ADVERTISEMENT

ಆಲ್ದೂರು | ಕಾಫಿಗೆ ಕೊಳೆರೋಗ: ಬೆಳೆಗಾರರಲ್ಲಿ ಆತಂಕ

ಜೋಸೆಫ್ ಎಂ.ಆಲ್ದೂರು
Published 5 ಜುಲೈ 2024, 6:33 IST
Last Updated 5 ಜುಲೈ 2024, 6:33 IST
ಕೊಳೆರೋಗದ ಲಕ್ಷಣ ಕಾಣಿಸಿಕೊಂಡಿರುವ ಕಾಫಿ ಗಿಡ
ಕೊಳೆರೋಗದ ಲಕ್ಷಣ ಕಾಣಿಸಿಕೊಂಡಿರುವ ಕಾಫಿ ಗಿಡ   

ಆಲ್ದೂರು: ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸತತ ಮಳೆಯಿಂದಾಗಿ ತೇವಾಂಶ ಹೆಚ್ಚಾಗಿ ಕಾಫಿ ಬೆಳೆಗೆ ಕೊಳೆ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದು, ರೈತರು ಆತಂಕಗೊಂಡಿದ್ದಾರೆ. ಅರೇಬಿಕಾ ಮತ್ತು ರೋಬಸ್ಟ ತಳಿಯ ಕಾಫಿ ಗಿಡಗಳಲ್ಲಿ ಕೊಳೆರೋಗ ಕಾಣಿಸಿಕೊಂಡಿದ್ದು, ಆವತಿ ಮತ್ತು ಆಲ್ದೂರು ಹೋಬಳಿಗಳ ಗ್ರಾಮಗಳ ವ್ಯಾಪ್ತಿಯಲ್ಲಿ  ಇದು ವ್ಯಾಪಕವಾಗಿ ಹರಡುತ್ತಿದೆ.

‘ಕಳೆದ ಬಾರಿಯೂ ಹೋಬಳಿಯ ಹಲವು ಕಡೆ ಕೊಳೆರೋಗದ ಸಮಸ್ಯೆಯಿಂದ ಬೆಳೆಗಾರರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಈ ಬಾರಿ ಮುಂಜಾಗ್ರತೆ ಕೈಗೊಳ್ಳುವ ನಿಟ್ಟಿನಲ್ಲಿ ಕಾಫಿ ಮಂಡಳಿ ಮತ್ತು ಬಾಳೆಹೊನ್ನೂರು ಕಾಫಿ ಸಂಶೋಧನಾ ಸಂಸ್ಥೆಯು ಬೆಳೆಗಾರರ ಜತೆಗೆ ಕೊಳೆರೋಗ ನಿಯಂತ್ರಣದ ಕುರಿತು ಸಂವಾದವನ್ನು ಈಚೆಗೆ ಆಯೋಜಿಸಿತ್ತು. ಅದರಲ್ಲಿ ರೋಗ ನಿಯಂತ್ರಣಕ್ಕೆ ವಹಿಸಬೇಕಾದ ಕ್ರಮಗಳ ಬಗ್ಗೆ ವಿಜ್ಞಾನಿಗಳು ಮಾಹಿತಿ ಒದಗಿಸಿದ್ದರು’ ಎಂದು ಆವತಿ ಹೋಬಳಿ ಕಾಫಿ ಬೆಳೆಗಾರರ ಸಂಘದ ಗೌರವ ಕಾರ್ಯದರ್ಶಿ ಕೆರೆಮಕ್ಕಿ ಮಹೇಶ್ ಹೇಳಿದರು.

‘ಈ ರೀತಿ ಎಲ್ಲ ಹೋಬಳಿಗಳ ವ್ಯಾಪ್ತಿಯಲ್ಲಿ ಕಾಫಿ ಬೆಳೆಗಾರರ ಸಂಘಗಳು  ಕೊಳೆ ರೋಗ ನಿಯಂತ್ರಣ ಕಾರ್ಯಗಾರ ಆಯೋಜಿಸಿದರೆ  ಬೆಳಗಾರರಿಗೆ ಹೆಚ್ಚು ಪ್ರಯೋಜನವಾಗುತ್ತದೆ’ ಎನ್ನುವುದು ಮಹೇಶ್‌ ಅವರ ಅಭಿಪ್ರಾಯ.

