ADVERTISEMENT

ಮಲೆನಾಡಿನ ಗ್ರಾಹಕರಿಗೆ ಸಿಹಿಯಾದ ಒಣ ಮೆಣಸಿನಕಾಯಿ

ಹಾವೇರಿಯಿಂದ ಲಾರಿಗಳಲ್ಲಿ ತಂದು ಮಲೆನಾಡು ಭಾಗದಲ್ಲಿ ನೇರ ಮಾರಾಟ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2024, 14:18 IST
Last Updated 11 ಫೆಬ್ರುವರಿ 2024, 14:18 IST
ಮೂಡಿಗೆರೆ ಪಟ್ಟಣದ ಗಂಗನಮಕ್ಕಿಯಲ್ಲಿ ಉತ್ತರ ಕರ್ನಾಟಕದ ರೈತರು ಮೆಣಸಿಕಾಯಿ ಮಾರಾಟದಲ್ಲಿ ತೊಡಗಿರುವುದು
ಮೂಡಿಗೆರೆ ಪಟ್ಟಣದ ಗಂಗನಮಕ್ಕಿಯಲ್ಲಿ ಉತ್ತರ ಕರ್ನಾಟಕದ ರೈತರು ಮೆಣಸಿಕಾಯಿ ಮಾರಾಟದಲ್ಲಿ ತೊಡಗಿರುವುದು   

ಮೂಡಿಗೆರೆ: ತಾಲ್ಲೂಕಿನ ವಿವಿಧ ಭಾಗಗಳಿಗೆ ಉತ್ತರ ಕರ್ನಾಟಕದಿಂದ ಒಣ ಮೆಣಸಿನಕಾಯಿ ತಂದಿರುವ ರೈತರು ಅದನ್ನು ಮಾರುಕಟ್ಟೆ ದರಕ್ಕಿಂತಲೂ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದು, ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದಾರೆ.

ಹಾವೇರಿ ಭಾಗದ ಇಪತ್ತಕ್ಕೂ ಹೆಚ್ಚಿನ ರೈತರು ಲಾರಿಗಳಲ್ಲಿ ಒಣ ಮೆಣಸಿನ ಕಾಯಿಯನ್ನು ತಂದು ರಸ್ತೆ ಬದಿಗಳಲ್ಲಿ ರಾಶಿ ಹಾಕಿಕೊಂಡು ಮಾರಾಟ ಮಾಡುತ್ತಿದ್ದಾರೆ. ಪಟ್ಟಣದ ಗಂಗನಮಕ್ಕಿ, ಲಯನ್ಸ್ ವೃತ್ತ, ಬಿಳಗುಳ, ಹ್ಯಾಂಡ್ ಪೋಸ್ಟ್ ಸೇರಿದಂತೆ ಹೋಬಳಿ ಕೇಂದ್ರಗಳಲ್ಲೂ ಬದಿಯಲ್ಲಿ ಒಣ ಮೆಣಸಿನಕಾಯಿ ಮಾರಾಟ ಮಾಡಲಾಗುತ್ತಿದೆ.ರೈತರು ಬೈಕ್‌ಗಳಲ್ಲಿ ಹಳ್ಳಿಗಳಿಗೂ ತೆರಳಿ ಮೆಣಸಿನಕಾಯಿ ಮಾರಾಟ ಮಾಡುತ್ತಿದ್ದಾರೆ.

ಗುಂಟೂರು, ಬ್ಯಾಡಗಿ ಸೇರಿದಂತೆ ಮೂರ್ನಾಲ್ಕು ಬಗೆಯ ಮೆಣಸಿನ ಕಾಯಿಗಳನ್ನು ಮಾರಾಟಕ್ಕಿಟ್ಟಿದ್ದು, ಕೆ.ಜಿಗೆಕೆ ₹180 ರಿಂದ ₹230ರವರೆಗೆ ದರ ಇದೆ. ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಯಲ್ಲಿ ರೈತರು ಮೆಣಸಿ ಕಾಯಿಯನ್ನು ಮಾರಾಟ ಮಾಡುತ್ತಿರುವುದರಿಂದ ಇವರ ಬಳಿ ಮೆಣಸಿನ ಕಾಯಿಯನ್ನು ಕೊಂಡುಕೊಳ್ಳಲು ಜನರು ಮುಗಿಬಿದ್ದಿದ್ದಾರೆ.

