ADVERTISEMENT

ಕೊಪ್ಪ | ಬಿಸಿಲ ತಾಪ: ಬತ್ತಿದ ನದಿ ನೀರು

ಕುಡಿಯುವ ನೀರಿಗೆ ತುಂಗಾ ನದಿಯೇ ಆಸರೆ, ಎರಡು ದಿನಕ್ಕೊಮ್ಮೆ ನೀರು ಪೂರೈಕೆ

​ಪ್ರಜಾವಾಣಿ ವಾರ್ತೆ
ರವಿಕುಮಾರ್ ಶೆಟ್ಟಿಹಡ್ಲು
Published 28 ಮಾರ್ಚ್ 2024, 6:46 IST
Last Updated 28 ಮಾರ್ಚ್ 2024, 6:46 IST
ಕೊಪ್ಪ ತಾಲ್ಲೂಕಿನ ಹರಿಹರಪುರದಲ್ಲಿ ಹರಿಯುತ್ತಿರುವ ತುಂಗಾ ನದಿಯಲ್ಲಿ ಹರಿವು ಕಡಿಮೆಯಾಗಿದೆ
ಕೊಪ್ಪ ತಾಲ್ಲೂಕಿನ ಹರಿಹರಪುರದಲ್ಲಿ ಹರಿಯುತ್ತಿರುವ ತುಂಗಾ ನದಿಯಲ್ಲಿ ಹರಿವು ಕಡಿಮೆಯಾಗಿದೆ   

ಕೊಪ್ಪ: ಪಟ್ಟಣಕ್ಕೆ ಹರಿಹರಪುರ ಸಮೀಪದ ನಾಗಲಾಪುರ ಬಳಿ ತುಂಗಾ ನದಿಯಿಂದ ಪ್ರತಿ 2 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಸಲಾಗುತ್ತಿದೆ.

ಪಟ್ಟಣ ವ್ಯಾಪ್ತಿಯಲ್ಲಿ 4,393 (2011ರ ವರದಿ) ಜನಸಂಖ್ಯೆ ಇದೆ. 1,461 ನಳ ಸಂಪರ್ಕಗಳಿದ್ದು, ಇವುಗಳಲ್ಲಿ 220 ವಾಣಿಜ್ಯ ಬಳಕೆಯ ನಳಗಳಾಗಿವೆ. ದಿನಕ್ಕೆ 8 ಎಂ.ಎಲ್.ಡಿ ನೀರು ಸರಬರಾಜು ಮಾಡಲಾಗುತ್ತಿದೆ.

ಪಟ್ಟಣದ ಜನರಿಗೆ ಕುಡಿಯುವ ನೀರನ್ನು ಪೂರೈಸಲು ತುಂಗಾ ನದಿ ಹಾಗೂ ಹಿರಿಕೆರೆಯನ್ನು ಅವಲಂಬಿಸಲಾಗಿದೆ. ಸದ್ಯಕ್ಕೆ ತುಂಗಾ ನದಿಯ ನೀರನ್ನು ಪಟ್ಟಣಕ್ಕೆ ಪೂರೈಸಲಾಗುತ್ತಿದೆ. ನದಿ ನೀರನ್ನು ಹಿರಿಕೆರೆ ಸಮೀಪವಿರುವ ನೀರು ಶುದ್ಧೀಕರಣ ಘಟಕಕ್ಕೆ ಪಂಪ್ ಮೂಲಕ ಪೂರೈಸಿ ಬಳಿಕ ಅಲ್ಲಿಂದ ಪಟ್ಟಣದಲ್ಲಿನ ನೀರಿನ ಟ್ಯಾಂಕ್‌ಗಳಿಗೆ ವರ್ಗಾಯಿಸಲಾಗುತ್ತದೆ.

