ADVERTISEMENT

ಕಾರ್ತಿಕ ಮಾಸ ಆರಂಭ.. ಅಗಲಿದವರ ನೆನಪಿನ ಹಬ್ಬ ದೀಪಾವಳಿ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2024, 7:30 IST
Last Updated 2 ನವೆಂಬರ್ 2024, 7:30 IST
   

ದೀಪಾವಳಿ ಕಾರ್ತಿಕ ಮಾಸ ಆರಂಭದಲ್ಲಿ ನಡೆಯುವ ಸಂಭ್ರಮದ ಹಬ್ಬ.

ದೀಪಾವಳಿ ಹಬ್ಬವೆಂದರೆ ಕೇವಲ ದೀಪ ಹಚ್ಚಿ, ಬೆಳಕಿನ ಹಂದರದಲ್ಲಿ ಮನೆಯನ್ನು ಅಲಂಕಾರ ಮಾಡಿ, ದೇವರಿಗೆ, ಹಿರಿಯರಿಗೆ ಪೂಜೆ ಸಲ್ಲಿಸಿ, ಪಟಾಕಿ ಹೊಡೆಯುವುದು, ಹೋಳಿಗೆ, ಹಪ್ಪಳ ಸಂಡಿಗೆ ಮತ್ತಿತರ ಭಕ್ಷ್ಯ ಬೋಜನ ಮಾಡಿ ಸೇವಿಸುವುದಷ್ಟೇ ಅಲ್ಲ. ಬದಲಿಗೆ, ನಮ್ಮ ಪೂರ್ವಿಕರು ಕಾರ್ತಿಕ ಮಾಸಕ್ಕೆ ವಿಶೇಷವಾದ ಆದ್ಯತೆಯನ್ನು ನೀಡಿದ್ದಾರೆ. ಹಬ್ಬದಲ್ಲಿ ಮನೆಗಳನ್ನು ಸ್ವಚ್ಛಗೊಳಿಸಿಕೊಂಡು, ತಳಿರು– ತೋರಣಗಳಿಂದ ಬಾಗಿಲುಗಳನ್ನು ಸಿಂಗರಿಸುವರು. ಸಂಜೆ, ಮನೆ–ಮನೆಗಳ ಮುಂದೆ ದೀಪಗಳನ್ನು ಹಚ್ಚಿ, ಲಕ್ಷ್ಮಿಯನ್ನು ಸ್ವಾಗತಿಸುವರು.

ಹಟ್ಟಿ ಹಬ್ಬ, ಹಿರಿಯರ ಹಾಗೂ ದೇವೀರಮ್ಮನ ಆರಾಧನೆ

ADVERTISEMENT

ದೀಪಾವಳಿ ಹಬ್ಬದ ದಿನದ ಮುಂಜಾನೆಯೇ ಮನೆಯ ಅಂಗಳವನ್ನು ಗುಡಿಸಿ, ಸಗಣಿಯಿಂದ ಸಾರಿಸಿ ರಂಗೋಲಿ ಹಾಕುವರು. ಪ್ರತಿಯೊಂದು ಮನೆಗಳ ಮುಂದೆ, ಸಂಜೆ ತಂಗಟೆ ಹೂವು, ಅವರೆ, ತೊಗರಿ ಹೂವು, ಅನ್ನೆ ಹೂವು ಗುಚ್ಛಗಳ ಜತೆ, ಚೆಂಡು ಹೂವು ಮತ್ತಿತರ ಹೂವುಗಳನ್ನು ಬೆರೆಸಿ, ಅಂಗಳದ ತುಂಬಾ ಹಟ್ಟಿ ಹಾಕುವುದು ವಾಡಿಕೆಯಾಗಿದೆ. ಸಂಜೆ ಕತ್ತಲಾಗುತ್ತಿದ್ದಂತೆಯೇ ಮನೆಯಲ್ಲಿ ಮನೆದೇವರು, ಹಿರಿಯರ ಪೂಜೆ ಹಾಗೂ ದೇವೀರಮ್ಮನ ಪೂಜೆಯನ್ನು ಮಾಡಿ, ವಿವಿಧ ಭಕ್ಷ್ಯಗಳನ್ನು ಎಡೆ ಮಾಡಿ, ನೆಂಟರಿಷ್ಟರೊಂದಿಗೆ ಕಲೆತು ಊಟ ಮಾಡುವುದು ವಿಶೇಷವೆಂದೇ ಹೇಳಬಹುದು.