ADVERTISEMENT

‘ಕಳೆದ ಬಾರಿ ಹದವಾಗಿ ಮಳೆಯಾಗಿದ್ದರಿಂದ ಬಹಳಷ್ಟು ಮಂದಿ ಮೆಣಸಿನಕಾಯಿಯನ್ನು ಬೆಳೆದು ಒಣಗಿಸಿದ್ದಾರೆ. ಸ್ಥಳೀಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಕೇಳುವುದರಿಂದ ರೈತರು ಗುಂಪುಗಳನ್ನು ಮಾಡಿಕೊಂಡು ಮಲೆನಾಡು ಭಾಗಕ್ಕೆ ಬಂದಿದ್ದೇವೆ. ಮೊದಲಿಗೆ ಒಂದು ಲಾರಿಯಷ್ಟು ತಂದಿದ್ದೇವು. ವ್ಯಾಪಾರ ಚೆನ್ನಾಗಿ ಆಗಿದ್ದರಿಂದ ಫೋನಿನಲ್ಲಿ ಮಾತಾಡಿ ಬೇರೆಯವರ ಮೆಣಸಿನಕಾಯಿಯನ್ನು ಸಹ ತರಿಸಿಕೊಂಡು ಮಾರಾಟ ಮಾಡುತ್ತಿದ್ದೇವೆ. ಕೆ.ಜಿಗೆ ₹160ರ ಮೇಲೆ ಬೆಲೆ ಸಿಕ್ಕರೆ ಲಾಭವಾಗುತ್ತದೆ. ನಾವು ಬಂದು ವ್ಯಾಪಾರ ಮಾಡಿದ ಮೇಲೆ, ನಮ್ಮ ಅಕ್ಕಪಕ್ಕದ ಹಳ್ಳಿಯವರು ಸಕಲೇಶಪುರ, ಬೇಲೂರು ಸೇರಿದಂತೆ ಬೇರೆ ಬೇರೆ ಭಾಗಗಳಿಗೆ ಹೋಗಿ ಮಾರಾಟ ಮಾಡುತ್ತಿದ್ದಾರೆ’ ಎನ್ನುತ್ತಾರೆ ವ್ಯಾಪಾರಕ್ಕಾಗಿ ಬಂದಿರುವ ರೈತ ಮೌನೇಶ್ ಬಡಿಗೇರ್.

‘ಮೆಣಸಿನಕಾಯಿ ಚೆನ್ನಾಗಿ ಒಣಗಿದೆ. ಬೆಲೆಯೂ ಕಡಿಮೆ ಇರುವುದರಿಂದ ಹಾಗೂ ರೈತರೇ ಮಾರಾಟ ಮಾಡುತ್ತಿರುವುದರಿಂದ ಖುಷಿಯಿಂದಲೇ ಕೊಂಡುಕೊಂಡಿದ್ದೇವೆ. ಬೇಸಿಗೆಯಲ್ಲೇ ಬಂದಿರುವುದರಿಂದ ಮೆಣಸಿನ ಪುಡಿಯನ್ನು ಮಾಡಿಟ್ಟುಕೊಂಡರೆ ಮಳೆಗಾಲಕ್ಕೂ ಆಗುತ್ತದೆ. ಆದ್ದರಿಂದ ಸ್ವಲ್ಪ ಹೆಚ್ಚಾಗಿಯೇ ತೆಗೆದುಕೊಂಡಿದ್ದೇವೆ’ ಎಂದು ಪಟ್ಟಣದ ನಿವಾಸಿ ಗೃಹಿಣಿ ರೇಖಾ ಅನಿಸಿಕೆ ಹಂಚಿಕೊಂಡರು.

ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಪುಡಿ ಕೆ.ಜಿಗೆ ₹500ರ ಗಡಿ ದಾಟಿದ್ದು, ರೈತರು ಮಾರುಕಟ್ಟೆ ಬೆಲೆಗಿಂತಲೂ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದು ಗ್ರಾಹಕರ ಪಾಲಿಗೆ ಮೆಣಸಿನಕಾಯಿ ಸಿಹಿಯಾದಂತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.