ADVERTISEMENT

‘ಕಾಫಿ ಬೆಳೆಗಾರರಿಗೆ ಸಂಕಷ್ಟ  ಎದುರಾದಾಗ ರಾಜ್ಯ ಮತ್ತು ಕೇಂದ್ರ ಸರ್ಕಾರ  ಕೈಜೋಡಿಸಿ ಪರಿಹಾರ ನೀಡಿದರೆ ಬೆಳೆಗಾರರಿಗೆ ಅನುಕೂಲವಾಗುತ್ತದೆ’ ಎಂದು ಆಲ್ದೂರು ಹೋಬಳಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಸಿ ಸುರೇಶ್ ಹೇಳಿದರು.

ಉಷ್ಣಾಂಶ ಏರಿಕೆಯಿಂದ, ನೀರಾವರಿ ವ್ಯವಸ್ಥೆಯ ವೈಫಲ್ಯದಿಂದ, ಮಣ್ಣಿನ ಸಾರಹೀನತೆಯ ಕೊರತೆಯಿಂದ ರೋಗ ಹೆಚ್ಚಾಗುವ ಸಾಧ್ಯತೆಗಳಿವೆ. ಈಗಾಗಲೇ ರೋಗ ನಿಯಂತ್ರಣಕ್ಕಾಗಿ ವಿಜ್ಞಾನಿಗಳ ತಂಡದಿಂದ ಮಣ್ಣು ಪರೀಕ್ಷೆ, ರೋಗ ನಿಯಂತ್ರಣ ಕಾರ್ಯಗಾರ ಆಯೋಜಿಸಲು ಯೋಜನೆಗಳನ್ನು ರೂಪಿಸಲಾಗಿದೆ. ಶೀಘ್ರದಲ್ಲೇ ಮೂಡಿಗೆರೆಯಲ್ಲಿ ಕಾರ್ಯಗಾರ ನಡೆಯಲಿದೆ’ ಎಂದು ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ಎಂ.ಜೆ ಹೇಳಿದರು.

ಕೊಳೆ ರೋಗದ ಪರಿಣಾಮದ ತೀವ್ರತೆ ಆಧರಿಸಿ ಎರಡು ವರ್ಷಗಳ ಹಿಂದೆ ರಾಜ್ಯ ಸರ್ಕಾರ 2 ಎಕರೆಗೆಗೆ ಸೀಮಿತಗೊಳಿಸಿ ₹52 ಸಾವಿರ ಪರಿಹಾರ ಒದಗಿಸಿತ್ತ. ಈ ಹಿಂದಿನ ವರ್ಷ ಯಾವುದೇ ಪರಿಹಾರ ನೀಡಿಲ್ಲ.  ಪ್ರಸಕ್ತ ವರ್ಷದಲ್ಲಿ ಮಳೆ ಮುಂದುವರಿದರೆ ಕೊಳೆ ರೋಗ ಹೆಚ್ಚಬಹುದು ಎನ್ನುತ್ತಾರೆ ಬೆಳೆಗಾರರು

ಪ್ರಕೃತಿ ವಿಕೋಪ ಹವಾಮಾನ ವೈಪರಿತ್ಯದಿಂದ ಕಾಫಿಗಿಡಗಳು ನೆಲಕಚ್ಚಿ ಗರಿಷ್ಠ ಪ್ರಮಾಣದಲ್ಲಿ ಹಾನಿಯಾದಾಗ ಮಾತ್ರ ಕಂದಾಯ ಇಲಾಖೆಯಿಂದ ಪರಿಹಾರ ಒದಗಿಸಲು ಅವಕಾಶವಿದೆ
-ಸುಮಂತ, ತಹಶೀಲ್ದಾರ್
ಕೊಳೆರೋಗದ ಲಕ್ಷಣ ಕಾಣಿಸಿಕೊಂಡಿರುವ ಕಾಫಿ ಗಿಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.