ಚಿಕ್ಕಮಗಳೂರು: ಜಿಲ್ಲೆಯಲ್ಲಿರುವ ವಿದ್ಯುತ್ ಪರಿವರ್ತಕಗಳು ಮತ್ತು ಕಂಬಗಳ ಪೈಕಿ ಹಲವು ಅಪಾಯಕಾರಿ ಸ್ಥಿತಿಯಲ್ಲಿವೆ. ಕೈಗೆ ಎಟಕುವಷ್ಟು ಹತ್ತಿರದಲ್ಲೇ ಇರುವ ವಿದ್ಯುತ್ ಪರಿವರ್ತಕಗಳು ಅಪಾಯಕ್ಕೆ ಅಹ್ವಾನ ನೀಡುತ್ತಿದೆ.
ಮುಖ್ಯರಸ್ತೆ, ಗಲ್ಲಿ ರಸ್ತೆಗಳ ಅಲ್ಲಲ್ಲಿ ಅಳವಡಿಸಿರುವ ವಿದ್ಯುತ್ ಪರಿವರ್ತಕಗಳ ಬಳಿ ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಸಂಭವಿಸುವುದು ಖಚಿತ. ಸುರಕ್ಷತೆ ಇಲ್ಲದಿದ್ದರೂ ಈ ಸ್ಥಳಗಳಲ್ಲಿ ಅಪಾಯ ಲೆಕ್ಕಿಸದೆ ಜನ ಓಡಾಡುತ್ತಿದ್ದಾರೆ.
ನಗರದಲ್ಲಿ ಪ್ರಮುಖ ರಸ್ತೆಗಳಲ್ಲೇ ಈ ಸ್ಥಿತಿ ಇದೆ. ತೊಗರಿಹಂಕಲ್ ವೃತ್ತದಲ್ಲಿ ಎರಡು ವಿದ್ಯುತ್ ಪರಿವರ್ತಕಗಳು ಇದೇ ಸ್ಥಿತಿಯಲ್ಲಿವೆ. ಅಂಡೆ ಛತ್ರದ ಹಿಂಭಾಗದ ಕೊಲ್ಲಾಪುರದಮ್ಮ ರಸ್ತೆ, ಜೈನ್ ಟೆಂಪಲ್ ರಸ್ತೆಗಳಲ್ಲಿರುವ ವಿದ್ಯುತ್ ಪರಿವರ್ತಕ ಕಂಬಗಳು ಕೈಗೆಟಕುವ ಸಮೀಪದಲ್ಲೇ ಇವೆ.
ಹೌಸಿಂಗ್ ಬೋರ್ಡ್ ಮತ್ತು ಕಲ್ಯಾಣ ನಗರಗಳಲ್ಲಿ ವಿದ್ಯುತ್ ಪರಿವರ್ತಕದ ಕಂಬಗಳ ಮೇಲೆ ಗಿಡಗಳು ಬೆಳೆದುಕೊಂಡಿವೆ. ಈ ಸ್ಥಿತಿ ಜಿಲ್ಲೆಯ ಹಲವೆಡೆ ಇದೆ. ಕೈಗೆಟಕದಂತೆ ಮೇಲಕ್ಕೆ ಅಳವಡಿಸುವ ಕೆಲಸ ಪರಿಪೂರ್ಣವಾಗಿ ಆಗಬೇಕಿದೆ. ಇನ್ನು ಮಲೆನಾಡಿನಲ್ಲಿ ವಿದ್ಯುತ್ ತಂತಿಗಳು ಅಲ್ಲಲ್ಲಿ ಜೋತು ಬಿದ್ದಿವೆ. ಕೆಲವೆಡೆ ವಿದ್ಯುತ್ ಕಂಬ ಮತ್ತು ಪರಿವರ್ತಕ ಇರುವ ಸ್ಥಳದಲ್ಲಿ ಕಸ ಸುರಿದು ಗಿಡಗಂಟೆಗಳು ಬೆಳೆಯುವಂತಾಗಿದೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ವಿದ್ಯುತ್ ತಂತಿ ತುಳಿದು ತಾಯಿ ಮತ್ತು ಮಗು ಮೃತಪಟ್ಟರು. ಈ ರೀತಿಯ ಘಟನೆಗಳು ಸಂಭವಿಸುವ ಮುನ್ನ ಎಚ್ಚರ ವಹಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.
