ADVERTISEMENT

ಚಿಕ್ಕಮಗಳೂರು | ಸಾಂಕ್ರಾಮಿಕ ರೋಗದ ಆತಂಕ

ಖಾಲಿ ನಿವೇಶನಗಳಲ್ಲಿ ಅನೈರ್ಮಲ್ಯ; ಸೊಳ್ಳೆಗಳ ನಿಯಂತ್ರಣಕ್ಕೆ ನಗರಸಭೆಯಿಂದ ಧೂಮೀಕರಣ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 7:09 IST
Last Updated 10 ಜುಲೈ 2024, 7:09 IST

ಚಿಕ್ಕಮಗಳೂರಿನ ಹೊಸಮನೆ ಬಡಾವಣೆ ಬಳಿ ಕಾಲುವೆ ಸ್ವಚ್ಛಗೊಳಿಸದೆ ಕಸ ತುಂಬಿರುವುದು

ಚಿಕ್ಕಮಗಳೂರಿನ ಹೊಸಮನೆ ಬಡಾವಣೆ ಬಳಿ ಕಾಲುವೆ ಸ್ವಚ್ಛಗೊಳಿಸದೆ ಕಸ ತುಂಬಿರುವುದು

ಚಿಕ್ಕಮಗಳೂರು: ನಗರದ ಬಡಾವಣೆಗಳಲ್ಲಿರುವ ಬಹುತೇಕ ಖಾಲಿ ನಿವೇಶನಗಳು ಅನೈರ್ಮಲ್ಯದಿಂದ ಕೂಡಿವೆ. ಮಳೆಗಾಲ ಆರಂಭವಾಗಿದ್ದು ಸೊಳ್ಳೆಗಳ ಕಾಟ ಹೆಚ್ಚಾಗಿ ಸ್ಥಳೀಯರು ಹಾಗೂ ಸುತ್ತಮುತ್ತಲಿನ ನಿವಾಸಿಗಳಿಗೆ ಸಾಂಕ್ರಾಮಿಕ ರೋಗಗಳ ಭೀತಿ ಶುರುವಾಗಿದೆ.

ADVERTISEMENT

ನಗರದ 35 ವಾರ್ಡ್‌ಗಳಲ್ಲಿ ಸುಮಾರು 7,350 ಖಾಲಿ ನಿವೇಶನಗಳಿವೆ. ಈ ಪೈಕಿ ಶಂಕರಪುರ, ಗೌರಿಕಾಲುವೆ, ವಿಜಯಪುರ, ಶಾಂತಿನಗರ, ರಾಮನಹಳ್ಳಿ, ತಮಿಳು ಕಾಲೊನಿ, ಆಜಾದ್ ಪಾರ್ಕ್ ವೃತ್ತದ ಪ್ರಭು ಬೀದಿ, ಹೌಸಿಂಗ್ ಬೋರ್ಡ್‌ ಸೇರಿದಂತೆ ಹಲವೆಡೆ ಇರುವ ಖಾಲಿ ನಿವೇಶನಗಳಲ್ಲಿ ಸರಿಯಾದ ಸ್ವಚ್ಛತೆ ಇಲ್ಲದೇ ಪ್ಲಾಸ್ಟಿಕ್‌ ತ್ಯಾಜ್ಯದ ಜತೆಗೆ ಗಿಡ–ಗಂಟಿಗಳು ಬೆಳೆದು ನಿಂತಿವೆ. ಸೊಳ್ಳೆ, ಹುಳ–ಹುಪ್ಪಟೆ ಭಯದಿಂದ ಸ್ಥಳೀಯರು ರಾತ್ರಿ ಹೊತ್ತು ಜೀವ ಕೈಯಲ್ಲಿ ಹಿಡಿದು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯ ನಗರ ಪ್ರದೇಶದಲ್ಲಿಯೇ ಸೊಳ್ಳೆಗಳು ಹೆಚ್ಚಾಗಿ ಡೆಂಗಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಸೊಳ್ಳೆಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹಾಗೂ ನಗರಸಭೆ ಅಗತ್ಯ ಕ್ರಮ ವಹಿಸಿದೆ. ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಜಾಗೃತಿ ಮೂಡಿಸಿದರೂ ನಗರದ ಖಾಲಿ ನಿವೇಶನಗಳ ಮಾಲೀಕರು ಮಾತ್ರ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಇಲ್ಲಿನ ಅನೈರ್ಮಲ್ಯದಿಂದ ಸೊಳ್ಳೆಗಳು ಹೆಚ್ಚಾಗಿ ಮಕ್ಕಳಿಗೆ, ವೃದ್ಧರಿಗೆ ಮಲೇರಿಯ, ಡೆಂಗಿ ಆವರಿಸುವ ಆತಂಕ ಶುರುವಾಗಿದೆ.

