ನರಸಿಂಹರಾಜಪುರ: ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಭದ್ರಾ ಹಿನ್ನೀರು ಸಂಪೂರ್ಣ ಕಡಿಮೆಯಾಗಿದ್ದು ಬ್ರಿಟಿಷರ ಕಾಲದಲ್ಲಿ ನಿರ್ಮಿಸಿದ್ದ ಲಿಂಗಾಪುರ ಸೇತುವೆ ಪೂರ್ಣವಾಗಿ ಕಾಣಿಸುತ್ತಿದೆ.
ಭದ್ರಾ ಅಣೆಕಟ್ಟನ್ನು ನಿರ್ಮಣ ಮಾಡುವ ಮುನ್ನ ಈ ಸೇತುವೆಯ ಮೇಲೆ ಶಿವಮೊಗ್ಗಕ್ಕೆ ಹೋಗುವ ರಸ್ತೆ ಇತ್ತು. ಪುರಾತನ ತಂತ್ರಜ್ಞಾನದಿಂದ ಶತಮಾನಗಳ ಹಿಂದೆ ನಿರ್ಮಿಸಿದ ಕಲ್ಲಿನ ಸೇತುವೆ ಇಂದಿಗೂ ಅಸ್ತಿತ್ವ ಉಳಿಸಿಕೊಂಡು ಊರಿನ ಗತವೈಭವವನ್ನು ಮೆಲುಕು ಹಾಕಲು ನೆರವಾಗಿದೆ.
ಎಡೆಹಳ್ಳಿಯಾಗಿದ್ದಾಗ ನರಸಿಂಹರಾಜಪುರವು ಲಕ್ಕವಳ್ಳಿ ತಾಲ್ಲೂಕಿನ ಪ್ರಮುಖ ಭಾಗವಾಗಿತ್ತು. 1897ರ ವರೆಗೂ ಎಡೆಹಳ್ಳಿ ಉಪ ತಾಲ್ಲೂಕಾಗಿತ್ತು. ಭದ್ರಾ ಅಣೆಕಟ್ಟನ್ನು ನಿರ್ಮಿಸುವ ಮೊದಲು ಭದ್ರಾ ಹಿನ್ನೀರಿನಲ್ಲಿ ಮುಳುಗಡೆಯಾಗಿರುವ ಪ್ರದೇಶದಲ್ಲಿ ಅತಿಹೆಚ್ಚು ಭತ್ತ ಬೆಳೆಯುತ್ತಿದ್ದುದರಿಂದ ರಾಜ್ಯದಲ್ಲಿ ಭತ್ತದ ಕಣಜ ಎಂದು ಈ ಭಾಗ ಪ್ರಸಿದ್ಧಿ ಪಡೆದಿತ್ತು. ಭದ್ರಾ ಅಣೆಕಟ್ಟು ನಿರ್ಮಿಸಿದಾಗಿನಿಂದ ಫಲವತ್ತಾದ ಕೃಷಿಭೂಮಿ ಮುಳುಗಿದ್ದು ಮಾತ್ರವಲ್ಲದೆ ಭವ್ಯವಾದೊಂದು ಸಂಸ್ಕೃತಿ ಹಾಗೂ ಸಂಪರ್ಕದ ಮಾರ್ಗವೂ ಮುಳುಗಿ ಹೋಯಿತು.
ಈಗ ಭದ್ರಾ ಹಿನ್ನೀರಿನ ಪ್ರಮಾಣ ಸಂಪೂರ್ಣ ಇಳಿದಿರುವುದರಿಂದ ಹಳೆಯ ಜನವಸತಿ ಪ್ರದೇಶಗಳು, ಸಂಪರ್ಕ ವ್ಯವಸ್ಥೆಯ ಕುರುಹುಗಳು ಎದ್ದು ಕಾಣಿಸುತ್ತಿವೆ.
ತಾಲ್ಲೂಕು ಕೇಂದ್ರದಿಂದ ಜೈಲು ರಸ್ತೆಯ ಈದ್ಗಾ ಮೈದಾನದ ಸಮೀಪ ಹಾದುಹೋಗುವ ಹಳೆ ಶಿವಮೊಗ್ಗ ರಸ್ತೆಯಿಂದ ಸುಮಾರು 5 ಕಿಲೊಮೀಟರ್ ದೂರ ಭದ್ರಾಹಿನ್ನೀರು ಪ್ರದೇಶದಲ್ಲಿ ಸಂಚರಿಸಿದರೆ ಮುಳುಗಿರುವ ಲಿಂಗಾಪುರ ಕಮಾನಿನಿ ಸೇತುವೆ ಕಾಣಸಿಗುತ್ತದೆ. ಹಿನ್ನೀರಿನಲ್ಲಿ ಮುಳುಗಿ 60 ವರ್ಷ ಕಳೆದರೂ ನೂರಾರು ವರ್ಷಗಳ ಹಿಂದಿನ ಬ್ರಿಟಿಷರ ಕಾಲದ ದೇಸಿ ತಂತ್ರಜ್ಞಾನ ಕಣ್ಣಿಗೆ ರಾಚುತ್ತದೆ. ಶಿಥಿಲವಾಗದೆ ಉಳಿದಿರುವ ಸೇತುವೆ ಆಧುನಿಕ ತಂತ್ರಜ್ಞಾನಕ್ಕೆ ಸವಾಲೆಸೆಯುವಂತಿದೆ.