ತಿಂಗಳ ಹಬ್ಬ

ದೀಪಾವಳಿ ಹಬ್ಬವನ್ನು ಕಾರ್ತಿಕ ಮಾಸದಲ್ಲಿ ಆಚರಿಸುವುದು ವಾಡಿಕೆ. ಇನ್ನೂ ವಿಶೇಷವೆಂದರೆ, ಈ ಹಬ್ಬವನ್ನು ರಾಜ್ಯದ ಜನತೆ ಒಂದೇ ದಿನ ಆಚರಿಸುವುದಿಲ್ಲ. ಅಮಾವಾಸ್ಯೆಯಿಂದ ಮುಂದಿನ ಅಮಾವಾಸ್ಯೆ ಒಳಗೆ ಈ ಹಬ್ಬವನ್ನು ಆಚರಿಸುವುದು. ಅದರಲ್ಲೂ, ವಾರದ ಮಂಗಳವಾರ ಅಥವಾ ಶುಕ್ರವಾರದಂದು ಆಚರಿಸುವುದು ವಿಶೇಷ. ಹಿಂದಿನವರು ಅವಿಭಕ್ತ ಕುಟುಂಬದವರಾಗಿದ್ದು, ತಮ್ಮ ಹೆಣ್ಣುಮಕ್ಕಳ ಗಂಡನ ಮನೆಯವರನ್ನೂ ಹಬ್ಬಕ್ಕೆ ಆಹ್ವಾನಿಸಿ, ಎಲ್ಲರ ಜತೆಗೆ ಹಬ್ಬವನ್ನು ಆಚರಿಸುತ್ತಿದ್ದರು. ಹೀಗಾಗಿ, ಬಂಧು– ಬಳಗದವರನ್ನು ಒಟ್ಟಿಗೆ ಕರೆದು, ಹಬ್ಬವನ್ನು ಆಚರಿಸುವ ಸಲುವಾಗಿ, ಇಡೀ ಕಾರ್ತಿಕ ಮಾಸಪೂರ್ತಿ ಈ ಹಬ್ಬವನ್ನು ವಿವಿಧ ಕಡೆಗಳಲ್ಲಿ ಅವರ ಅನುಕೂಲಕ್ಕೆ ತಕ್ಕಂತೆ ಆಚರಿಸುವುದು ಇಂದಿಗೂ ರೂಢಿಯಲ್ಲಿದೆ.

ಲಕ್ಷ್ಮೀ ದೇವಿಗೆ ಪ್ರಾಶಸ್ತ್ಯ

ಅಮಾವಾಸ್ಯೆ ಅಥವಾ ನರಕ ಚತುರ್ದಶಿಯಂದು ಗ್ರಾಮದ ಪ್ರತಿಯೊಂದು ಅಂಗಡಿಗಳಲ್ಲಿ ಲಕ್ಷ್ಮೀ ದೇವಿಯ ಪ್ರತಿಮೆಯನ್ನು ಪ್ರತಿಷ್ಠಾಪಿಸಿ, ವಿಶೇಷವಾಗಿ ಅಲಂಕಾರ ಮಾಡಿ, ಪೂಜೆ ಸಲ್ಲಿಸುತ್ತಾರೆ. ಪೂಜೆಯ ನಂತರ ಮಕ್ಕಳು ಪಟಾಕಿ ಸಿಡಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.