ವಾಲಿದ ಕಂಬಗಳು
ಕೊಪ್ಪ: ತಾಲ್ಲೂಕು ಕೇಂದ್ರದಲ್ಲಿ ಮೆಸ್ಕಾಂ ವಿಭಾಗೀಯ ಕಚೇರಿ ಇದೆ. ತಾಲ್ಲೂಕಿನ ಹಲವು ಕಡೆಗಳಲ್ಲಿ ಈ ಹಿಂದೆ ಅಡಿಕೆ ತೋಟ ಭತ್ತದ ಗದ್ದೆ ಮನೆಗಳ ಬಳಿ ಅಳವಡಿಸಿದ ಪರಿವರ್ತಕಗಳು ಕೆಲವೆಡೆ ವಾಲಿ ನಿಂತು ಅಪಾಯದ ಸ್ಥಿತಿಯಲ್ಲಿವೆ. ತುಳುವಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿ ಮಾಚಿಕೊಪ್ಪ ನೆಕ್ಕರಿಕೆ ಗ್ರಾಮಕ್ಕೆ ಕುಡಿಯುವ ನೀರಿನ ಪೂರೈಕೆ ಮೋಟಾರ್‌ಗೆ ವೋಲ್ಟೇಜ್ ಸಮಸ್ಯೆಯಿದ್ದು ಪ್ರತ್ಯೇಕ ಪರಿವರ್ತಕ ಅಳವಡಿಸಬೇಕಿದೆ. ರುದ್ರಾಕ್ಷಿಬೈಲು ಹೆಬ್ಬರಡಿ ಶೆಟ್ಟಿಹಡ್ಲು ಗ್ರಾಮದ ಬಳಿ ಅಪಾಯದ ಸ್ಥಿತಿಯಲ್ಲಿ ಪರಿವರ್ತಕಗಳಿದ್ದು ಅದನ್ನು ಸ್ಥಳಾಂತರಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ. ಕೊಪ್ಪ ಹರಿಹರಪುರ ವ್ಯಾಪ್ತಿಯಲ್ಲಿ ಪ್ರಸ್ತುತ 30 ಹೊಸ ಪರಿವರ್ತಕ ಅಳವಡಿಕೆಗೆ ಬೇಡಿಕೆ ಇದೆ. ವಿದ್ಯುತ್ ಪರಿವರ್ತಕ ಹಾಳಾದರೆ ಅದನ್ನು ದುರಸ್ತಿಪಡಿಸಲು ದುರಸ್ತಿ ಕೇಂದ್ರ ತೆರೆಯುವಂತೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಅಡ್ಡಾದಿಡ್ಡಿ ವಿದ್ಯುತ್ ಕಂಬಗಳು
ಕಡೂರು: ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿ ವಿದ್ಯುತ್ ಪರಿವರ್ತಕಗಳು ಅಪಾಯಕಾರಿ ಸ್ಥಿತಿಯಲ್ಲಿವೆ. ಪಟ್ಟಣದ ಜನನಿಬಿಡ ಪ್ರದೇಶವಾದ ಗಣಪತಿ ಪೆಂಡಾಲ್ ಆವರಣ ರಹಮತ್ ನಗರ ಮರವಂಜಿ ರಸ್ತೆ ಶನಿದೇವರ ದೇವಸ್ಥಾನದ ಕ್ರಾಸ್ ಬಳಿಯಿರುವ ವಿದ್ಯುತ್ ಪರಿವರ್ತಕಗಳು ನೆಲಮಟ್ಟಕ್ಕೆ ಹತ್ತಿರವಾಗಿವೆ. ಅಲ್ಲಿಂದ ಸಂಪರ್ಕ ಕಲ್ಪಿಸಿರುವ ವಿದ್ಯುತ್ ತಂತಿಗಳು ಅಡ್ಡಾದಿಡ್ಡಿಯಾಗಿವೆ. ಇನ್ನು ಕೆಲವೆಡೆ ಬೀದಿ ದೀಪಗಳ ತಂತಿಗಳು ಕೈಗೆ ಎಟಕುವಂತಿವೆ. ಗ್ರಾಮೀಣ ಭಾಗದಲ್ಲಿ ತೋಟಗಳ ನಡುವೆಯಿರುವ ಮತ್ತು ಗಂಗಾ ಕಲ್ಯಾಣ ಟ್ರಾನ್ಸ್‌ಫಾರ್ಮರ್‌ಗಳು ಸಾಮರ್ಥ್ಯಕ್ಕಿಂತ ಹೆಚ್ಚು ಸಂಪರ್ಕ ಅಕ್ರಮವಾಗಿ ಪಡೆಯಲಾಗಿದೆ. ಬಹುತೇಕ ಕಡೆ ಒಂದೇ ಕಂಬಕ್ಕೆ ಕಬ್ಬಿಣದ ಆ್ಯಂಗಲ್ ಕೊಟ್ಟು ಕೂರಿಸಿದ್ದು ಕೆಲವೆಡೆ ವಾಲಿಕೊಂಡಿವೆ. ಕೆಲದಿನಗಳ ಹಿಂದೆ ರೈತನೊಬ್ಬ ಮೃತಪಟ್ಟ ಘಟನೆಯೂ ಎಂ.ಕೋಡಿಹಳ್ಳಿಯಲ್ಲಿ ನಡೆದಿತ್ತು. ಎಂ.ಕೋಡಿಹಳ್ಳಿ ಮಚ್ಚೇರಿ ಸೂರಾಪುರ ಮಲ್ಲಿದೇವಿಹಳ್ಳಿ ತಂಗಲಿ ಕೆರೆ ಬಳಿ ಮುಂತಾದೆಡೆ ಟ್ರಾನ್ಸ್ ಫಾರ್ಮರ್‌ಗಳು ಅಪಾಯಕ್ಕೆ ಆಹ್ವಾನ ನೀಡುವಂತಿವೆ.
