ADVERTISEMENT

ಚಿಕ್ಕಮಗಳೂರು: ಚರಂಡಿ ಅಧ್ವಾನ, ಸೊಳ್ಳೆಕಾಟ, ದುರ್ನಾತ

20ನೇ ವಾರ್ಡ್‌: ಶಾಂತಿನಗರ ಬಡಾವಣೆ

ಬಿ.ಜೆ.ಧನ್ಯಪ್ರಸಾದ್
Published 5 ನವೆಂಬರ್ 2022, 7:42 IST
Last Updated 5 ನವೆಂಬರ್ 2022, 7:42 IST
ಶಾಂತಿನಗರದ ಗಣೇಶ್‌ ಎಂಬವರ ಮನೆ ಮುಂದೆ ಕೊಚ್ಚೆ ನೀರು ನಿಂತಿರುವುದು. ಎ.ಎನ್‌.ಮೂರ್ತಿ/ಪ್ರಜಾವಾಣಿ ಚಿತ್ರ
ಶಾಂತಿನಗರದ ಗಣೇಶ್‌ ಎಂಬವರ ಮನೆ ಮುಂದೆ ಕೊಚ್ಚೆ ನೀರು ನಿಂತಿರುವುದು. ಎ.ಎನ್‌.ಮೂರ್ತಿ/ಪ್ರಜಾವಾಣಿ ಚಿತ್ರ   

ಚಿಕ್ಕಮಗಳೂರು: ನಗರದ 20ನೇ ವಾರ್ಡ್‌ನ ಶಾಂತಿನಗರ, ಬಂಡಿಮೋಟು ಬಡಾವಣೆಗಳು ಚರಂಡಿಗಳು ಅವ್ಯವಸ್ಥೆಯ ಕೂಪಗಳಾಗಿವೆ. ಶಾಂತಿನಗರದಲ್ಲಿ ಮನೆಯೊಂದರ ಮುಂದೆಯೇ ರಾಡಿ ನೀರು ಜಮಾಯಿಸಿದೆ.

ಬಟ್ಟೆ, ಪಾತ್ರೆ ತೊಳೆದ ನೀರು, ಬಚ್ಚಲು ನೀರು ಹರಿಯಲು ಚರಂಡಿ ವ್ಯವಸ್ಥೆ ಇಲ್ಲ. ಗಲೀಜು ನೀರು ಮನೆಗಳ ಮುಂದೆಯೇ ಜಮಾಯಿಸಿದೆ. ಗಲೀಜು, ದುರ್ನಾತ, ಸೊಳ್ಳೆ ಕಾಟದ ನಡುವೆ ಕುಟುಂಬಗಳು ಬದುಕುವಂತಾಗಿದೆ.

ಶಾಂತಿನಗರ ಮತ್ತು ಬಂಡಿಮೋಟ ಬಡಾವಣೆ ಗಲ್ಲಿಗಲ್ಲಿಯಲ್ಲೂ ಚರಂಡಿ ದುಃಸ್ಥಿತಿಯಲ್ಲಿವೆ. ನಗರ ಪೊಲೀಸ್‌ ಸ್ಟೇಷನ್‌ ಹಿಂಭಾಗದ ಕೆಲವೆಡೆ ಚರಂಡಿಗಳು ಕಟ್ಟಿಕೊಂಡಿವೆ. ‌ಮೂಗುಮೂಚ್ಚಿಕೊಂಡು ಓಡಾಡಬೇಕಾದ ಸ್ಥಿತಿ ಇದೆ. ಕೆಲವೆಡೆ ಕಲ್ಲು, ಮಣ್ಣು ತುಂಬಿದ್ದು, ಚರಂಡಿಗಳು ‘ಕಣ್ಮರೆ’ಯಾಗಿವೆ.

ಕಸದ ರಾಶಿ: ಶಾಂತಿನಗರದ ಕೆಲವು ಗಲ್ಲಿಗಳು ವಾಹನ ಓಡಾಡದಷ್ಟು ಕಿರಿದಾಗಿವೆ. ಕಸದ ಸಂಗ್ರಹಕ್ಕೆ ಸ್ವಚ್ಛತಾ ವಾಹಿನಿಗಳು ಈ ಗಲ್ಲಿಗಳಿಗೆ ಹೋಗಲ್ಲ. ಗಲ್ಲಿಯ ತುದಿ ಅಥವಾ ನಿವೇಶನಗಳಲ್ಲಿ ಕಸ ಸುರಿಯವ ಪರಿಪಾಟ ಇದೆ.

