ಚಿಕ್ಕಮಗಳೂರು: ‘ನಮ್ಮ ಕುಟುಂಬ ಅಥವಾ ನಮ್ಮ ಕುಟುಂಬದ ಪಾಲುದಾರಿಕೆ ಇರುವ ಕಂಪನಿಗೆ ಸೇರಿದ ಎಸ್ಟೇಟ್‌ಗಳಲ್ಲಿ ಸರ್ಕಾರದ ಜಾಗ ಒತ್ತುವರಿ ಮಾಡಿದ್ದರೆ ಜಂಟಿ ಸರ್ವೆ ನಡೆಸಿ ತೆರವುಗೊಳಿಸಲು ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
‘ಚಿಕ್ಕಮಗಳೂರು ಜಿಲ್ಲೆಯ ಮಸ್ಕಲಿ ಬಳಿಯ ಎಸ್ಟೇಟ್ ಖರೀದಿಗೆ ಮುನ್ನವೇ ಸರ್ಕಾರಿ ಜಾಗ ಒತ್ತುವರಿಯಾಗಿತ್ತು. ಸರ್ಕಾರದ ಜಾಗ ಎಂದು ಗೊತ್ತಾದ ಬಳಿಕ ಬಿಟ್ಟುಕೊಟ್ಟಿದ್ದೇವೆ. ಈಗಿರುವ ಎಸ್ಟೇಟ್‌ಗಳಲ್ಲಿ ಒತ್ತುವರಿ ಇದೆಯೋ ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ. ಆದ್ದರಿಂದ ಜಂಟಿ ಸರ್ವೆ ಆಗಲಿ ಎನ್ನುತ್ತಿದ್ದೇನೆ’ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
‘ಮೀಸಲು ಅರಣ್ಯದಲ್ಲಿ ಒತ್ತುವರಿ ಮಾಡಿದ್ದರೆ ಅವುಗಳನ್ನು ಈಗ ಅರಣ್ಯ ಇಲಾಖೆ ತೆರವುಗೊಳಿಸುತ್ತಿದೆ. ಅದರಲ್ಲೂ ನ್ಯಾಯಾಲಯದಲ್ಲಿ ಇತ್ಯರ್ಥವಾದ ಪ್ರಕರಣಗಳು ಎಂಬುದನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರೇ ಸ್ಪಷ್ಟಪಡಿಸಿದ್ದಾರೆ. ತೆರವು ಮಾಡುವುದು ಅರಣ್ಯ ಇಲಾಖೆ ಅಧಿಕಾರಿಗಳ ಕರ್ತವ್ಯ ಕೂಡ. ಆದ್ದರಿಂದ ಯಾವುದೇ ಗೊಂದಲ ಇಲ್ಲ’ ಎಂದರು.
‘ಗ್ಯಾರಂಟಿ ಯೋಜನೆಗಳು ಪರಿಷ್ಕರಣೆ ವಿಷಯ ನಮ್ಮ ಇಲಾಖೆಯ ಮುಂದೆ ಇಲ್ಲ. ಸಚಿವ ಸಂಪುಟದ ಮುಂದೆಯೂ ಈ ರೀತಿಯ ಚರ್ಚೆಗಳು ನಡೆದಿಲ್ಲ. ಆದ್ದರಿಂದ ಗ್ಯಾರಂಟಿ ಯೋಜನೆಗಳು ಅಭಾದಿತ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.