ಆಲ್ದೂರು: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023–24ನೇ ಸಾಲಿನ ವಾರ್ಷಿಕ ಸಭೆಯ ಆಹ್ವಾನ ಪತ್ರಿಕೆಯ ಕೊನೆಯ ಪುಟದಲ್ಲಿ ಮಹಾತ್ಮ ಗಾಂಧಿ, ಜವಹರಲಾಲ್ ನೆಹರೂ ಭಾವಚಿತ್ರ ಪ್ರಕಟಿಸಲಾಗಿತ್ತು. ಡಾ.ಬಿ.ಆರ್. ಅಂಬೇಡ್ಕರ್ ವೇದಿಕೆಯ ವತಿಯಿಂದ ಆಕ್ಷೇಪ ವ್ಯಕ್ತವಾಗಿದ್ದರಿಂದ ಆಹ್ವಾನ ಪತ್ರಿಕೆಯಲ್ಲಿ ಅಂಬೇಡ್ಕರ್ ಭಾವಚಿತ್ರ ಹಾಕುವ ನಿರ್ಧಾರವನ್ನು ನಂತರದ ಸಭೆಯಲ್ಲಿ ಕೈಗೊಳ್ಳಲಾಗಿತ್ತು. ಆದರೆ, ಅಂತಿಮವಾಗಿ ಮುದ್ರಣಗೊಂಡಿರುವ ಆಹ್ವಾನ ಪತ್ರಿಕೆಯಲ್ಲಿ ಅಂಬೇಡ್ಕರ್ ಅವರ ಭಾವಚಿತ್ರವನ್ನು ಪ್ರಕಟಿಸಿಲ್ಲ ಎಂದು ಅಂಬೇಡ್ಕರ್ ಹೋರಾಟ ವೇದಿಕೆ ಆಕ್ಷೇಪ ವ್ಯಕ್ತಪಡಿಸಿದೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಸಹಕಾರಿ ನಿಯಮವನ್ನು ಉಲ್ಲಂಘಿಸಿದೆ. ಹಾಗಾಗಿ ಸೆ. 4ರಂದು ವಾರ್ಷಿಕ ಸಭೆ ನಡೆಸಲು ಉದ್ದೇಶಿಸಿರುವ ದಿನವೇ, ಆ ಸಭೆ ಮುಂದೂಡುವಂತೆ ಆಗ್ರಹಿಸಿ ಅಂಬೇಡ್ಕರ್ ಹೋರಾಟ ವೇದಿಕೆಯಿಂದ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಹಾಗೆಯೇ ಸಹಕಾರಿ ಸಂಘಗಳ ಸಹಾಯಕ ನಿಬಂಧಕರು ಸಹಕಾರಿ ನಿಯಮ 17 (2)[ಎ](ii) ಉಲ್ಲಂಘಿಸಿ ಜೇಷ್ಠತೆ ಕಡೆಗಣಿಸಿ ಸಂಘದ ಸಿಇಒ ನಿವೃತ್ತಿ ನಂತರ ಕಿರಿಯ ನೌಕರನಿಗೆ ಪ್ರಭಾರ ಸಿಇಒ ಹುದ್ದೆಗೆ ನೇಮಿಸಿರುವುದನ್ನೂ ವೇದಿಕೆ ಖಂಡಿಸುತ್ತದೆ ಎಂದು ಸಂಘದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.