ADVERTISEMENT

ಸಂಘಟನೆಗಳಿಂದ ಸಂಘರ್ಷಗಳಾಗದಿರಲಿ : ರಂಭಾಪುರಿ ಶ್ರೀ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2023, 17:19 IST
Last Updated 7 ಸೆಪ್ಟೆಂಬರ್ 2023, 17:19 IST
ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ನಡೆಯುತ್ತಿರುವ ಶ್ರಾವಣ ಧರ್ಮ ಸಮಾರಂಭದಲ್ಲಿ ಸ್ವಾಮೀಜಿ ಇಷ್ಟಲಿಂಗ ಪೂಜೆ ಮಾಡಿದರು
ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ನಡೆಯುತ್ತಿರುವ ಶ್ರಾವಣ ಧರ್ಮ ಸಮಾರಂಭದಲ್ಲಿ ಸ್ವಾಮೀಜಿ ಇಷ್ಟಲಿಂಗ ಪೂಜೆ ಮಾಡಿದರು   

ರಂಭಾಪುರಿ ಪೀಠ(ಬಾಳೆಹೊನ್ನೂರು): ‘ವಿಚಾರ ವಿಮರ್ಶೆಗಳು ಸಂಸ್ಕೃತಿಯ ಮೇಲೆ ಹೊಸ ಬೆಳಕು ಮೂಡಿಸಬೇಕೇ ಹೊರತು, ನಾಸ್ತಿಕರನ್ನಾಗಿ ಮಾಡಬಾರದು. ಎಲ್ಲ ರಂಗಗಳಲ್ಲಿ ಸಂಘಟನೆಗಳು ನಡೆಯಲಿ ಆದರೆ ಸಂಘರ್ಷಗಳು ನಡೆಯಬಾರದು’ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.

ಪೀಠದಲ್ಲಿ ಶ್ರಾವಣ ಮಾಸದ ಅಂಗವಾಗಿ ನಡೆದ ರೇಣುಕ ವಿಜಯ ಪುರಾಣ ಪ್ರವಚನ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಮನುಷ್ಯನ ವರ್ತನೆಗಳು ಅತಿರೇಕವಾದಾಗ ದೇವರು ಯಾವ ರೂಪದಲ್ಲಾದರೂ ಬಂದು ಅಹಂಕಾರವನ್ನು ನಾಶಗೊಳಿಸಬಲ್ಲ. ಕತ್ತಲನ್ನು ಮೀರಿ ಬೆಳಕು ನೀಡುವುದರಿಂದಲೇ ದೀಪಕ್ಕೊಂದು ಬೆಲೆ, ಕಷ್ಟಗಳನ್ನು ಮೀರಿ ಬೆಳೆದು ನಿಂತಾಗಲೇ ಬದುಕಿಗೊಂದು ಬೆಲೆ ಬರಲು ಸಾಧ್ಯವಾಗುತ್ತದೆ. ಎಳೆಯ ಬಿದಿರು ಸುಲಭವಾಗಿ ಮಣಿಯುತ್ತದೆ. ಆದರೆ, ಬಲಿತ ಬಿದಿರು ಬಗ್ಗದು. ಹಾಗೆಯೇ ಎಳೆಯ ಮನಸ್ಸನ್ನು ತಿದ್ದಿ ತೀಡಬಹುದು. ಆದರೆ, ಬಲಿತ ಮನಸ್ಸನ್ನು ತಿದ್ದುವುದು ಸುಲಭವಲ್ಲ.  ಸಜ್ಜನರ ಒಡನಾಟದಿಂದ ಮನುಷ್ಯನಿಗೆ ಶ್ರೇಷ್ಠ ಫಲ ಪ್ರಾಪ್ತಿಯಾಗುತ್ತದೆ ಎಂದರು.

ADVERTISEMENT

ಚಿಕ್ಕಮಗಳೂರಿನ ಜಗದ್ಗುರು ರೇಣುಕಾಚಾರ್ಯ ಟ್ರಸ್ಟ್‌ನ 185ನೇ ವಾರ್ಷಿಕ ಸಮಾವೇಶ ರಂಭಾಪುರಿ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ನಡೆಯಿತು.
ಬೆಳಿಗ್ಗೆ ಪೀಠದ ಎಲ್ಲ ದೈವಗಳಿಗೆ ಶ್ರಾವಣ ಮಾಸದ ಅಂಗವಾಗಿ ವಿಶೇಷ ಪೂಜೆ ಮತ್ತು ರಂಭಾಪುರಿ ಸ್ವಾಮೀಜಿಗಳ ಇಷ್ಟಲಿಂಗ ಪೂಜೆ ನೆರವೇರಿತು.

ಮಾದನ ಹಿಪ್ಪರಗಿ ಹಿರೇಮಠದ ಶಾಂತವೀರ ಶಿವಾಚಾರ್ಯ ಸ್ವಾಮಿ, ಚಿಕ್ಕಮಗಳೂರಿನ ಜಗದ್ಗುರು ರೇಣುಕಾಚಾರ್ಯ ಟ್ರಸ್ಟ್‌ನ  ಖಜಾಂಚಿ ಉಪ್ಪಳ್ಳಿ ಬಸವರಾಜ, ಆಲ್ದೂರು ಬಿ.ಬಿ.ರೇಣುಕಾರ್ಯರು, ಕೆ.ವೀರರಾಜ್, ಎ.ಎಸ್.ಸೋಮಶೇಖರಯ್ಯ, ಎಂ.ಡಿ.ಪುಟ್ಟಸ್ವಾಮಿ, ಎಸ್.ಎಂ.ದೇವಣ್ಣಗೌಡ, ಬಿ.ಎ.ಶಿವಶಂಕರ, ಅ.ಭಾ.ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಹೆಚ್.ಎಂ.ಲೋಕೇಶ, ಹಗರಿಬೊಮ್ಮನಹಳ್ಳಿ ತಿಪ್ಪೆಸ್ವಾವಿ, ಶಿವಮೊಗ್ಗದ ಶಾಂತಾ ಆನಂದ, ಶಿಕ್ಷಕ ವೀರೇಶ ಕುಲಕರ್ಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.