ADVERTISEMENT

ಮೋಟಾರ್ ಹಾಳಾಗುವುದು, ಪೈಪ್ ಒಡೆಯುವುದು, ವಿದ್ಯುತ್ ಲೋ ವೋಲ್ಟೇಜ್ ಸಮಸ್ಯೆ ಇತ್ಯಾದಿಗಳು ಸಂಭವಿಸಿದರೆ, ಪಟ್ಟಣ ಸಮೀಪದಲ್ಲಿರುವ ಹಿರಿಕೆರೆಯಿಂದ ನೀರನ್ನು ಪೂರೈಸಲಾಗುತ್ತದೆ. ಆದರೆ ಈ ಬಾರಿಯೂ ಹಿರಿಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ತುಂಗಾ ನದಿಯಲ್ಲೂ ನೀರಿನ ಹರಿವು ಸಂಪೂರ್ಣ ಇಳಿಮುಖವಾಗಿದೆ. ನದಿಯಲ್ಲಿ ನೀರು ಲಭ್ಯವಾಗದಿದ್ದಲ್ಲಿ ಹಿರಿಕೆರೆ ನೀರನ್ನು ಅವಲಂಬಿಸಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ಪಟ್ಟಣಕ್ಕೆ ದಿನಪೂರ್ತಿ ನೀರು ಪೂರೈಸಬಹುದಾದ ಸಾಧ್ಯತೆ ಇರುವ ಶಾಶ್ವತ ಕುಡಿಯುವ ನೀರಿನ ಯೋಜನೆಯ ಕೆಸುವಿನ ಕೆರೆ ಅಭಿವೃದ್ಧಿ ಕಡೆಗಣಿಸಲಾಗಿದ್ದು, ಅನುದಾನ ಕೊರತೆ ಕಾರಣ ಹೇಳಿ ಕೆರೆಯ ಜಾಗದಲ್ಲಿ ಬಾವಿ ಕೊರೆಯಲು ಪಟ್ಟಣ ಪಂಚಾಯಿತಿ ಹೆಜ್ಜೆ ಇಟ್ಟಿದೆ ಎಂದು ಸ್ಥಳೀಯರೊಬ್ಬರು ತಿಳಿಸಿದರು.

ಮಳೆಗಾಲದವರೆಗೆ ನೀರಿನ ಕೊರತೆಯಾಗದು. ಸಮರ್ಪಕವಾಗಿ ನೀರು ಪೂರೈಸಲಾಗುತ್ತಿದೆ. ತುಂಗಾ ನದಿಯನ್ನು ಆಶ್ರಯಿಸಿರುವುದರಿಂದ ಸದ್ಯಕ್ಕೆ ನೀರಿನ ಸಮಸ್ಯೆ ಉದ್ಭವ ಆಗದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಚಂದ್ರಕಾಂತ್ ಪ್ರತಿಕ್ರಿಯಿಸಿದರು.

ಈವರೆಗೂ ನಮಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ. ಎರಡು ದಿನಕ್ಕೊಮ್ಮೆ ನಿಗದಿತ ಸಮಯದಲ್ಲಿ ನೀರು ಸಿಗುತ್ತಿದೆ
. ಗೀತಾ ಹೇಮಂತ್ ಸುಭಾಷ್ ರಸ್ತೆ ನಿವಾಸಿ
ನೀರಿನಲ್ಲಿ ಹೆಚ್ಚು ಕ್ಲೋರಿನ್ ಇರುತ್ತದೆ. ಹೀಗಾಗಿ ಬೇರೆಡೆಯಿಂದ ನೀರು ತರುತ್ತಿದ್ದೇವೆ. ವಿದ್ಯುತ್ ಸಮಸ್ಯೆಯಾದಾಗ ತುಂಗಾ ನದಿಯಿಂದ ನೀರು ಎತ್ತಲು ಸಿಗದಾಳಿನಲ್ಲಿ ಜನರೇಟರ್ ವ್ಯವಸ್ಥೆ ಇದ್ದರೂ ಬಳಕೆಯಾಗುತ್ತಿಲ್ಲ.
ಪಿ.ಎಸ್.ಅರವಿಂದ್ ಎಸ್.ವಿ.ಟಿ ರಸ್ತೆ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.