ಕಡೂರು: ವರ್ಗಾವಣೆಗೊಂಡಿದ್ದರಿಂದ ಬೇಸರಗೊಂಡು ಶಾಸಕ ಕೆ.ಎಸ್.ಆನಂದ್ ವಿರುದ್ಧ ವಾಟ್ಸ್‌ಆ್ಯಪ್ ಸ್ಟೇಟಸ್ ಹಾಕಿಕೊಂಡಿದ್ದ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಬಿ.ಎಸ್. ಲತಾ ಅವರನ್ನು ಅಮಾನತು ಮಾಡಲಾಗಿದೆ.
ಕಡೂರು ಠಾಣೆಯಿಂದ ತರೀಕೆರೆ ಠಾಣೆಗೆ ವರ್ಗಾವಣೆಯಾಗಿತ್ತು. ಇದಕ್ಕೆ ಶಾಸಕರೇ ಕಾರಣ ಎಂದು ಆರೋಪಿಸಿ ಅವರು, ‘ಕಡೂರು ಎಂಎಲ್‌ಎಗೆ ನನ್ನ ಕಡೆಯಿಂದ ಧಿಕ್ಕಾರವಿರಲಿ, ನನಗೆ ಏನಾದರೂ ತೊಂದರೆಯಾದರೆ ಅದಕ್ಕೆ ಎಂಎಲ್‌ಎ ಕಾರಣ’ ಎಂದು ಬರೆದುಕೊಂಡಿದ್ದರು.
ಈ ಸ್ಟೇಟಸ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಲತಾ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ವಾರದ ಹಿಂದೆ ಆದೇಶ ಹೊರಡಿಸಿದ್ದಾರೆ.
‘ಶಾಸಕರ ವಿರುದ್ಧ ವಾಟ್ಸ್‌ಆ್ಯಪ್ ಸ್ಟೇಟಸ್ ಹಾಕಿದ್ದ ಒಂದೇ ಕಾರಣಕ್ಕೆ ಅಮಾನತು ಮಾಡಿಲ್ಲ. ಬೇರೆ ಕಾರಣಗಳೂ ಇವೆ’ ಎಂದು ಉಮಾ ಪ್ರಶಾಂತ್ ಅವರು ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.
ಈ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿದ ಶಾಸಕ ಕೆ.ಎಸ್.ಆನಂದ್, ‘ಲತಾ ಅವರು ಮಾಡಿರುವ ಆಪಾದನೆ ಸಂಪೂರ್ಣ ನಿರಾಧಾರ ಮತ್ತು ನನ್ನ ತೇಜೋವಧೆಗೆ ಮಾಡಿರುವ ಷಡ್ಯಂತ್ರ, ವರ್ಗಾವಣೆಯಲ್ಲಿ ನನ್ನ ಪಾತ್ರವಿಲ್ಲ’ ಎಂದು ಹೇಳಿದರು.
ಕಡೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಲತಾ ಅವರು ಮೂರ್ನಾಲ್ಕು ದಿನಗಳ ಹಿಂದೆ ನನ್ನ ಮನೆಗೆ ಬಂದು ಏರಿದ ಧ್ವನಿಯಲ್ಲಿ ನನ್ನ ವರ್ಗಾವಣೆ ಏಕೆ ಆಗಿದೆ ಎಂದು ಕೇಳಿದ್ದರು. ನಿಮ್ಮ ಇಲಾಖೆಯ ನಿಯಮಗಳ ಪ್ರಕಾರ ವರ್ಗಾವಣೆಯಾಗಿದೆ. ಅದರಲ್ಲಿ ನನ್ನ ಪಾತ್ರವಿಲ್ಲ. ನಿಮ್ಮ ಎಸ್‌ಪಿ ಬಳಿ ಮಾತನಾಡಿ ಎಂದು ಸೌಜನ್ಯಯುತವಾಗಿಯೇ ಹೇಳಿ ಕಳುಹಿಸಿದ್ದೆ. ಆದರೂ ನನ್ನ ವಿರುದ್ಧ ವಾಟ್ಸ್‌ಆ್ಯಪ್ ಸ್ಟೇಟಸ್ ಹಾಕಿಕೊಂಡಿದ್ದರು’ ಎಂದು ಹೇಳಿದರು.
‘ಈ ಹಿಂದೆ ಹೆಲ್ಮೆಟ್ ರಹಿತ ಸವಾರರಿಗೆ ದಂಡ ಹಾಕುವ ವಿಚಾರದಲ್ಲಿ ನನಗೂ ಪೊಲೀಸರಿಗೂ ವಾಗ್ವಾದ ನಡೆದಿತ್ತು. ಅದೇ ಕಾರಣದಿಂದ ನಾನು ವರ್ಗಾವಣೆ ಮಾಡಿಸಿದ್ದೇನೆ ಎಂಬುದು ಸುಳ್ಳು. ನನ್ನ ವಿರುದ್ಧ ವಿನಾಕಾರಣ ಆರೋಪ ಮಾಡಿರುವ ಬಗ್ಗೆ ವಿಧಾನಸಭೆ ಸ್ಪೀಕರ್ ಗಮನಕ್ಕೆ ತರುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.