ಕಡೂರು: ‘ನಾನು ಯಾವುದೇ ತಪ್ಪು ಮಾಡಿಲ್ಲ. ಮಾಡುವುದೂ ಇಲ್ಲ. ಆಪಾದನೆಯಿಂದ ಮುಕ್ತನಾಗಿ ಮತ್ತೆ ಗ್ರಾಮೀಣಾಭಿವೃದ್ಧಿ ಮಂತ್ರಿಯಾಗುತ್ತೇನೆ’ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಂತೋಷ್ ಪಾಟೀಲ ಆತ್ಮಹತ್ಯೆಗೂ ನನಗೂ ಸಂಬಂಧವಿಲ್ಲ. ಆದರೆ ನನಗೆ ಸ್ಥಾನಮಾನ ಕೊಟ್ಟ ಪಕ್ಷಕ್ಕೆ ಮುಜುಗರ ಆಗಬಾರದು ಎಂಬ ಉದ್ದೇಶದಿಂದ ರಾಜೀನಾಮೆ ನೀಡಲು ತೆರಳುತ್ತಿದ್ದೇನೆ. ಪಕ್ಷದ ಎಲ್ಲ ನಾಯಕರೂ ನನಗೆ ಬೆಂಬಲ ನೀಡುತ್ತಿದ್ದಾರೆ. ಯಾರ ಒತ್ತಡವೂ ಇಲ್ಲ’ ಎಂದರು.
‘ನನ್ನ ಮೇಲೆ ಬಂದಿರುವ ಆಪಾದನೆಯ ಹಿಂದೆ ಷಡ್ಯಂತ್ರವಿದೆ. ಈ ಹಿಂದೆ ಹಿಜಾಬ್ ನಂತರ ಹಲಾಲ್ ವಿಚಾರವೆತ್ತಿ ವಿವಾದ ಸೃಷ್ಟಿಸಿದವರೇ ಈ ವಿವಾದವನ್ನೂ ಸೃಷ್ಟಿಸಿರಬಹುದು. ನಮ್ಮ ವಿರೋಧ ಪಕ್ಷದವರ ಆಸಕ್ತಿಯೂ ಇದ್ದರೂ ಅಚ್ಚರಿಯಿಲ್ಲ. ಆದರೆ ಷಡ್ಯಂತ್ರ ನಡೆದಿದೆ ಎಂಬುದು ಮಾತ್ರ ಖಂಡಿತ. ಅದು ಹೊರಬರಬೇಕು. ಸಂತೋಷ್ ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಸತ್ಯ ತನಿಖೆಯ ನಂತರ ಹೊರಬರಲಿದೆ’ ಎಂದರು.
‘ವರ್ಕ್ ಆರ್ಡರ್ ನೀಡುವ ಮುನ್ನವೇ ಕಾಮಗಾರಿ ಮಾಡುವ ವ್ಯವಸ್ಥೆ ಬಂದರೆ ಸರಿಯಾದೀತೆ? ಸಿದ್ದರಾಮಯ್ಯ, ಕುಮಾರಸ್ವಾಮಿ ಅಥವಾ ಡಿ.ಕೆ.ಶಿವಕುಮಾರ್ ಕಾಲದಲ್ಲಿಯೂ ಇದೇ ರೀತಿ ಇತ್ತೇ? ಹಾಗೆ ಮಾಡಲು ಕರ್ನಾಟಕ ಸರ್ಕಾರವು ಅವರ ಅಪ್ಪನ ಮನೆ ಆಸ್ತಿಯೇ?’ ಎಂದು ಹರಿಹಾಯ್ದರು.
ಮುಂದಿನ ಚುನಾವಣೆಯಲ್ಲಿ ಹಿಂದುತ್ವ ಧೋರಣೆಯನ್ನು ಇಟ್ಟುಕೊಂಡು ಬಿಜೆಪಿ ಜನರ ಮುಂದೆ ಹೋದರೆ ಕಾಂಗ್ರೆಸ್ ಅಧಿಕೃತ ವಿರೋಧ ಪಕ್ಷವಾಗಿಯೂ ಉಳಿಯುವುದಿಲ್ಲ. ಬಿಜೆಪಿ 150 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಖಚಿತ. ನನ್ನ ಮುಂದಿನ ನಡೆ ಪಕ್ಷ ನಿರ್ಧರಿಸುತ್ತದೆ ಎಂದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಕೆ.ಬಿ.ಸೋಮೇಶ್, ಜಗನ್ನಾಥ್, ಹುಲ್ಲೇಹಳ್ಳಿ ಲಕ್ಷ್ಮಣ್, ಅರೇಕಲ್ ಪ್ರಕಾಶ್, ಭಧ್ರಿಸ್ವಾಮಿ, ನಾಗೇಂದ್ರ ಅಗ್ನಿ, ಹೋ. ರಾ. ಕೃಷ್ಣಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.