ಶೃಂಗೇರಿ: ‘ಡೀಮ್ಡ್ ಫಾರೆಸ್ಟ್ ವಿಚಾರವಾಗಿ ಅರಣ್ಯ ವ್ಯವಸ್ಥಾಪನಾ ಅಧಿಕಾರಿ ತಾಲ್ಲೂಕಿಗೆ ಬಂದು ರೈತರ ಅಹವಾಲು ಆಲಿಸಲು ದಿನ ನಿಗದಿ ಮಾಡಬೇಕು' ಎಂದು ರೈತ ಸಂಘದ ಅಧ್ಯಕ್ಷ ಕಾನುವಳ್ಳಿ ಚಂದ್ರಶೇಖರ್ ಒತ್ತಾಯಿಸಿದರು.
ಶೃಂಗೇರಿಯ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ರೈತ ಸಂಘವು ತಹಶೀಲ್ದಾರ್ ಜತೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.
‘ಕಂದಾಯ ಇಲಾಖೆಯ ಸರ್ಕಾರಿ ಜಮೀನುಗಳನ್ನು ಪ್ರಸ್ತಾವಿತ ಅರಣ್ಯ 4(1) ಎಂದು ಘೋಷಣೆ ಮಾಡಿದ್ದು, ಅರಣ್ಯ ವ್ಯವಸ್ಥಾಪನಾ ಅಧಿಕಾರಿ ತಕ್ಷಣ ತಾಲ್ಲೂಕಿಗೆ ಬಂದು ಪ್ರತಿ ಗ್ರಾಮದಲ್ಲಿ ರೈತರು ನೀಡಿರುವ ತಕರಾರು ಅರ್ಜಿಗಳನ್ನು ಪರಿಶೀಲಿಸಿ, ರೈತರು ಸಾಗುವಳಿ ಮಾಡಿರುವ ಸರ್ಕಾರಿ ಕಂದಾಯ ಜಮೀನುಗಳನ್ನು ರೈತರಿಗೆ ಬಿಟ್ಟುಕೊಡಬೇಕು ಎಂದು ಸುಮಾರು 10 ಬಾರಿ ಅರ್ಜಿ ನೀಡಿದರೂ ಸ್ಪಂದನೆ ಲಭಿಸಿಲ್ಲ. ಪ್ರಸ್ತಾವಿತ ಅರಣ್ಯ ಘೋಷಣೆಯಿಂದ ನಮೂನೆ 50, 53, 57 ಮತ್ತು 94ಸಿ ಮುಂತಾದ ಮಂಜೂರಾತಿಗಳಿಗೆ ತಡೆ ಉಂಟಾಗಿದೆ. ಅರಣ್ಯ ವ್ಯವಸ್ಥಾಪನಾ ಅಧಿಕಾರಿಯವರಿಗೆ ಕಡೂರಿಗೆ ಹೋಗಿ ಮನವಿ ಸಲ್ಲಿಸಿರುತ್ತೇವೆ. ಆದರೂ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.
ರೈತ ಸಂಘದ ಗೌರವ ಅಧ್ಯಕ್ಷ ಕೆಲವಳ್ಳಿ ಗುಂಡಪ್ಪ ಮಾತನಾಡಿ, `ರೈತರಿಗೆ ಪಹಣಿ ನೀಡಲು ಹಿಂದೆ ₹10 ಪಡೆಯುತ್ತಿದ್ದರು. ಈಗ ₹25 ಕ್ಕೆ ಹೆಚ್ಚಿಸಿರುವುದನ್ನು ಕಡಿಮೆ ಮಾಡಬೇಕು. ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದ್ದು, ಪರಿಹಾರ ಲಭಿಸಿಲ್ಲ. ವಾಣಿಜ್ಯ ಬ್ಯಾಂಕ್‍ಗಳು ಮತ್ತು ಸಹಕಾರಿ ಬ್ಯಾಂಕ್‍ಗಳು ಕಡ್ಡಾಯ ಸಾಲ ವಸೂಲಾತಿಯನ್ನು ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು.
ರೈತ ಸಂಘದ ಚೆನ್ನಕೇಶವ ಮೆಣಸೆ, ಚಂದ್ರಪ್ಪ ತೆಕ್ಕೂರು, ಪೂರ್ಣೇಶ್ ಉಳುವಳ್ಳಿ, ಯೋಗಪ್ಪ ನರ್ಕುಳಿ, ಆನಂತಯ್ಯ, ಶ್ರೀನಿವಾಸ್ ಹಾಲಂದೂರು, ಕೊಡತಲು ರಮೇಶ್ ಭಟ್, ಮೇಗಳಬೈಲ್ ಚಂದ್ರಶೇಖರ್, ರಾಘವೇಂದ್ರ ಎಂ.ಆರ್, ಕಲ್ಲಾಳಿ ನಾಗೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.