ADVERTISEMENT

ನರಸಿಂಹರಾಪುರ | ಸರ್ಕಾರಿ ಬಸ್ ಕೊರತೆ: ಉಪಯೋಗಕ್ಕೆ ಬಾರದ ‘ಶಕ್ತಿ’

ಕೆ.ವಿ.ನಾಗರಾಜ್
Published 19 ಜನವರಿ 2024, 7:13 IST
Last Updated 19 ಜನವರಿ 2024, 7:13 IST
ನರಸಿಂಹರಾಜಪುರದಿಂದ ಶಿವಮೊಗ್ಗಕ್ಕೆ ಹೋಗುವ ಕೆಎಸ್ ಆರ್ ಟಿಸಿ ಬಸ್
ನರಸಿಂಹರಾಜಪುರದಿಂದ ಶಿವಮೊಗ್ಗಕ್ಕೆ ಹೋಗುವ ಕೆಎಸ್ ಆರ್ ಟಿಸಿ ಬಸ್   

ನರಸಿಂಹರಾಪುರ: ಮಲೆನಾಡು ಭಾಗದ ಪ್ರಮುಖ ತಾಲ್ಲೂಕು ಕೇಂದ್ರವಾಗಿರುವ ನರಸಿಂಹರಾಜಪುರದಲ್ಲಿ ಸರ್ಕಾರಿ ಬಸ್ ಸೌಲಭ್ಯದ ಕೊರತೆಯಿದ್ದು, ಸರ್ಕಾರದ ಶಕ್ತಿ ಯೋಜನೆಯೂ ಸೇರಿದಂತೆ ಬಸ್‌ಗಳಲ್ಲಿ ಹಿರಿಯ ನಾಗರೀಕರು, ಶಾಲಾ ಕಾಲೇಜು ಮಕ್ಕಳಿಗೆ ಸಿಗುವ ರಿಯಾಯಿತಿ ಬಸ್ ಪಾಸ್ ಸೌಲಭ್ಯ ಲಭ್ಯವಾಗುತ್ತಿಲ್ಲ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

ತಾಲ್ಲೂಕು ಕೇಂದ್ರದ ಮೂಲಕ ಹಿಂದೆ ಖಾಸಗಿ ಬಸ್ ಸೇವೆ ಜೊತೆ ಹಲವಾರು ಸರ್ಕಾರಿ ಬಸ್ ಸೇವೆಗಳೂ ಲಭ್ಯವಾಗುತ್ತಿದ್ದವು. ಕೋವಿಡ್ ಸಂದರ್ಭದಲ್ಲಿ ಖಾಸಗಿ ಬಸ್ ಸೇವೆ ಸ್ಥಗಿತಗೊಂಡಿದ್ದರಿಂದ ಸರ್ಕಾರಿ ಬಸ್ ಸೇವೆಗೆ ಸಾರ್ವಜನಿಕರು ಅವಲಂಬಿಸಿದ್ದರು.

ಕೋವಿಡ್ ಪೂರ್ವದಲ್ಲಿ ಕೋಲಾರ ಜಿಲ್ಲೆ ಶ್ರೀನಿವಾಸಪುರ ಕೆಎಸ್‌ಆರ್‌ಟಿಸಿ ಡಿಪೊದಿಂದ ಬೆಂಗಳೂರಿಂದ ಶೃಂಗೇರಿಗೆ ಬಸ್ ಸೇವೆ ಆರಂಭಿಸಲಾಗಿತ್ತು. ಈ ಬಸ್ ಶೃಂಗೇರಿಯಿಂದ ಬೆಳಿಗ್ಗೆ ಹೊರಟು ಕೊಪ್ಪ, ಎನ್.ಆರ್.ಪುರ, ತರೀಕೆರೆ, ಕಡೂರು ಮಾರ್ಗವಾಗಿ ಬೆಂಗಳೂರು, ಕೋಲಾರಕ್ಕೆ ಹೋಗುತ್ತಿತ್ತು. ಇದರಿಂದ ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಹಾಗೂ ತರೀಕೆರೆ ಉಪವಿಭಾಗಾಧಿಕಾರಿಗಳ ಕಚೇರಿ ಹೋಗಿ ಬರಲು ಅನುಕೂಲವಾಗಿತ್ತು. ಪ್ರಸ್ತುತ ಈ ಬಸ್ ಸೇವೆ ಸ್ಥಗಿತಗೊಳಿಸಿರುವುದರಿಂದ ಸುತ್ತಿಬಳಸಿ ಹೋಗುವ ಸ್ಥಿತಿ ನಿರ್ಮಾಣವಾಗಿದೆ.