ಕಲ್ಲುಗಳನ್ನು ಒಂದರ ಪಕ್ಕ ಒಂದನ್ನು ಜೋಡಿಸಿ ಕಮಾನು ನಿರ್ಮಿಸಿರುವುದು ಈ ಸೇತುವೆಯ ವೈಶಿಷ್ಟ್ಯ. ಈ ಮಾರ್ಗದ ಮೂಲಕ ಶಿವಮೊಗ್ಗಕ್ಕೆ 28 ಕಿಲೊಮೀಟರ್ ದೂರ ಆಗುತ್ತಿತ್ತು. ಈಗ 55 ಕಿಲೊಮೀಟರ್ ಸುತ್ತಿ ಬಳಸಿ ಹೋಗಬೇಕು. ಲಕ್ಕವಳ್ಳಿ ಹಾಗೂ ತರೀಕೆರೆಗೂ ಸುತ್ತಿ ಬಳಸಿಯೇ ಹೋಗಕು. ಈ ಸೇತುವೆಯ ಸಮೀಪ ಬಸ್ ನಿಲುಗಡೆ ಸ್ಥಳವಿತ್ತು ಎಂದು ಹಿರಿಯರು ನೆನಪಿಸಿಕೊಳ್ಳುತ್ತಾರೆ. ಸೇತುವೆಯ ಸುತ್ತ ಕಣ್ಣು ಹಾಯಿಸಿದರೆ ಹಿಂದಿನ ಕಾಲದ ಅಡಿಕೆ ತೋಟದ ಮುಂಡುಗಳು ಕಾಣುತ್ತವೆ. ಶಿವಮೊಗ್ಗಕ್ಕೆ ಹೋಗಲು ನಿರ್ಮಿಸಿದ್ದ ಜಲ್ಲಿರಸ್ತೆಯೂ ಇದೆ.
ಸೇತುವೆ ದಾಟಿ ಮುಂದೆ ಸಾಗಿದರೆ ಹಳೇದಾನಿವಾಸ, ದೇವಾಲೆಕೊಪ್ಪ, ಲಿಂಗಾಪುರ ಗ್ರಾಮದಲ್ಲಿ ವಾಸವಿದ್ದ ಜನವಸತಿ ಕುರುಹುಗಳು, ಕೋಟೆ ದಾನಿವಾಸ ದೇವಸ್ಥಾನ, ಗಣಪತಿ ದೇವಸ್ಥಾನ, ವೆಂಕಟರಮಣ ದೇವಸ್ಥಾನವಿದ್ದ ಸ್ಥಳ ಮನಸ್ಸಿಗೆ ಪುಳಕ ನೀಡುತ್ತವೆ.
ಭದ್ರಾ ಅಣೆಕಟ್ಟಿನ ನಿರ್ಮಾಣ ಅನೇಕ ಜಿಲ್ಲೆಗಳ ಕೃಷಿ ಹಾಗೂ ಕುಡಿಯುವ ನೀರಿನ ಸಮಸ್ಯೆ ನೀಗಿಸಿತು. ಆದರೆ ಮಲೆನಾಡಿನ ಭಾಗದ ಭವ್ಯ ಸಂಸ್ಕೃತಿ, ಫಲವತ್ತ ಜಮೀನು, ಹತ್ತಿರದ ರಸ್ತೆ ಮಾರ್ಗ, ರೈಲ್ವೆ ಸಾರಿಗೆ ಸೌಲಭ್ಯ, ಜನರ ಬದುಕು ಎಲ್ಲವನ್ನೂ ಮುಳುಗುವಂತೆ ಮಾಡಿತು ಎಂದು ಹಿರಿಯರು ಅಭಿಪ್ರಾಯಪಡುತ್ತಾರೆ.
ಬಾಲಕನಾಗಿದ್ದಾಗ ಕೋಟೆ ದಾನಿವಾಸದ ಜಾತ್ರೆಗೆ ಲಿಂಗಾಪುರ ಸೇತುವೆ ಮಾರ್ಗವಾಗಿ ಎತ್ತಿನಗಾಡಿಯಲ್ಲಿ ಹೋಗುತ್ತಿದ್ದೆವು. ತರೀಕೆರೆಗೆ ಪ್ರತಿ ಶುಕ್ರವಾರ ಸಂತೆಗೆ ಹೋಗಿ ಬರುತ್ತಿದ್ದೆವು. ಆಗ 2 ಖಾಸಗಿ ಬಸ್‌ಗಳು ಇದ್ದವು.–ಎಚ್.ಎಸ್.ಕೃಷ್ಣಯ್ಯ, ಹೊನ್ನೆಕೂಡಿಗೆ
ಭದ್ರಾ ಅಣೆಕಟ್ಟು ನಿರ್ಮಿಸದಿದ್ದರೆ ಸುಂದರ ಪರಿಸರದ ಮಧ್ಯೆ ಸಮೀಪದ ಮಾರ್ಗದ ಮೂಲಕ ಬೇರೆ ಊರಿಗೆ ಹೋಗುವ ಅವಕಾಶ ನಮ್ಮದಾಗುತ್ತಿತ್ತು. ತಾಲ್ಲೂಕು ಕೇಂದ್ರವು ಶಿವಮೊಗ್ಗಕ್ಕಿಂತಲೂ ಹೆಚ್ಚು ಅಭಿವೃದ್ಧಿ ಕಾಣುತ್ತಿತ್ತು.–ಸುನಿಲ್, ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.