ನಗರ ಪೊಲೀಸ್‌ ಠಾಣೆಯ ಹಿಂಭಾಗದಲ್ಲಿ ಕಸ ರಾಶಿ ಬಿದ್ದಿದೆ. ಕಸದ ಸಮಸ್ಯೆ ವಿಪರೀತವಾಗಿದೆ. ಕಸದ ಗಾಡಿ ಶುಲ್ಕವನ್ನು ಪ್ರತಿ ತಿಂಗಳು ವಸೂಲಿ ಮಾಡುತ್ತಾರೆ ಎಂದು ನಿವಾಸಿಗಳು ದೂರುತ್ತಾರೆ.

ಕೆಲವು ವಿದ್ಯುತ್‌ ಕಂಬಗಳಲ್ಲಿ ತಂತಿಗಳು ಅಪಾಯಕ್ಕೆ ಆಹ್ವಾನ ನೀಡುವಂತಿವೆ. ತುದಿ ಭಾಗ ವೈರಗಳು, ಫ್ಯೂಸ್‌ಗಳ ಮಯವಾಗಿವೆ. ಕಂಬಗಳು ಶಿಥಿಲಾವಸ್ಥೆಯಲ್ಲಿವೆ.

ಬಂಡಿಮೋಟು ಬಡಾವಣೆಯಲ್ಲಿ ನೀರಿನ ತೊಂಬೆಯ ಪಂಪ್‌ಸೆಟ್‌ನ ಸ್ಟಾರ್ಟರ್‌ ಪೆಟ್ಟಿಗೆಗೆ ಬಾಗಿಲು ಇಲ್ಲ. ಪೆಟ್ಟಿಗೆ ತುಕ್ಕು ಹಿಡಿದಿದೆ.
ರಸ್ತೆಗಳ ಅವ್ಯವಸ್ಥೆ: ಶಾಂತಿನಗರದ ಹಲವು ಗಲ್ಲಿಗಳಲ್ಲಿ ದ್ವಿಚಕ್ರವಾಹನ ಚಲಾಯಿಸಲು ‘ಸರ್ಕಸ್‌’ ಮಾಡಬೇಕಾದ ಸ್ಥಿತಿ ಇದೆ. ಅಮೃತ್‌ ಯೋಜನೆ ಕಾಮಗಾರಿಗೆ ಅಗೆದು ಸರಿಯಾಗಿ ಮುಚ್ಚಿಲ್ಲ. ರಸ್ತೆಗಳು ಹದಗೆಟ್ಟಿವೆ.

‘ಕಾಮಗಾರಿ ಪಟ್ಟಿ ಸಲ್ಲಿಕೆ’

ADVERTISEMENT

‘ವಾರ್ಡ್‌ನಲ್ಲಿ ಚರಂಡಿ, ಒಳಚರಂಡಿ, ರಸ್ತೆ ಸಮಸ್ಯೆ ವಿಪರೀತ ಇದೆ. ಒಳಚರಂಡಿ, ಬಾಕ್ಸ್‌ ಚರಂಡಿ ಸಹಿತ ವಿವಿಧ ಕಾಮಗಾರಿಗಳ ಪಟ್ಟಿಯನ್ನು ನಗರಸಭೆಗೆ ನೀಡಿದ್ದೇನೆ. ಆದರೆ, ಕಾಮಗಾರಿಗಳಿಗೆ ಅನುಮೋದನೆ ನೀಡಿಲ್ಲ’ ಎಂದು 20ನೇ ವಾರ್ಡ್‌ ಸದಸ್ಯೆ ತಬಸುಮ್‌ ಬಾನು ತಿಳಿಸಿದರು.

‘ನಗರಸಭೆ ಅಧ್ಯಕ್ಷರೂ ವಾರ್ಡ್‌ ಭೇಟಿ ನೀಡಿ, ಸಮಸ್ಯೆಗಳನ್ನು ಪರಿಶೀಲಿಸಿದ್ದಾರೆ. ಆದರೆ, ಅನುದಾನ ಬಿಡುಗಡೆಗೆ ಮಾತ್ರ ಕ್ರಮ ವಹಿಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.