ADVERTISEMENT

ಸಚಿವರ ವಿರುದ್ಧ ಕಪ್ಪು ಬಾವುಟ ಪ್ರದರ್ಶನದ ಎಚ್ಚರಿಕೆ

ಖಾಸಗಿ ವ್ಯಕ್ತಿಗಳಿಗೆ ಸರ್ಕಾರಿ ಜಮೀನು ಅಕ್ರಮ ಖಾತೆ ಮಾಡಿರುವ ಆರೋಪ: ತನಿಖೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 14:00 IST
Last Updated 24 ಜುಲೈ 2024, 14:00 IST

ಚಿಕ್ಕಮಗಳೂರು: ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಅಧಿಕಾರಿಗಳು ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದು, ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಆ. 15ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು ಎಂದು ದಲಿತ ಸಂಘಟನೆಗಳ ಒಕ್ಕೂಟ ಎಚ್ಚರಿಸಿದೆ.

ಜಂಟಿ ಸುದ್ದಿಗೋಷ್ಠಿ ನಡೆಸಿದ ದಲಿತ ಸಂಘಟನೆಗಳ ಮುಖಂಡರಾದ ಮರ್ಲೆ ಅಣ್ಣಯ್ಯ, ದಂಟರಮಕ್ಕಿ ಶ್ರೀನಿವಾಸ್, ಹುಣಸೇಮಕ್ಕಿ ಲಕ್ಷ್ಮಣ್, ಹೊನ್ನಪ್ಪ, ಬಿ.ಎಂ.ರಘು, ಬಾಲಕೃಷ್ಣ, ಸಂತೋಷ್ ಮತ್ತು ಇತರರು, ತಹಶೀಲ್ದಾರ್ ಮತ್ತು ಉಪವಿಭಾಗಾಧಿಕಾರಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ತಾಲ್ಲೂಕಿನ ಕಸಬಾ ಹೋಬಳಿ ಗವನಹಳ್ಳಿ ಗ್ರಾಮದ ಸರ್ವೆ ನಂ.92ರಲ್ಲಿ ಕೆಲವು ದಲಿತ ಕುಟುಂಬಗಳಿಗೆ ಜಮೀನು ಮಂಜೂರಾಗಿತ್ತು. ಅದನ್ನು ಖರೀದಿಸಲು ಕ್ರಯ ಒಪ್ಪಂದ ಮಾಡಿಕೊಂಡಿರುವ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವವರು, ಪಕ್ಕದ ಜಮೀನನ್ನು ಬದಲಾವಣೆ ಮಾಡಿಕೊಂಡು ಸರ್ಕಾರಿ ಜಮೀನು ಕಬಳಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ದೂರಿದರು.

ADVERTISEMENT

‘‌ಅದಕ್ಕೆ ಅವಕಾಶ ನೀಡದಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಳೆದ ವರ್ಷ ಇದೇ ಸಂದರ್ಭದಲ್ಲಿ ಮನವಿ ಸಲ್ಲಿಸಲಾಗಿತ್ತು. ಆದರೆ, ಸಚಿವರು ಜಮೀನು ಕಬಳಿಕೆ ಯತ್ನ ತಡೆಯಲಿಲ್ಲ. ನಮ್ಮ ಮನವಿಗೆ ಜಿಲ್ಲಾಧಿಕಾರಿ ಕೂಡ ಸ್ಪಂದಿಸಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕ್ರಯಪತ್ರ ಒಪ್ಪಂದ ಮಾಡಿಕೊಂಡಿರುವ ರಿಯಲ್‍ ಎಸ್ಟೇಟ್ ವ್ಯವಹಾರ ನಡೆಸುವ ವ್ಯಕ್ತಿಗಳು ಅಕ್ರಮವಾಗಿ ಖಾತೆ ಮಾಡಿಸಿಕೊಂಡಿದ್ದಾರೆ. ತಹಶೀಲ್ದಾರ್ ಮತ್ತು ಎಡಿಎಲ್‍ಆರ್ ಅವರು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ವ್ಯಕ್ತಿಗಳಿಗೆ ಅನುಕೂಲ ಮಾಡಿದಂತೆ ಕಾಣುತ್ತಿದೆ. ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಅಕ್ರಮ ಖಾತೆ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.