ಚಿಕ್ಕಮಗಳೂರು: ’ತಾಲ್ಲೂಕಿನ ಅತ್ತಿಗುಂಡಿ, ಮಹಲ್ ಗ್ರಾಮದ ದಲಿತರ ಮೇಲೆ ಕೆಲವು ಮುಸ್ಲಿಂ ಯುವಕರಿಂದ ನಡೆಯುತ್ತಿರುವ ದೌರ್ಜನ್ಯ ತಡೆಯಬೇಕು‘ ಎಂದು ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಜಿಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಮುಖಂಡ ಮಂಜು ಕೂದುವಳ್ಳಿ, ‘ಅತ್ತಿಗುಂಡಿಯಲ್ಲಿ 32 ಕುಟುಂಬ, ಮಹಲ್ ಗ್ರಾಮದಲ್ಲಿ 50ಕ್ಕೂ ಹೆಚ್ಚು ದಲಿತ ಕುಟುಂಬಗಳು ನೆಲೆಸಿವೆ. ಒಂದಷ್ಟು ಕುಟುಂಬಗಳು ತುಂಡು ಭೂಮಿ ಹೊಂದಿದ್ದರೆ ಬಹುತೇಕರು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಅದರಲ್ಲಿ ಕೆಲವು ಯುವಕರು ಸಾಲ ಮಾಡಿ ವಾಹನ ಖರೀದಿಸಿ ಪ್ರವಾಸಿಗರನ್ನು ಪ್ರವಾಸಿ ತಾಣಗಳಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಇಲ್ಲಿನ ಮುಸ್ಲಿಂ ಸಮುದಾಯದ ಕೆಲವರು ದಲಿತ ಯುವಕರು ಜೀಪ್ ಓಡಿಸದಂತೆ ಮತ್ತು ಅಂಗಡಿ ತೆರೆಯದಂತೆ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಹೇಳಿದರು.
ಇತ್ತಿಚೆಗೆ ದಲಿತ ಯುವಕ ಸತ್ಯಪ್ರಕಾಶ್ ಎಂಬುವರ ಮೇಲೆ ಹಲ್ಲೆ ಮಾಡಿದ್ದಾರೆ. ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಾಬಾಬುಡನ್ ಗಿರಿಗೆ ಹೋಗುವ ವೃತ್ತದ ಬಳಿ ದಲಿತರು ಅಂಗಡಿ ತೆರೆಯಲು ಅವಕಾಶ ಕಲ್ಪಿಸಬೇಕು. ಪ್ರವಾಸಿಗರನ್ನು ಕರೆದೊಯ್ಯಲು ದಲಿತ ಯುವಕರಿಗೆ ಅವಕಾಶ ದೊರಕಬೇಕು. ಈ ಗ್ರಾಮಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಹುಣಸೇಮಕ್ಕಿ ಲಕ್ಷ್ಮಣ, ಕೃಷ್ಣಪ್ರಸಾದ್, ಹೊನ್ನಪ್ಪ, ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.