ADVERTISEMENT

ಈ ಹಿಂದೆ ಶಿವಮೊಗ್ಗದಿಂದ ಬೆಳಿಗ್ಗೆ ಹೋರಟು ಎನ್.ಆರ್.ಪುರ, ಬಾಳೆಹೊನ್ನೂರು ಮೂಲಕ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಬಸ್ ಸೇವೆ ಸ್ಥಗಿತಗೊಳಿಸಿರುವುದರಿಂದ ಮಲೆನಾಡಿನ ಭಾಗದಿಂದ ಧರ್ಮಸ್ಥಳಕ್ಕೆ ಹೋಗುವವರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಕೋವಿಡ್ ಸಂದರ್ಭದಲ್ಲಿ ತಾಲ್ಲೂಕು ಕೇಂದ್ರದಿಂದ ಜಿಲ್ಲಾ ಕೇಂದ್ರಕ್ಕೆ ಹೋಗಿ ಬರಲು ಅನುಕೂಲವಾಗುವಂತೆ ಬೇರೆ, ಬೇರೆ ಸಮಯಗಳಲ್ಲಿ ಬಸ್ ಸೇವೆ ಆರಂಭಿಸಲಾಗಿತ್ತು. ಇದನ್ನು ಸಹ ಪ್ರಸ್ತುತ ಸ್ಥಗಿತಗೊಳಿಸಿರುವುದರಿಂದ ಸಾರ್ವಜನಿಕರು ಜಿಲ್ಲಾ ಕೇಂದ್ರಕ್ಕೆ ಹೋಗಬೇಕಾದರೆ ಬಾಳೆಹೊನ್ನೂರಿಗೆ ಖಾಸಗಿ ಬಸ್ ನಲ್ಲಿ ಹೋಗಿ ಅಲ್ಲಿಂದ ಸರ್ಕಾರಿ ಬಸ್‌ನಲ್ಲಿ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಬಹಳ ಹಿಂದಿನಿಂದಲೂ ಹೈದರಬಾದ್‌ನಿಂದ ಶೃಂಗೇರಿ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಒದಗಿಸಲಾಗಿತ್ತು. ಅದನ್ನೂ ಸ್ಥಗಿತಗೊಳಿಸಲಾಗಿದೆ.

ಪ್ರಸ್ತುತ ಲಕ್ಕವಳ್ಳಿ, ತರೀಕೆರೆ, ಕಡೂರು, ಬೀರೂರು ಊರುಗಳಿಗೆ ಹೋಗಲು ಬೆಳಗ್ಗಿನ ಸಮಯದಲ್ಲಿ ಬಸ್ ಸೌಲಭ್ಯವಿಲ್ಲದೇ ಇರುವುದರಿಂದ ಶಿವಮೊಗ್ಗಕ್ಕೆ ಹೋಗಿ ಬೇರೆಡೆ ಹೋಗುವ ಸ್ಥಿತಿಯಿದೆ. ಶಿವಮೊಗ್ಗದಿಂದ ಎನ್.ಆರ್.ಪುರ ಮಾರ್ಗವಾಗಿ ಶೃಂಗೇರಿಗೆ ಬೆರಳೆಣಿಕೆಯ ಬಸ್ ಸೇವೆ ಒದಗಿಸುತ್ತಿದೆ. ಇತ್ತೀಚೆಗೆ ವಿಜಯಪುರದಿಂದ ಶಿವಮೊಗ್ಗ ಮಾರ್ಗವಾಗಿ ಶೃಂಗೇರಿಗೆ ಬಸ್ ಸೌಲಭ್ಯ ಒದಗಿಸಲಾಗಿತ್ತು. ಇದು ಕೇವಲ 15 ದಿನಗಳ ಮಾತ್ರ ಸೇವೆ ಒದಗಿಸಿತ್ತು. ಈ ಮಾರ್ಗದ ಬಸ್ ಸ್ಥಗಿತಗೊಳಿಸಲಾಗಿದೆ. ಬಹುತೇಕ ಸರ್ಕಾರಿ ಬಸ್ ಸೇವೆಗಳನ್ನು ಸ್ಥಗಿತಗೊಳಿಸುತ್ತಿರುವುದರಿಂದ ಸರ್ಕಾರದ ಶಕ್ತಿ ಯೋಜನೆಯ ಪ್ರಯೋಜನ ಈ ಭಾಗದ ಜನರಿಗೆ ಲಭಿಸುತ್ತಿಲ್ಲ.

ಶೃಂಗೇರಿಯಿಂದ ತರೀಕೆರೆ ಭಾಗಕ್ಕೆ ಬೆಳಿಗ್ಗೆ ಬಸ್ ಸೌಲಭ್ಯವಿಲ್ಲದಿರುವುದು ಗಮನಕ್ಕೆ ಬಂದಿದ್ದು ಹಿಂದೆ ಶ್ರೀನಿವಾಸ ಪುರದಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಸೇವೆ ಆರಂಭಿಸುವಂತೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಜಿಲ್ಲಾ ಕೇಂದ್ರದಿಂದಲೂ ಸರ್ಕಾರಿ ಬಸ್ ಸೇವೆ ಆರಂಭಿಸುವಂತೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ಶಾಸಕ ಟಿ.ಡಿ. ರಾಜೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಮಲೆನಾಡಿನ ಭಾಗದಲ್ಲಿನ ಗ್ರಾಮೀಣ ಜನರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕೆಎಸ್‌ಆರ್‌ಟಿಸಿ ಬಸ್ ಸೇವೆ ಆರಂಭಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್, ಶಾಸಕರಿಗೆ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಇದುವರೆಗೂ ಬಸ್ ಸೇವೆ ಆರಂಭಿಸಲು ಕ್ರಮಕೈಗೊಂಡಿಲ್ಲ ಎಂದು ಹಿರಿಯನಾಗರಿಕ ಎಚ್.ಎನ್. ರವಿಶಂಕರ್ ತಿಳಿಸಿದರು.

ಸರ್ಕಾರಿ ಬಸ್‌ಗಳಲ್ಲಿ ದರ ಕಡಿಮೆ ಇದ್ದು, ಖಾಸಗಿ ಬಸ್‌ಗಳಲ್ಲಿ ದರ ಹೆಚ್ಚಿರುವುದರಿಂದ ಸಾರ್ವಜನಿಕರಿಗೆ ಹೊರೆಯಾಗುತ್ತಿದೆ. ಕೂಡಲೇ ಸರ್ಕಾರಿ ಬಸ್ ಸೌಲಭ್ಯ ಆರಂಭಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.