ರಸ್ತೆ ಬದಿಯಲ್ಲಿ ಬಾಯ್ದೆರೆದಿರುವ ಪರಿವರ್ತಕಗಳು
ಮೂಡಿಗೆರೆ: ಮೆಸ್ಕಾಂ ಕಚೇರಿಯಿಂದ ಕೂಗಳತೆ ದೂರದಲ್ಲಿಯೇ ರಸ್ತೆ ಬದಿಯಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮಾರ್‌ಗಳು ಬಾಯ್ದೆರೆದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಪಟ್ಟಣದ ಸುತ್ತಮುತ್ತ 25ಕ್ಕೂ ಹೆಚ್ಚು ವಿದ್ಯುತ್ ಟ್ರಾನ್ಸ್ ಫಾರ್ಮರ್‌ಗಳು ನಿರ್ವಹಣೆ ಇಲ್ಲದೆ ಸೊರಗುತ್ತಿದೆ. ಪಟ್ಟಣದ ಸನ್ನಿಧಿ ಲೇಔಟ್‌ನಲ್ಲಿ ರಸ್ತೆ ಬದಿಯಲ್ಲಿಯೇ ಟ್ರಾನ್ಸ್ ಫಾರ್ಮರ್‌ಗಳನ್ನು ಅಳವಡಿಸಲಾಗಿದ್ದು ಗಿಡ ಬೆಳೆದಿದ್ದರೂ ತೆರವುಗೊಳಿಸದಿರುವುದು ನಿರ್ವಹಣೆಯ ನಿರ್ಲಕ್ಷಕ್ಕೆ ಸಾಕ್ಷಿಯಾದಂತಿದೆ. ಮಳೆಗಾಲದಲ್ಲಿ ಪರಿವರ್ತಕಗಳಿಗೆ ಹಬ್ಬಿರುವ ಬೀಳುಗಳಲ್ಲಿ ವಿದ್ಯುತ್ ಪ್ರವಹಿಸುವ ಅಪಾಯವಿದೆ. ಡಿ.ಎಸ್. ಬಿಳಿಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಾಂಪೌಂಡಿಗೆ ಹೊಂದಿಕೊಂಡಂತೆ ಬಾಪುನಗರ ತಿರುವಿನಲ್ಲಿ ವಿದ್ಯುತ್ ಪರಿವರ್ತಕ ಮುಚ್ಚಿ ಹೋಗುವಷ್ಟು ಗಿಡಗಳು ಬೆಳೆದಿವೆ. ಮೆಸ್ಕಾಂ ಸಿಬ್ಬಂದಿ ಮಾತ್ರ ಸಂಬಂಧವಿಲ್ಲ ಎನ್ನುವಂತಿದ್ದಾರೆ. ‘ಖಾಸಗಿಯವರ ಜಮೀನಿನಲ್ಲಿ ವಿದ್ಯುತ್ ಪರಿವರ್ತಕ ಅಳವಡಿಸಲು ಹತ್ತಾರು ನಿಯಮಗಳನ್ನು ಹಾಕುತ್ತಾರೆ. ಸಾರ್ವಜನಿಕ ಸ್ಥಳದಲ್ಲಿ ಇಲಾಖೆಯಿಂದ ವಿದ್ಯುತ್ ಪರಿವರ್ತಕ ಅಳವಡಿಸಲು ನಿಯಮಗಳು ಲೆಕ್ಕಕ್ಕೇ ಇರುವುದಿಲ್ಲ. ಇಂತಹ ದ್ವಂಧ್ವ ನೀತಿಯನ್ನು ಕೈ ಬಿಡಬೇಕು’ ಎನ್ನುತ್ತಾರೆ ಬಾಪುನಗರ ಮಹೇಶ್.
