ಶೃಂಗೇರಿ: ‘ನಮ್ಮ ಹಿರಿಯರು ಮೌಲ್ಯಗಳಿಂದ ದೇಶವನ್ನು ಕಟ್ಟಿದ್ದು, ಅವರ ಶ್ರಮ ವ್ಯರ್ಥಗೊಳಿಸದೇ ಎಲ್ಲ ಕ್ಷೇತ್ರಗಳಲ್ಲೂ ಮೌಲ್ಯಗಳನ್ನು ಪಾಲಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.
ಇಲ್ಲಿ ರೋಟರಿ ಕ್ಲಬ್ ಆಯೋಜಿಸಿದ್ದ ‘ಶಿಕ್ಷಕರಿಗೆ ನೇಷನ್ ಬಿಲ್ಡರ್ ಅವಾರ್ಡ್’ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮಾನವ ಸಂಪನ್ಮೂಲ ದೇಶದ ಪ್ರಮುಖ ಸಂಪತ್ತು. ವಿಶೇಷವಾಗಿ 46 ಕೋಟಿ ವಿದ್ಯಾರ್ಥಿಗಳು ದೇಶದಲ್ಲಿ ಶಿಕ್ಷಣ ಪಡೆಯುತ್ತಿದ್ದು, ನೈತಿಕ ಮೌಲ್ಯಗಳನ್ನು ತುಂಬುವ ಕಾರ್ಯವನ್ನು ಶಿಕ್ಷಕರು ಮತ್ತು ಪೋಷಕರು ಮಾಡಬೇಕು. ಶೈಕ್ಷಣಿಕ, ವೈದ್ಯಕೀಯ, ಧಾರ್ಮಿಕ ಕ್ಷೇತ್ರಗಳು ವಾಣಿಜ್ಯೀಕರಣಗೊಳ್ಳುತ್ತಿರುವುದು ಬೇಸರದ ವಿಚಾರ ಎಂದರು.
ರೋಟರಿ ಸಂಸ್ಥೆ ಅಧ್ಯಕ್ಷೆ ಅನಸೂಯ ಮಾತನಾಡಿ, ರೋಟರಿ ಇಂಡಿಯಾ ಲಿಟ್ರಸಿ ಮಿಷನ್‍ನ ಟಿ.ಇ.ಎ.ಸಿ.ಎಚ್‍ನ ಕಾರ್ಯಕ್ರಮದ ಅಡಿಯಲ್ಲಿ ಈ ಪ್ರಶಸ್ತಿಯನ್ನು ಶಿಕ್ಷಕಿಗೆ ನೀಡಲಾಗಿದೆ. ಮಕ್ಕಳಲ್ಲಿರುವ ಕಲಿಕಾ ನ್ಯೂನತೆಗಳನ್ನು ಗುರುತಿಸುವಲ್ಲಿ ಹಾಗೂ ಪರಿಹರಿಸುವಲ್ಲಿ ಶಿಕ್ಷಕರಿಗೆ ತರಬೇತಿ ನೀಡುತ್ತೇವೆ’ ಎಂದರು.
ಗಂಡಘಟ್ಟದ ಸರ್ಕಾರಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯ ಶಿಕ್ಷಕಿ ಬಿ.ಸುಜಾತಾ ಅವರಿಗೆ ನೇಷನ್ ಬಿಲ್ಡರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮೆಣಸೆ ಸರ್ಕಾರಿ ಶಾಸಕ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಡಾ.ಗಂಗಾರಪ್ಪ ಮತ್ತು ಅಂಗನವಾಡಿಯ ನಿವೃತ್ತ ಶಿಕ್ಷಕಿ ರೇಣುಕಾ ಅವರನ್ನು ಸನ್ಮಾನಿಸಲಾಯಿತು.
ರೋಟರಿ ಕ್ಲಬ್ ಕಾರ್ಯದರ್ಶಿ ಡಾ.ಕೆ.ಸಿ ನಾಗೇಶ್, ವಲಯ ಸೇನಾನಿ ಗಣೇಶ್, ಇನ್ನರ್‌ವ್ಹೀಲ್ ಅಧ್ಯಕ್ಷೆ ಪ್ರಿಯದರ್ಶಿನಿ ಹೆಗ್ಡೆ, ಕಾರ್ಯದರ್ಶಿ ಸುಜಾತಾ, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತರಾಯಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.