ಮೂಡಿಗೆರೆ: ಪಟ್ಟಣದ ಡಿ.ಎಸ್ ಬಿಳೀಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಮಂಗಳವಾರ ಬೆಳಿಗ್ಗೆಯಿಂದಲೇ ಚುನಾವಣಾ ಕಾರ್ಯಗಳು ನಡೆದವು. ಚುನಾವಣಾಧಿಕಾರಿ ಎಚ್.ಡಿ ರಾಜೇಶ್ ನೇತೃತ್ವದಲ್ಲಿ ಮಸ್ಟರಿಂಗ್ ಕಾರ್ಯವನ್ನು ಸುಸೂತ್ರವಾಗಿ ನಡೆಸಲಾಯಿತು. ಚುನಾವಣಾ ಕಾರ್ಯಕ್ಕಾಗಿ ತರೀಕೆರೆ, ಕಡೂರು, ಚಿಕ್ಕಮಗಳೂರು, ಕೊಪ್ಪ, ಎನ್.ಆರ್ ಪುರ, ಶೃಂಗೇರಿ ಸೇರಿದಂತೆ ವಿವಿಧೆಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಮಸ್ಟರಿಂಗ್ ಕೇಂದ್ರಕ್ಕೆ ಬಂದ ಸಿಬ್ಬಂದಿಗೆ ಅಂತಿಮ ತರಬೇತಿ ನೀಡಿ,ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ನೀಡಲಾಯಿತು. ಮತದಾನದ ಬಳಿಕ ಇದೇ ಕೇಂದ್ರದಲ್ಲಿ ಮತಯಂತ್ರಗಳನ್ನು ಸ್ವೀಕರಿಸಿ, ಜಿಲ್ಲಾ ಕೇಂದ್ರದ ಭದ್ರತಾ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಪ್ರತಿ ಮತಗಟ್ಟೆಯಲ್ಲಿ ಮತಗಟ್ಟೆ ಚುನಾವಣೆ ಅಧಿಕಾರಿ, ಮತಗಟ್ಟೆ ಸಹಾಯಕ ಚುನಾವಣಾಧಿಕಾರಿ, ಇಬ್ಬರು ಮತಗಟ್ಟೆ ಅಧಿಕಾರಿ, ಪೊಲೀಸ್ ಸಿಬ್ಬಂದಿ ಸೇರಿದಂತೆ ಒಂದು ಮತಗಟ್ಟೆಯಲ್ಲಿ ಕನಿಷ್ಟ ಆರು ಮಂದಿ ಚುನಾವಣಾ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದು, ಸೂಕ್ಷ್ಮ ಮತಗಟ್ಟೆಗಳಲ್ಲಿ ಸುಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಚುನಾವಣೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ವಹಿಸಲು ಕೇಂದ್ರೀಯ ಭದ್ರತಾ ಮೀಸಲು ಪಡೆಯನ್ನು ಬಳಸಿಕೊಳ್ಳಲಾಗುತ್ತಿದೆ. ಅ
ಮಳೆ ಅಡ್ಡಿ: ಮಧ್ಯಾಹ್ನ 2 ಗಂಟೆ ಸುಮಾರಿಗೆ ಪಟ್ಟಣ ಸೇರಿದಂತೆ ವಿವಿಧೆಡೆ ಚದುರಿದಂತೆ ಮಳೆ ಸುರಿಯಿತು. ಮತಯಂತ್ರಗಳೊಂದಿಗೆ ಮತಗಟ್ಟೆಗೆ ತೆರಳಲು ಸಿದ್ಧರಾಗಿದ್ದ ಸಿಬ್ಬಂದಿಗೆ ಮಳೆಯು ಸ್ವಲ್ಪ ಪ್ರಮಾಣದಲ್ಲಿ ಅಡ್ಡಿಪಡಿಸಿತು. ಹತ್ತಿರದ ಮತಗಟ್ಟೆಗೆ ತೆರಳುವ ಸಿಬ್ಬಂದಿ ಮಳೆ ನಿಲ್ಲುವವರೆಗೂ ಕಾದು, ನಂತರ ತೆರಳಿದರು. ದೂರದ ಊರುಗಳ ಮತಗಟ್ಟೆಗೆ ತೆರಳುವ ಸಿಬ್ಬಂದಿ ಮಳೆಯ ನಡುವೆಯೇ ತೆರಳುತ್ತಿದ್ದರು. ಮತಯಂತ್ರಗಳಿಗೆ ಹಾನಿಯಾಗದಂತೆ ಪ್ಲಾಸ್ಟಿಕ್ ಹೊದಿಕೆ ಹಾಕಿ ಕಳುಹಿಸಲಾಗುತ್ತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.