಯಲ್ಲಿ ಬರಿಗಾಲಿನಲ್ಲೇ ಸಾಗಿದ ಭಕ್ತರು, ಬೆಟ್ಟ ಏರಿ ದೇವಿಯ ದರ್ಶನ ಪಡೆದದರು.

ಸಮುದ್ರ ಮಟ್ಟದಿಂದ ಮೂರು ಸಾವಿರ ಅಡಿಗಳಷ್ಟು ಎತ್ತರದ ಬೆಟ್ಟದ ತುದಿಯಲ್ಲಿ ಇರುವ ದೇಗುಲಕ್ಕೆ ಬುಧವಾರ ಸಂಜೆಯಿಂದಲೇ ಭಕ್ತರು ಬರಲಾರಂಭಿಸಿದ್ದರು. ಇಡೀ ರಾತ್ರಿ ಕತ್ತಲೆಯಲ್ಲಿ ಮೊಬೈಲ್‌ ಟಾರ್ಚ್‌ ಬೆಳಗಿಸಿಕೊಂಡು ದುರ್ಗಮ ಹಾದಿಯಲ್ಲಿ ಹೆಜ್ಜೆ ಹಾಕಿದರು. ಚೂಪು ಆಕೃತಿಯ ಈ ಬೆಟ್ಟದ ತುದಿಗೆ ಏರಿ ಸಂಭ್ರಮಿಸಿದರು. 

ADVERTISEMENT

ಬಹುತೇಕ ಭಕ್ತರು ಮಲ್ಲೇನಹಳ್ಳಿ ಕಡೆಯಿಂದ ಪ್ರಮುಖ ದಾರಿಯಲ್ಲಿ ಬಂದರೆ, ಅನೇಕರು ಮಾಣಿಕ್ಯಧಾರ ಜಲಪಾತದ ಕಡೆಯಿಂದ ಸಾಲುಗಟ್ಟಿ ಬಂದರು. ಇನ್ನೊಂದೆಡೆ ಅರಿಶಿಣಗುಪ್ಪೆ ಕಡೆಯಿಂದ ತೋಟದೊಳಗಿನ ಮಾರ್ಗದಲ್ಲೂ ಹಲವರು ಬಂದು ದೇವಿಯ ದರ್ಶನ ಪಡೆದರು.

ಬುಧವಾರ ರಾತ್ರಿ ಮಳೆ ಸುರಿದಿದ್ದರಿಂದ ಜಾರುವ ಹಾದಿಯಲ್ಲಿ ಬೆಟ್ಟಹತ್ತಲು ಭಕ್ತರು ಹರಸಾಹಸಪಟ್ಟರು. ಹಾದಿಯುದ್ದಕ್ಕೂ ಪರಸ್ಪರರಿಗೆ ಸಹಕಾರ ನೀಡುತ್ತ ಪಯಣ ಸಾಗಿತು. ಒಬ್ಬರಿಗೊಬ್ಬರು ಆಸರೆಯಾಗಿ ಕೈ ಕೈ ಹಿಡಿದುಕೊಂಡು ನಡೆದರು. ಬುಧವಾರ ರಾತ್ರಿ ಮಳೆ ಸುರಿದಿದ್ದರಿಂದ, ಬಿದ್ದು ಎದ್ದು ಮುಂದೆ ಸಾಗುತ್ತಲೇ ದೇವಿಯ ದರ್ಶನ ಪಡೆದರು. ಕಡಿದಾದ ಪ್ರದೇಶದಲ್ಲಿ ಭಕ್ತರಿಗೆ ನೆರವಾಗಲು ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಅಲ್ಲಲ್ಲಿ ನಿಂತಿದ್ದರು. ಹಗ್ಗದ ಸಹಾಯದಿಂದ ಮೇಲೆ ಏರಲು ಸಹಕಾರ ಮಾಡಿದರು.

ಜಾತ್ರಾ ಮಹೋತ್ಸದ ನಿಮಿತ್ತ ಮಲ್ಲೇನಹಳ್ಳಿ, ಬಿಂಡಿಗ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಂಭ್ರಮ ಮನೆ ಮಾಡಿದೆ. ಬೆಟ್ಟದ ತಳದಲ್ಲಿನ ಬಿಂಡಿಗದ ದೇವೀರಮ್ಮ ದೇಗುಲದಲ್ಲಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ಬೆಟ್ಟ ಇಳಿದು ವಾಹನಗಳತ್ತ ಸಾಗುವ ಕಡೆಗಳಲ್ಲೂ ಪ್ರಸಾದ ಲಭ್ಯವಾಗುವಂತೆ ದೇವಸ್ಥಾನ ಮಂಡಳಿ ವ್ಯವಸ್ಥೆ ಮಾಡಿತ್ತು.

ಚಿಕ್ಕಮಗಳೂರಿನ ಬಿಂಡಿಗ ದೇವಿರಮ್ಮ ದೇವಿಯ ದರ್ಶನ ಪಡೆಯಲು ದೇವಿರಮ್ಮ ಬೆಟ್ಟ ಹತ್ತಿದ ಜನ
ಚಿಕ್ಕಮಗಳೂರಿನ ಬಿಂಡಿಗ ದೇವಿರಮ್ಮ ದೇವಿಯ ದರ್ಶನ ಪಡೆಯಲು ದೇವಿರಮ್ಮ ಬೆಟ್ಟ ಹತ್ತಿದ ಜನ
ಚಿಕ್ಕಮಗಳೂರಿನ ಬಿಂಡಿಗ ದೇವಿರಮ್ಮ ಬೆಟ್ಟದಲ್ಲಿ ನೆರಿದಿದ್ದ ಭಕ್ತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.