‘ಸೊಳ್ಳೆಗಳ ನಿಯಂತ್ರಣಕ್ಕೆ ನಗರಸಭೆ ವತಿಯಿಂದ ವಾರ್ಡ್‌ಗಳಲ್ಲಿ ಧೂಮೀಕರಣ, ದ್ರಾವಣ ಸಿಂಪಡಿಸಲಾಗಿದೆ. ಖಾಲಿ ನಿವೇಶನಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಮಾಲೀಕರಿಗೆ ಪ್ರಕಟಣೆ ಮೂಲಕ ತಿಳಿಸಲಾಗಿದೆ. ಆದರೂ ಕೆಲವೆಡೆ ನಿವೇಶನಗಳಲ್ಲಿ ಅನೈಮರ್ಲ್ಯವಿದ್ದು, ನಗರಸಭೆ ವತಿಯಿಂದಲೇ ಸ್ವಚ್ಛಗೊಳಿಸಿ ಫಲಕ ಅಳವಡಿಸುವುದರ ಜತೆಗೆ ಆ ಜಾಗದ ಮಾಲೀಕರಿಗೆ ದಂಡ ವಿಧಿಸಲಾಗುವುದು’ ಎಂದು ನಗರಸಭೆ ಆಯುಕ್ತ ಬಿ.ಸಿ.ಬಸವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ಶಾಂತಿನಗರ, ಸಂತೆ ಮೈದಾನ ಬಳಿ ಕೆಲವೆಡೆ ಯುಜಿಡಿ ಸಂಪರ್ಕ ವ್ಯವಸ್ಥೆ ಇಲ್ಲ. ಹಾಗಾಗಿ ಇಲ್ಲಿನ ಕಸಾಯಿ ಖಾನೆಯ ಕಸ ಚರಂಡಿ ಸೇರುತ್ತಿದೆ. ಖಾಲಿ ನಿವೇಶನಗಳಲ್ಲಿಯೂ ಸ್ವಚ್ಛತೆ ಇಲ್ಲ ಸೊಳ್ಳೆ, ನೊಣಗಳ ಕಾಟದ ಜತೆಗೆ ಗಬ್ಬುವಾಸನೆಯಿಂದ ನಿವಾಸಿಗಳು ಬದುಕಬೇಕಿದೆ ಎಂದು ಶಾಂತಿನಗರ ನಿವಾಸಿ ವಿಶ್ವನಾಥ್‌ ಹೇಳಿದರು.

ಯುಜಿಡಿ ಸಂಪರ್ಕ ವ್ಯವಸ್ಥೆ ಇಲ್ಲ

ಶಾಂತಿನಗರ, ಸಂತೆ ಮೈದಾನ ಬಳಿ ಕೆಲವೆಡೆ ಯುಜಿಡಿ ಸಂಪರ್ಕ ವ್ಯವಸ್ಥೆ ಇಲ್ಲ. ಹಾಗಾಗಿ ಇಲ್ಲಿನ ಕಸಾಯಿ ಖಾನೆಯ ತ್ಯಾಜ್ಯ ಸಾಮಾನ್ಯ ಚರಂಡಿ ಸೇರುತ್ತಿದೆ. ಖಾಲಿ ನಿವೇಶನಗಳಲ್ಲಿಯೂ ಸ್ವಚ್ಛತೆ ಇಲ್ಲ ಸೊಳ್ಳೆ, ನೊಣಗಳ ಕಾಟದ ಜತೆಗೆ ಗಬ್ಬುವಾಸನೆಯಿಂದ ನಿವಾಸಿಗಳು ಬದುಕಬೇಕಿದೆ ಎಂದು ಶಾಂತಿನಗರ ನಿವಾಸಿ ವಿಶ್ವನಾಥ್‌ ಹೇಳಿದರು.

ಯುಜಿಡಿ ನಗರದ ಗಂಭೀರ ಸಮಸ್ಯೆಯಾಗಿದೆ. ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದ್ದು, ಮುಂದಿನ ವಾರದಿಂದ ಕಾಮಗಾರಿ ಆರಂಭವಾಗಲಿದೆ.
ಬಿ.ಸಿ. ಬಸವರಾಜು, ನಗರಸಭೆ ಆಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.