ದೂರುಗಳಿದ್ದರೆ ತಕ್ಷಣ ಪರಿಶೀಲನೆ
ಬೀರೂರು: ಉಪ ವಿಭಾಗ ವ್ಯಾಪ್ತಿಯಲ್ಲಿ ವಿದ್ಯುತ್ ಪರಿವರ್ತಕಗಳು ಕೆಳಗಿರುವ ಪದ್ಧತಿಯೇ ಇಲ್ಲ ಎಂದು ಮೆಸ್ಕಾಂ ಅಧಿಕಾರಿಗಳು ಹೇಳುತ್ತಾರೆ. ದೂರುಗಳು ಬಂದ ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಸ್ಥಳಾಂತರಿಸಲಾಗುತ್ತಿದೆ. ಪ್ರತಿ ಮೂರು ತಿಂಗಳಿಗೆ ಒಮ್ಮೆ ನಡೆಸುವ ಜನ ಸಂಪರ್ಕ ಸಭೆಯಲ್ಲಿ ಟಿ.ಸಿ ಬದಲಾವಣೆ ಅಥವಾ ಅಳವಡಿಕೆ ಮನವಿಗಳು ಬರುತ್ತವೆ. ಕೂಡಲೇ ಸ್ಪಂದಿಸುವ ಕಾರ್ಯ ನಡೆಯುತ್ತಿದೆ. ಕಂಬ ಅಳವಡಿಸಿದ ಜಾಗದಲ್ಲಿ ಮಣ್ಣು ಸಡಿಲವಾಗಿ ಬಾಗಿದರೆ ಅಥವಾ ಎರಡು ಕಂಬಗಳ ನಡುವಿನ ಅಂತರ ಹೆಚ್ಚಾದರೆ ತಂತಿ ಇಳಿ ಬೀಳುವ ಸಾಧ್ಯತೆ ಇರುತ್ತದೆ. ಮಾಸಿಕ ಅಥವಾ ತ್ರೈಮಾಸಿಕ ನಿರ್ವಹಣೆಯ ಸಂದರ್ಭದಲ್ಲಿ ಪರಿಶೀಲಿಸಿ ಇವುಗಳನ್ನು ಸರಿಪಡಿಸುವುದು ನಿರಂತರವಾಗಿ ನಡೆಯುತ್ತಿದೆ ಎಂದು ಎಂಜಿನಿಯರ್ ರಮೇಶ್ ವಿವರಿಸಿದರು.
ನಿರ್ವಹಣೆ ಕೊರತೆ
ತರೀಕೆರೆ: ತಾಲ್ಲೂಕಿನ ಹಾದೀಕೆರೆ ಕೆಂಚಿಕೊಪ್ಪ ದುಗ್ಲಾಪುರ ಸೀತಾಪುರ ಕಾವಲ್ ಸುಣ್ಣದಹಳ್ಳಿ ಮಾರಿದಿಬ್ಬ ಸಂತವೇರಿ ಗ್ರಾಮಗಳಲ್ಲಿ ವಿದ್ಯುತ್ ಪರಿವರ್ತಕಗಳ ನಿರ್ವಹಣೆಯಾಗಿಲ್ಲ. ಕೆಲವೆಡೆ ವಿದ್ಯುತ್ ಹೊರಭಾಗ ಸುಟ್ಟು ಹೊಗಿ ಅಪಾಯಕ್ಕಾಗಿ ಕಾದಿವೆ. ಪರಿವರ್ತಕಗಳ ಸುತ್ತ ಗಿಡಗೆಂಟೆಗಳ ಬೆಳೆದಿವೆ. ಮೇವಿಗಾಗಿ ಬರುವ ಜಾನುವಾರುಗಳಿಗೆ ವಿದ್ಯುತ್ ತಗುಲುವ ಸಾಧ್ಯತೆ ಹೆಚ್ಚಾಗಿದೆ. ಅಪಾಯ ಸಂಭವಿಸುವ ಮುನ್ನವೇ ಇಲಾಖೆಯವರು ವಿದ್ಯುತ್ ಪರಿವರ್ತಕಗಳ ಸುತ್ತ ನಿರ್ವಹಣೆ ಮಾಡಬೇಕು ಎನ್ನುತ್ತಾರೆ ದುಗ್ಲಾಪುರ ಗ್ರಾಮದ ಚೇತನ್.
ಪ್ರಜಾವಾಣಿ ತಂಡ: ವಿಜಯಕುಮಾರ್ ಎಸ್.ಕೆ., ಬಾಲು ಮಚ್ಚೇರಿ, ಎಸ್.ಸೋಮಶೇಖರ್, ರವಿಕುಮಾರ್ ಶೆಟ್ಟಿಹಡ್ಲು, ಎಚ್.ಎಂ.ರಾಜಶೇಖರಯ್ಯ, ರವಿ ಕೆಳಂಗಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.